ಹಾವೇರಿ: ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ, ಅಸಭ್ಯ ವರ್ತನೆ: ಇನ್ಸ್‌ಪೆಕ್ಟರ್‌ ಅಮಾನತು!

ಮಗಳು ಕಾಣೆಯಾದ್ದಾಳೆ, ಹುಡುಕಿಕೊಡಿ ಎಂದು ದೂರು ನೀಡಿದ್ದ ಮಹಿಳೆಗೆ ವಾಟ್ಸಾಪ್‌ ವಿಡಿಯೋ ಕರೆ ಮಾಡಿ,  ಅಶ್ಲೀಲ ಸಂಭಾಷಣೆ ಮತ್ತು ದುರ್ನಡತೆ ತೋರಿದ್ದ ಆರೋಪದ ಮೇಲೆ ಹಾವೇರಿ ಮಹಿಳಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಚಿದಾನಂದ ಅವರನ್ನು ದಾವಣಗೆರೆ ಪೂರ್ವ ವಲಯದ ಐಜಿಪಿ ರವಿ ಎಸ್‌ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಮಹಿಳೆಯೊಬ್ಬರು ತಮ್ಮ ಮಗಳು ಕಾಣೆಯಾಗಿದ್ದಾರೆ ಎಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅವರಿಗೆ ವಿಡಿಯೊ ಕಾಲ್ ಮಾಡಿದ ಇನ್ಸ್‌ಪೆಕ್ಟರ್‌ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ. ಘಟನೆಗೆ ಸಂಬಂದಿಸಿವೆ ಎನ್ನಲಾದ ಆಡಿಯೊ ಮತ್ತು ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಈ ಬಗ್ಗೆ ರಾಣೆಬೆನ್ನೂರು ಡಿವೈಎಸ್‌ಪಿ ವಿಚಾರಣೆ ನಡೆಸಿದ್ದು, ಇನ್‌ಸ್ಪೆಕ್ಟರ್‌ ಚಿದಾನಂದ್‌ ಮಹಿಳೆಯೊಂದಿಗೆ ಅಸಭ್ಯ ಸಂಭಾಷಣೆ ಮತ್ತು ಸಂಜ್ಞೆಯೊಂದಿಗೆ ವ್ಯವಹರಿಸಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಚಿದಾನಂದ ಅವರ ವಿರುದ್ಧ ಈ ಹಿಂದೆಯೂ ಅನೇಕ ದೂರುಗಳು ಬಂದಿದ್ದವು. ಆ ಎಲ್ಲ ಪ್ರಕರಣಗಳನ್ನು ಅಮಾನತು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2015ರಲ್ಲಿ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಲು ಬಂದಿದ್ದ ಮಹಿಳೆಗೆ ಪದೇ ಪದೇ ಕರೆ ಮಾಡಿ, ಹಣದ ಆಮಿಷ ಮತ್ತು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

ಮದುವೆಯಾಗುವುದಾಗಿ ನಂಬಿಸಿದ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಮಗು ಜನಿಸಿದ ನಂತರ ಆಕೆಯನ್ನು ಬಿಟ್ಟು ಪರಾರಿಯಾಗಿದ್ದ ತನ್ನ ಪ್ರಿಯಕರನ ವಿರುದ್ದ 29 ವರ್ಷದ ಯುವತಿ ದೂರು ನೀಡಿದ್ದರು. ಆ ಯುವತಿ ಜೊತೆಗೂ ಇನ್ಸ್‌ಪೆಕ್ಟರ್‌ ಅಸಭ್ಯವಾಗಿ ವರ್ತಿಸಿದ್ದರು. ಇದೂ ಕೂಡ ಸಾಬೀತಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ಎಲ್ಲಾ ಆರೋಪಗಳಿಂದಾಗಿ ಚಿದಾನಂದ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಐಜಿಪಿ ಅವರಿಗೆ ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ಸಲ್ಲಿಸಿದ್ದರು.

ವರದಿಯನ್ನು ಐಜಿಪಿ ಪರಿಶೀಲನೆ ನಡೆಸಿದ್ದಾರೆ. ಠಾಣೆಗೆ ಬರುವ ನೊಂದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕರ್ತವ್ಯ ಮರೆತು, ಅಸಭ್ಯ ಮತ್ತು ಅಶ್ಲೀಲವಾಗಿ ವರ್ತಿಸಿ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ದುರ್ನಡತೆ ತೋರಿದ ಆರೋಪದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಐಜಿಪಿ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರದ ಬಗ್ಗೆ ಉದಾಸೀನದ ಹೇಳಿಕೆ: ಕ್ಷಮೆ ಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights