ಪ್ರತಿಭಟನೆಗೆ ಮಣಿದ ಸರ್ಕಾರ: 5 ಲಕ್ಷದವರೆಗಿನ ವಿದ್ಯುತ್ ಕಾಮಕಾರಿ ತುಂಡು ಗುತ್ತಿಗೆ ನೀಡಲು ಒಪ್ಪಿಗೆ!

5 ಲಕ್ಷದ ವರೆಗೆ ಎಸ್ಕಾಂ ಕಂಪನಿಗಳಲ್ಲಿ ವಿದ್ಯುತ್ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ನಾಳೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಲಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದಿಂದ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಚರ್ಚೆ ನಡೆಸಲಾಗುವುದು ನವೆಂಬರ್ 3 ರ ಬಳಿಕ ಸಂಘದ ಅಧ್ಯಕ್ಷರ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕು ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ಗುತ್ತಿಗೆದಾರರರ ರಾಜ್ಯಾಧ್ಯಕ್ಷ ಎಸ್.ಎಂ. ಕೃಷ್ಣ ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಒಟ್ಟು ಗೂಡಿಸಿ ಬೃಹತ್ ಮೊತ್ತದ 900 ಕೋಟಿ ಟೆಂಡರ್ ನೀಡುತ್ತಿರುವುದು ಸರಿಯಲ್ಲ. ಕೆ.ಇ.ಆರ್.ಸಿ 10ನೇ ತಿದ್ದುಪಡಿ ಐಎಫ್ ಸಿ ಶುಲ್ಕವನ್ನು ಸರಿಪಡಿಸಬೇಕು ಮತ್ತು ವಿದ್ಯುತ್ ಸರಬರಾಜು ಕಂಪನಿಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣದಿಂದ ರೈತರು ಮತ್ತು ಗುತ್ತಿಗೆದಾರರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಹೇಳಿದ ಅವರು ರಾಜ್ಯಾದ್ಯಂತ ರೈತರ ಪಂಪ್ ಸೆಟ್ ಗಳಿಗೆ ನೀರಾವರಿ ಸಂಪರ್ಕ ಕಲ್ಪಿಸಲು ಮೀನಮೇಷ ಎಣಿಸುತ್ತಿರುವುದು, ಗಂಗಾ ಕಲ್ಯಾಣ ಕುಡಿಯುವ ನೀರು ಯೋಜನೆಗಳಲ್ಲಿ ವಿದ್ಯುತ್ ಸಂಪರ್ಕವನ್ನು ಸಮಯಕ್ಕೆ ಸರಿಯಾಗಿ ನೀಡದಿರುವುದು ಸರಿಯಲ್ಲ. ವಿದ್ಯುತ್ ಸರಬರಾಜು ಕಂಪನಿಗಳಿಂದ ಗುತ್ತಿಗೆದಾರರಿಗೆ ನಿರಂತರ ಸಮಸ್ಯೆಗಳನ್ನು ಒಡ್ಡಲಾಗುತ್ತಿದೆ ಎಂದು ಹೇಳಿದರು.

ಸಾವಿರಕ್ಕೂ ಮೇಲ್ಪಟ್ಟ ಬೃಹತ್ ಗುತ್ತಿಗೆದಾರರು ಹಾಗೂ ಅವರನ್ನೇ ಅವಲಂಬಿಸಿರುವ ಕುಟುಂಬ ವರ್ಗದವರಿಗೆ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ವರ್ತನೆಯಿಂದ ಅನ್ಯಾಯವಾಗುತ್ತಿದೆ. ಹಿರಿಯ ಅಧಿಕಾರಿಗಳು ತಮಗೆ ಬೇಕಾದವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ವಿದ್ಯುತ್ ಜಾಲದ ಎಲ್ಲ ಕಾಮಗಾರಿಗಳನ್ನು ಒಗ್ಗೂಡಿ ಬಹುಕೋಟಿ ಟೆಂಡರ್ ನೀಡಲು ತಯಾರಿ ನಡೆಸಿದೆ ಇದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಸುರೇಶ್ ಅವರು ವಿವರಿಸಿದರು.

ಅತಿವೃಷ್ಠಿ ಅನಾವೃಷ್ಠಿ ಸಂಧರ್ಭದಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದಾಗ ಅಂದಾಜು ಪಟ್ಟಿ ಕಾರ್ಯಾದೇಶ ನೀಡದೆ ಸ್ಥಳೀಯ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡು ಕೋಟ್ಯಾಂತರ ರೂಪಾಯಿಗಳನ್ನು ಗುತ್ತಿಗೆದಾರರಿಗೆ ಪಾವತಿಸದಿರುವುದು ಹಾಗೂ ತುರ್ತು ಸಂದರ್ಭದಲ್ಲಿ ಸ್ಥಳೀಯ ಗುತ್ತಿಗೆದಾರರನ್ನು ಸೀಮಿತಗೊಳಿಸಕೊಂಡು ಬೃಹತ್ ಕಾಮಗಾರಿಗಳನ್ನು ಬಂಡವಾಳ ಶಾಹಿಗಳಿಗೆ ಹಿರಿಯ ಅಧಿಕಾರಿಗಳು ಟೆಂಡರ್ ಕಾಮಗಾರಿಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು

ಪ್ರಸ್ತುತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮ 3.2.3 ತಿದ್ದುಪಡಿ ಮಾಡಿರುವದರಿಂದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಕೆಳ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಪಾವತಿಸಲಾಗದಿರುವ ರೀತಿಯಲ್ಲಿ ಹೆಚ್ಚಿನ ಮೊತ್ತದ ಲೈನ್ ಮತ್ತು ಪ್ಲಾಂಟ್ ಹೆಸರಿನಲ್ಲಿ ಮೂಲಭೂತ ಸೌಕರ್ಯ ಶುಲ್ಕದ ಹಣ ಪಾವತಿಸಿಕೊಳ್ಳುತ್ತಿರುವುದರಿಂದ ಗ್ರಾಹಕರಿಗೆ ತೂಂದರೆಯಾಗಿದೆ ಇಂತಹ ಶೋಷಣೆ ನಿಲ್ಲಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ವಿ. ಶಾಂತಕುಮಾರ್, ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್ ಗುಡ್ಡದ್, ಪುರುಶೋತ್ತಮ್, ಸಂಘದ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ವಿ.ಶಾಂತಕುಮಾರ್, ಸದಸ್ಯರಾದ ರೇಣುಕಾಪ್ರಸಾದ್, ವಿಶ್ವನಾಥ್ ಸಂಘದ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ: ನಳಿನ್‌ ಒಬ್ಬ ಪೋಕರಿ, ಯಾರದ್ದೋ ಸಂತೋಷಕ್ಕೆ BJP ಅಧ್ಯಕ್ಷನಾಗಿದ್ದಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights