ಸಾಕ್ಷ್ಯಾಚಿತ್ರವಾಗಿ ಮೂಡಿಬರುತ್ತಿದೆ ಗೌರಿ ಲಂಕೇಶರ ಕಿಚ್ಚಿನ ಬದುಕು, ಹೋರಾಟ, ಧೈರ್ಯ!

ಗೌರಿ ಲಂಕೇಶ್‌ – ಪತ್ರಕರ್ತೆ ಮಾತ್ರ ಆಗಿರಲಿಲ್ಲ, ಹೋರಾಟಗಾರ್ತಿಯೂ, ಪ್ರೀತಿ ತುಂಬಿದ ತಾಯಿಯೂ, ಒಂದು ಶಕ್ತಿಯೂ ಆಗಿದ್ದರು. ಅವರು ಕೋಮುವಾದಿಗಳ ಬುದ್ದಿಹೀನ ಮತೀಯ ದ್ವೇಷಕ್ಕೆ ಬಲಿಯಾದರು. ಅವರ ಬಗ್ಗೆ ಅವರ ತಂಗಿ ಕವಿತಾ ಲಂಕೇಶ್‌ ಸಾಕ್ಷ್ಯಾ ಚಿತ್ರವನ್ನು ರಚಿಸುತ್ತಿದ್ದಾರೆ. ಆ ಮೂಲಕ ಅವರು ತನ್ನ ಅಕ್ಕನ ಪ್ರೀತಿ, ಅಗಲಿಕೆಯ ನೋವನ್ನು ಹೇಳಲು ಮುಂದಾಗಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ಅವರು ಕೋಮುವಾದಿಗಳ ಸಂಚಿನಿಂದ ಹತ್ಯೆಗೀಡಾದ ತಮ್ಮ ಸಹೋದರಿ ಗೌರಿ ಲಂಕೇಶ್ ಅವರಿಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇದೀಗ, ಅವರು ತಮ್ಮ ಸಹೋದರಿ ಗೌರಿ ಅವರಲ್ಲಿದ್ದ ಕ್ರಿಯಾಶೀಲತೆ, ಒಲವು, ತ್ಯಾಗ, ಮತ್ತು ದೀನದಲಿತರ ಹಕ್ಕುಗಳಿಗಾಗಿ ತನ್ನ ಜೀವನವನ್ನೇ ಪಣಕ್ಕಿಟ್ಟ ಸ್ಥೈರ್ಯದ ಕುರಿತು ಸಾಕ್ಷ್ಯಚಿತ್ರವನ್ನು ಮಾಡುತ್ತಿದ್ದಾರೆ.

ಆಮ್ಸ್ಟರ್‌ಡ್ಯಾಮ್‌ನ ಫ್ರೀ ಪ್ರೆಸ್ ಅನ್‌ಲಿಮಿಟೆಡ್‌ ಸಂಸ್ಥೆಯು “ಕಳೆದ ವರ್ಷ, ತಮ್ಮ ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳ ಪ್ರಸ್ತಾಪಗಳಿಗೆ ಕರೆ ನೀಡಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು, ಆ ಪೈಕಿ ನಾಲ್ಕು ಚಿತ್ರಗಳನ್ನು ಫ್ರೀ ಪ್ರೆಸ್‌ ಆಯ್ಕೆ ಮಾಡಿದ್ದು, ಅದರಲ್ಲಿ ‘ಗೌರಿ’ ಅವರ ಕುರಿತ ತಮ್ಮ ಸಾಕ್ಷ್ಯಾಚಿತ್ರವೂ ಒಂದು” ಎಂದು ಕವಿತಾ ಲಂಕೇಶ್‌ ಹೇಳಿದ್ದಾರೆ.

ಫ್ರೀ ಪ್ರೆಸ್‌ಗೆ ಪ್ರಸ್ತಾವನೆಯನ್ನು ಸಲ್ಲಿಸುವಾಗಲೂ ತಮಗೆ ಮತ್ತೊಂದು ಆಘಾತ ಎದುರಾಗುವುದೇ ಎಂಬ ಪ್ರಶ್ನೆ ಮೂಡಿತ್ತು. ತನ್ನ ಪತ್ರಿಕಾ ವೃತ್ತಿಜೀವನ ಮತ್ತು ಹೋರಾಟಕ್ಕಾಗಿ ತಮ್ಮ ಜೀವವನ್ನೇ ಲೆಕ್ಕಿಸದೇ ದುಡಿದ ಗೌರಿಯನ್ನು ತೆರೆಯ ಮೇಲೆ ತರಬೇಕು ಎಂದು ಮುಂದುವರೆದೆ. ಫ್ರೀ ಪ್ರೆಸ್‌ ನನ್ನ ಪ್ರಸ್ತಾಪವನ್ನು ಸ್ವೀಕರಿಸಿದೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.

“ಗೌರಿ ನನಗೆ ಸಹೋದರಿ ಎಂಬುದಕ್ಕಿಂತಲೂ ಮಿಗಿಲಾಗಿ ಆಕೆಯ ಜೀವನವು ಆಕೆಯ ಬಗ್ಗೆ ಚಿತ್ರಮಾಡಬೇಕೆಂಬ ಕಠಿಣ ನಿರ್ಧಾರಕ್ಕೆ ಕಾರಣವಾಗಿತ್ತು. ಆಕೆ ನನ್ನ ಸ್ನೇಹಿತೆ, ಮಾರ್ಗದರ್ಶಕಿಯಾಗಿದ್ದಳು. ಆಕೆ ನನ್ನ ಹತ್ತಿರದಲ್ಲಿಲ್ಲ ಎಂದು ನಾನು ಇನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ. ಚಿತ್ರ ಮಾಡುವುದು ಎಂದರೆ, ಆ ಆಘಾತಕಾರಿ ನೆನಪುಗಳಿಗೆ ಹಿಂತಿರುಗುವುದು. ಆದರೆ, ನ್ಯಾಯ ಮತ್ತು ಜನರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವಾಗ ಯಾವುದೇ ಭಯವಿಲ್ಲದ ಆಕೆಯ ಕಥೆಯನ್ನು ನಾನು ಹೇಳಲೇಬೇಕು ಎಂದು ನಾನು ಭಾವಿಸಿದ್ದೇನೆ” ಎಂದು ಕವಿತಾ ಹೇಳಿದ್ದಾರೆ.

ಸಾಕ್ಷ್ಯಚಿತ್ರವು ಮುಕ್ತಾಯದ ಅಂತಿಮ ಹಂತದಲ್ಲಿದೆ. 2022ರ ಆರಂಭದಲ್ಲಿ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

2000 ರಲ್ಲಿ ನಮ್ಮ ತಂದೆಯ ಪ್ರಕಾಶನ ಲಂಕೇಶ್ ಪತ್ರಿಕೆಯ ಜವಾಬ್ದಾರಿಯನ್ನು ಗೌರಿ ವಹಿಸಿಕೊಂಡಿರು. ನಂತರದ ಅವರ ಜೀವನ ಮತ್ತು ಅವರ ಕ್ರಿಯಾಶೀಲತೆಯನ್ನು ಈ ಚಿತ್ರ ಸೆರೆಹಿಡಿಯುತ್ತದೆ. ಸಾಕ್ಷ್ಯಚಿತ್ರವು ನೆದರ್ಲ್ಯಾಂಡ್‌ನಲ್ಲಿ ನಡೆಯುವ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ.

ಸೆಪ್ಟೆಂಬರ್ 5, 2017 ರ ಸಂಜೆ, ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿ ಗೌರಿ ಹತ್ಯೆಯಾದರು. ಆಗಿನ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ಸ್ಥಾಪಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) 18 ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದೆ. ಆ ಆರೋಪಿಗಳು ಬಲಪಂಥೀಯ ಗುಂಪುಗಳಿಗೆ ನಿಷ್ಠರಾಗಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ  ವರದಿ ಮಾಡಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶರಂತೆ ನನ್ನನ್ನೂ ಕೊಲ್ಲಬಹುದು ಎನ್ನಿಸಿತ್ತು: ವಕೀಲೆ ದೀಪಿಕಾ ಸಿಂಗ್‌ ರಜಾವತ್

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights