ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೇರಲಿದ್ದಾರೆ ಜಿಟಿ ದೇವೇಗೌಡ ಮತ್ತು ಅವರ ಪುತ್ರ ಹರೀಶ್‌!

ಕರ್ನಾಟಕದಲ್ಲಿ ಪಂಚಾಯತ್ ಚುನಾವಣೆಗಳು ಸಮೀಪದಲ್ಲಿವೆ. ಈ ಚುನಾವಣೆಗಳನ್ನು ವಿಧಾನಸಭೆ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಪಂಚಾಯತ್‌ ಚುನಾವಣೆಗಾಗಿ ರಾಜಕೀಯ ಧ್ರುವೀಕರಣಕ್ಕೆ ವೇದಿಕೆ ಸಜ್ಜಾಗಿದ್ದು, ಹಲವು ಪ್ರಮುಖ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಪಂಚಾಯತ್ ಚುನಾವಣೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ ಉತ್ಸುಕವಾಗಿದೆ. ಸಿದ್ದರಾಮಯ್ಯ ಅವರು ತಮ್ಮ ತವರು ನೆಲೆಯಾದ ಹಳೆ ಮೈಸೂರು ಭಾಗದಲ್ಲಿ ಅಧಿಕಾರ ಹಿಡಿಯಲು ಭಾರೀ ಕೆಲಸ ಆರಂಭಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ರಮುಖ ನಾಯಕರನ್ನು ತನ್ನ ತೆಕ್ಕೆಗೆ ಸೆಳೆಯುವುದು ಅಗತ್ಯವೆಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ಇಲ್ಲಿ ಜೆಡಿಎಸ್ ಅನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.

ಜೆಡಿಎಸ್‌ನಲ್ಲಿ ಅತೃಪ್ತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಅವರು ಮತ್ತು ಅವರ ಪುತ್ರ ಹರೀಶ್ ಜೊತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿಯಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಜಿಟಿ ದೇವೇಗೌಡ ಮತ್ತು ಅವರ ಪುತ್ರ ಇಬ್ಬರಿಗೂ ಅವಕಾಶ ನೀಡಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಿದ್ದರಿಲ್ಲ ಎಂದು ಹೇಳಲಾಗಿದೆ. ಆದರೆ, ಒಬ್ಬರು ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇನ್ನೊಬ್ಬರು ಮೈಸೂರು ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಬಹುದು ಎಂದು ಸೂಚಿಸಲಾಗಿದೆ. ಆದರೆ ದೇವೇಗೌಡ ಅವರು ಚಾಮುಂಡೇಶ್ವರಿ ಮತ್ತು ಹುಣಸೂರು ವಿಧಾನಸಭಾ ಸ್ಥಾನಗಳಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದು, ಎರಡೂ ಸ್ಥಾನಗಳಿಂದ ಗೆಲ್ಲಬಹುದು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹಿನ್ನಡೆಯಲ್ಲಿ ಕಾಂಗ್ರೆಸ್‌; ಮತ್ತೆ ಅಹಿಂದ ಪುನರುಜ್ಜೀವನಕ್ಕೆ ಮುಂದಾದ ಸಿದ್ದರಾಮಯ್ಯ!

ದೇವೇಗೌಡರು ತಮ್ಮ ರಾಜಕೀಯ ನಡೆ ಕುರಿತು ತಮ್ಮ ಅನುಯಾಯಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಪುತ್ರ ಮತ್ತು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ ಕಾಂಗ್ರೆಸ್ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಟಿ ದೇವೇಗೌಡರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬರುವುದಿಲ್ಲ. ಏಕೆಂದರೆ ಅವರು ಜೆಡಿಎಸ್ ಸದಸ್ಯರಾಗಿ ಉಳಿಯಲು ನಿರ್ಧರಿಸಿದ್ದಾರೆ ಮತ್ತು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗಿದೆ. ದೇವೇಗೌಡರು ತಮ್ಮ ಅನುಯಾಯಿಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಬಯಸಿದ್ದಾರೆ.

ಏತನ್ಮಧ್ಯೆ, ಕೆಲವು ಹಿರಿಯ ಜೆಡಿಎಸ್ ನಾಯಕರು ಜಿ ಟಿ ದೇವೇಗೌಡರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸುವಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಮನವಿ ಮಾಡಿದ್ದಾರೆ. ಆದರೆ. ಜಿಟಿ ದೇವೇಗೌಡ ಮತ್ತು ಮಾಜಿ ಸಚಿವ ಸಾ ರಾ ಮಹೇಶ್ ನಡುವಿನ ರಾಜಕೀಯ ಪೈಪೋಟಿಯಿಂದಾಗಿ ಆಂತರಿಕ ಕಚ್ಚಾಟದಿಂದ ಅವರು ಅಸಮಾಧಾನಗೊಂಡಿದ್ದಾರೆ.

2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಅಂದಿನ ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ದೇವೇಗೌಡರಿಗೆ ಆಗ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾರೀ ಬೆಂಬಲ ನೀಡಿದ್ದರು. ಆದರೆ, ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು. ಅಲ್ಲದೆ, ನಿವೃತ್ತ ಉಪ ಕುಲಪತಿ ರಂಗಪ್ಪ ಅವರನ್ನು ಸಲಹೆಗಾರರಾಗಿ ನೇಮಿಸಲಾಗಿತ್ತು. ಆದರೆ, ಜಿಟಿಡಿ, ತಮಗೆ ಸಹಕಾರ ಖಾತೆಗಾಗಿ ಬೇಡಿಕೆ ಇಟ್ಟಿದ್ದರು. ಅವರ ಮನವಿಯನ್ನು ಕುಮಾರಸ್ವಾಮಿ ತಿರಸ್ಕರಿಸಿದ್ದರು. ಹೀಗಾಗಿ ಬೇಸರಗೊಂಡ ದೇವೇಗೌಡರು ಹುಣಸೂರು ಉಪಚುನಾವಣೆಯ ಪ್ರಚಾರದಿಂದ ದೂರ ಉಳಿದಿದ್ದರು ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.

ಇದನ್ನೂ ಓದಿ: ಲಸಿಕೆ ಪಡೆಯದಿದ್ದರೆ ಪಡಿತರ ರದ್ದು; ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ತಹಶೀಲ್ದಾರ್‌, ಜಿಲ್ಲಾಧಿಕಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights