ಬೆಳಗಾವಿಯಲ್ಲಿ ಮೊಳಗಿತು ‘ಗೋ ಬ್ಯಾಕ್‌ ಅಮಿತ್‌ ಶಾ’ ಘೋಷಣೆ: ರೈತರ ಬಂಧನ

ರಾಜ್ಯಕ್ಕೆ ಬಂದಿರುವ ಗೃಹ ಸಚಿವ ಅಮಿತ್‌ ಶಾ ಇಂದು (ಭಾನುವಾರ) ಬೆಳಗಾವಿಗೆ ತೆರಳಿದ್ದಾರೆ. ಈ ವೇಳೆ ರೈತರು ಅಮಿತ್‌ ಶಾ ವಿರುದ್ಧ ಪ್ರತಿಭಟನೆ ನಡೆಸಿದ್ದು, ಗೋ ಬ್ಯಾಕ್‌ ಅಮಿತ್‌ ಶಾ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನೆ ನಡೆಸಿದ ರೈತರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ರೈತರ ಕೂಗಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಸಿದ್ದು, ಗೃಹ ಸಚಿವ ಅಮಿತ್ ಶಾ ಅವರು ಬಹಿರಂಗ ಚರ್ಚೆಗೆ ಬರಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಬೆಳ್ಳಂಬೆಳಿಗ್ಗೆಯೇ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ರೈತ ಮುಖಂಡರು, ಕೇಂದ್ರದ ರೈತ ವಿರೋಧಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಇಬ್ಬರು ರೈತರು ಅರೆಬೆತ್ತಲೆಯಾಗಿ ಉರುಳುಸೇವೆ ಮಾಡಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ್ದಾರೆ.

ಇದನ್ನೂ ಓದಿ: ಅಮಿತ್‌ ಶಾ ಭಾಗಿಯಾಗಿದ್ದ ಭದ್ರಾವತಿ RAF ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡವೇ ಇಲ್ಲ; ಹೆಚ್‌ಡಿಕೆ ಕಿಡಿ

‘ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಚಳವಳಿ ತೀವ್ರಗೊಂಡಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಸಲು ಕ್ರಮ ವಹಿಸಿಲ್ಲ. ರೈತರ ಭವಿಷ್ಯದ ವಿಷಯದಲ್ಲೂ ಸರ್ಕಾರ ಹಟಮಾರಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ವಿವಾದಿತ ಕಾಯ್ದೆಗಳ ಬಗ್ಗೆ ರೈತರಿಗೆ ಹಲವು ಅನುಮಾನ ಮತ್ತು ಗೊಂದಲಗಳಿವೆ. ಅವುಗಳನ್ನು ಅಮಿತ್ ಶಾ ಇಲ್ಲಿಗೆ ಬಂದು, ನಮ್ಮೊಂದಿಗೆ ಸಂವಾದ ನಡೆಸಿ ಬಗೆಹರಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಪ್ರತಿಭಟನೆ ವೇಳೆ ಕೆಲ ರೈತರು ಗೋ ಬ್ಯಾಕ್ ಅಮಿತ್ ಶಾ’ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ರಾಜ್ಯ ಸಂಚಾಲಕರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮುಖಂಡ ಪ್ರಕಾಶ ನಾಯ್ಕ ಮೊದಲಾದವರನ್ನು ಬಂಧಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರಿಗೆ ಅಮಿತ್ ಶಾ: ಭಿಕ್ಷುಕರು ಮತ್ತು ನಾಯಿಗಳ ಸೆರೆ; ವಿಧಾನಸೌಧ ಸಿಬ್ಬಂದಿಗೆ ಅರ್ಧ ದಿನ ರಜೆ: ಜನರ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights