ಗಣೇಶ ಚತುರ್ಥಿ ಆಚರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ : ಷರತ್ತುಗಳು ಅನ್ವಯ

ಕೊರೊನಾ ಸೋಂಕು ಹರಡುವ ಭೀತಿಯಿಂದ ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸುವ ಅನುಮಾನವಿತ್ತು. ಆದರೆ ಗಣೇಶ ಹಬ್ಬವನ್ನು ಆಚರಿಸಲು ಅನುಮತಿ ನೀಡಿ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ.

ಕೊರೊನಾದಿಂದಾಗಿ ಸಭೆ ಸಮಾರಂಭಗಳಿಗೆ ಕಡಿವಾಣ ಹೇರಲಾಗಿತ್ತು. ಆದರೆ ಜನ ಜೀವನ ನಿಧಾನ ಗತಿಯಲ್ಲಿ ಸಹಜ ಸ್ಥಿತಿಗೆ ತಲುಪುತ್ತಿದೆ. ಸಭೆ ಸಮಾರಂಭಗಳಿಗೆ ಷರತ್ತುಬದ್ಧ ಒಪ್ಪಿಗೆ ನೀಡಲಾಗುತ್ತಿದೆ. ಆದರೆ ಈ ವಾರಾಂತ್ಯದಲ್ಲಿ ಆಚರಿಸಲ್ಪಡುವ ಗಣೇಶನ ಹಬ್ಬದ ಆಚರಣೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ಇದಿಯೋ? ಇಲ್ವೋ ? ಎನ್ನುವ ಗೊಂದಲಕ್ಕೆ ತೆರೆ ಎಳೆದಿರುವ ಸರ್ಕಾರ, ಕೆಲಸವು ಷರತ್ತಿನೊಂದಿಗೆ ಆಚರಣೆಗೆ ಅವಕಾಶ ನೀಡಿದೆ.

ವಾರ್ಡ್​ಗೆ ಒಂದು ಹಾಗೂ ಗ್ರಾಮಕ್ಕೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ರೀತಿ ಪ್ರತಿಷ್ಠಾಪಿಸುವಂತೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಜನರ ಮನವೊಲಿಸಬೇಕು ಎಂದು ಎರಡನೇ ಪರಿಷ್ಕೃತ ಮಾರ್ಗಸೂಚಿಯಲ್ಲಿ ಸರ್ಕಾರ ಸೂಚಿಸಿದೆ. ಪ್ರತಿವರ್ಷ ವಿಜೃಂಭಣೆಯಿಂದ ಮನೆ-ಮನೆಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ, ದೇಗುಲಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿತ್ತು. ಈ ಬಾರಿ ಕೂಡ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಹಬ್ಬ ಆಚರಿಸಲು ಅವಕಾಶ ನೀಡಬೇಕೆಂಬ ಒತ್ತಾಯ ಹೆಚ್ಚಾಗಿದ್ದರಿಂದ ಅದಕ್ಕೆ ಅವಕಾಶ ನೀಡಲಾಗಿದೆ.

ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ಖಾಸಗಿ/ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸುವುದು. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಗಳಲ್ಲಿ ಎರಡು ಅಡಿ ಎತ್ತರ ಮೀರದಂತೆ ಪ್ರತಿಷ್ಠಾಪಿಸಬೇಕು.

ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನ್ಸಿಪಲ್ ಕಾರ್ಪೋರೇಷನ್ ಮತ್ತು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.ಗಣೇಶೋತ್ಸವ ಆಚರಿಸುವ ಸಾರ್ವಜನಿಕ ಪ್ರದೇಶಗಳಲ್ಲಿ ಏಕಕಾಲಕ್ಕೆ 20ಕ್ಕಿಂತ ಹೆಚ್ಚು ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು ಕಡ್ಡಾಯವಾಗಿದೆ.

ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಅಥವಾ ಸಂದರ್ಭಕ್ಕಾಗಲಿ ಮೆರವಣಿಗೆಗಳನ್ನು ಮಾಡುವಂತಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights