ಸುಗಂಧಿ ಬೇರು- 18: ಡಾ. ಜೆ.ಸಿ. ಕುಮಾರಪ್ಪ: ಶಾಶ್ವತ ಅರ್ಥಶಾಸ್ತ್ರದ ಹರಿಕಾರ

ಭಾರತದ ಹಳ್ಳಿಗಾಡು ಪ್ರದೇಶದ ಕಡು ಬಡಜನತೆಯ ಹಸಿವು, ನಿರುದ್ಯೋಗ, ಅನಾರೋಗ್ಯ ಹಾಗೂ ಅನಕ್ಷರತೆಯಂತಹ ಪಿಡುಗುಗಳ ನಿವಾರಣೆಗೆ ಶಾಶ್ವತ ಪರಿಹಾರಗಳನ್ನು ಶೋಧಿಸಿದ ಅಪ್ಪಟ ದೇಶೀಯ ಅರ್ಥಶಾಸ್ತ್ರಜ್ಞರಾಗಿದ್ದ ಡಾ. ಜೆ.ಸಿ. ಕುಮಾರಪ್ಪನವರ ನೆನಪು ಇಂದು ಬಹುತೇಕವಾಗಿ ಮಾಸಿ ಹೋಗಿದೆ. ಇಂದಿಗೂ ಭಾರತೀಯ ಅರ್ಥಶಾಸ್ತ್ರಜ್ಞರ ಬಗ್ಗೆ ಮಾತೆತ್ತಿದರೆ ಸಾಲುಸಾಲಾಗಿ ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರುಗಳನ್ನೇ ಹೆಸರಿಸಲಾಗುತ್ತದೆ. ಅವರ ಅಭಿವೃದ್ಧಿಯ ಮಾದರಿಗಳು ನಮ್ಮ ದೇಶಕ್ಕೆ ಎಷ್ಟರಮಟ್ಟಿಗೆ ಹೊಂದಿಕೆಯಾಗಬಲ್ಲವು ಎಂಬುದರ ವಿಮರ್ಶೆಯಿಲ್ಲದೆ ಒಪ್ಪಿಕೊಳ್ಳಲಾಗಿದೆ ಹಾಗೂ ಅವುಗಳನ್ನು ಇಲ್ಲಿ ಅನಾಯಾಸವಾಗಿ ಅಳವಡಿಸಲಾಗಿದೆ. ಇದರಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ಸಿಗುವುದಿರಲಿ ಸಮಸ್ಯೆಗಳೇ ಮತ್ತಷ್ಟು ಉಲ್ಬಣಿಸಿದವು. ಇದರ ಪರಿಣಾಮವೆಂದರೆ ಗ್ರಾಮೀಣ ಭಾರತವು ನಲುಗಿ ಹೋಗುವಂತಾಯಿತು. ಕುಮಾರಪ್ಪನವರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ, ಅವರ ನಿಷ್ಠಾವಂತ ಅನುಯಾಯಿಯಾಗಿ, ಗ್ರಾಮೀಣ ಭಾರತದ ಬಿಕ್ಕಟ್ಟುಗಳನ್ನು ಕಣ್ಣಾರೆ ಕಂಡವರಾಗಿದ್ದರು. ಮನುಷ್ಯನ ಜೀವನ ವಿಕಸನಶೀಲವಾಗುವ ಬಗೆಯನ್ನು ಕುರಿತು ಗಂಭೀರವಾಗಿ ಅಧ್ಯಯನ ಮಾಡಿದ್ದ ಕುಮಾರಪ್ಪನವರ ಕೃತಿಗಳು ಇಂದು ಹೆಚ್ಚು ಪ್ರಸ್ತುತವಾಗಿವೆ.

ಕುಮಾರಪ್ಪನವರು 1945ರಲ್ಲಿ ಜಬ್ಬಲಪುರದ ಜೈಲಿನಲ್ಲಿದ್ದಾಗ ‘Economy Of Permanance’ ಎಂಬ ಮಹತ್ವಪೂರ್ಣ ಪುಸ್ತಕವನ್ನು ಬರೆಯುತ್ತಾರೆ. ಈ ಪುಸ್ತಕವನ್ನು ಓದಿ ಮೆಚ್ಚಿಕೊಂಡ ಗಾಂಧೀಜಿಯವರು ಮುಂಬೈಗೆ ಹೋಗುವ ರೈಲಿನಲ್ಲಿಯೇ ಇದಕ್ಕೆ ಮುನ್ನುಡಿಯನ್ನು ಬರೆಯುತ್ತಾರೆ. ಈ ಪುಸ್ತಕವನ್ನು ಗಾಂಧಿವಾದಿಯಾಗಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮರವರು ‘ಶಾಶ್ವತ ಅರ್ಥಶಾಸ್ತ್ರ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ಪ್ರಕಾಶನದಿಂದ 1990ರಲ್ಲಿ ಪ್ರಕಟವಾಗಿದೆ. ಎಂಟು ವರ್ಷಗಳ ಕೆಳಗೆ ನಾನು ಕುಂದಾಪುರ ತಾಲೂಕಿನ ಹಳ್ಳಿಯೊಂದರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದಾಗ ಪುಸ್ತಕಗಳಿಗಾಗಿ ಆಗಾಗ ಉಡುಪಿಗೆ ಹೋಗುತ್ತಿದ್ದೆ. ಅಲ್ಲಿ ಜಿಲ್ಲಾ ಪೋಸ್ಟ್ ಆಫೀಸ್ ಪಕ್ಕದಲ್ಲಿದ್ದ ಒಂದು ಹಳೆಯ ಕಟ್ಟಡದಲ್ಲಿದ್ದ ‘ನವಭಾರತ ಪುಸ್ತಕ ಭಂಡಾರ’ ಮಳಿಗೆಯಿತ್ತು. ನಾನು ಉಡುಪಿಗೆ ಹೋದಾಗಲೆಲ್ಲ ಈ ಪುಸ್ತಕ ಮಳಿಗೆಗೆ ಭೇಟಿ ಕೊಡದೇ ಬರುತ್ತಿರಲಿಲ್ಲ. ಅಲ್ಲಿಂದ ಎಷ್ಟೋ ಅಪರೂಪದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿದ್ದೆ. ಒಂದು ದಿನ ಡಾ. ಜೆ.ಸಿ. ಕುಮಾರಪ್ಪನವರ ‘ಶಾಶ್ವತ ಅರ್ಥಶಾಸ್ತ್ರ’ ಪುಸ್ತಕವು ಧೂಳು ಹೊಡೆದುಕೊಂಡು ಕುಳಿತಿರುವುದು ನನ್ನ ಕಣ್ಣಿಗೆ ಬಿತ್ತು. ಈ ಪುಸ್ತಕ ನೋಡುವವರೆಗೂ ನನಗೆ ಕುಮಾರಪ್ಪನವರ ಬಗ್ಗೆ ಏನೂ ತಿಳಿದಿರಲಿಲ್ಲ.

ಕುಮಾರಪ್ಪನವರನ್ನು ಕನ್ನಡದ ಲೇಖಕರೆಂದೇ ಭಾವಿಸಿಕೊಂಡಿದ್ದ ನನಗೆ ಅಚ್ಚರಿಯಾದದ್ದು ಕುಮಾರಪ್ಪನವರ ಅಣ್ಣನಾದ ಜೆ.ಎಂ. ಕುಮಾರಪ್ಪ ಒಂದಿಷ್ಟು ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಜೊಸೆಫ್ ಕಾರ್ನಿಲಿಯಸ್ ಕುಮಾರಪ್ಪ (1892-1960) ತಮಿಳುನಾಡಿನ ತಂಜಾವೂರಿನಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಮುಂದೆ ಉನ್ನತ ವ್ಯಾಸಂಕ್ಕಾಗಿ ಇಂಗ್ಲೆಂಡಿಗೆ ಹೋದರು. ಕುಮಾರಪ್ಪನವರ ಅಣ್ಣಂದಿರಿಬ್ಬರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಕುಮಾರಪ್ಪನವರು ಇಂಗ್ಲೆಂಡಿನಲ್ಲಿ ಚಾಟರ‍್ಡ್ ಅಕೌಂಟೆನ್ಸಿಯಲ್ಲಿ ಪದವಿಯನ್ನು ಪಡೆದುಕೊಂಡು ಅಲ್ಲಿಯೇ ನೌಕರಿಗೆ ಸೇರಿಕೊಳ್ಳುತ್ತಾರೆ. ನಂತರದಲ್ಲಿ ಅಮೆರಿಕಾಗೆ ತೆರಳಿ ಸಿರಾಕ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ‘ಸಾರ್ವಜನಿಕ ಆಡಳಿತ’ದಲ್ಲಿ ಪದವಿ ಪಡೆದುಕೊಳ್ಳುತ್ತಾರೆ. ಬ್ರಿಟಿಶ್ ಸಾಮ್ರಾಜ್ಯಶಾಹಿ ಆಡಳಿತದಿಂದ ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಿದ್ದರಿಂದ ನಮ್ಮ ದೇಶದ ಬಡತನ ಹಾಗೂ ನಿರುದ್ಯೋಗದ ಪ್ರಮಾಣ ಹೆಚ್ಚಾಯಿತೆಂಬುದರ ಬಗ್ಗೆ ಆಳವಾದ ಅಧ್ಯಯನ ನಡೆಸಿ ‘Public Finance And Our Poverty’ (ಸಾರ್ವಜನಿಕ ಹಣಕಾಸು ವ್ಯವಸ್ಥೆ ಮತ್ತು ನಮ್ಮ ಬಡತನ) ಎಂಬ ಸಂಶೋಧನ ಪ್ರಬಂಧವನ್ನು ಬರೆದರು. ಅವರು ವಿದೇಶದಿಂದ ಮುಂಬಯಿಗೆ ಬಂದಾಗ ಅನೇಕ ಪ್ರತಿಷ್ಠಿತ ಹುದ್ದೆಗಳು ಅವರಿಗಾಗಿ ಕಾಯುತ್ತಿದ್ದವು. ಹಲವು ಕಾಲೇಜುಗಳಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದಲ್ಲದೆ ಅನೇಕ ಉದ್ಯಮಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.

ಪಶ್ಚಿಮದ ‘ಲಾಭ ದೃಷ್ಟಿಯೇ ಎಲ್ಲ ಅರ್ಥಶಾಸ್ತ್ರದ ಮೂಲ ಸಿದ್ಧಾಂತ’ ಎಂಬ ವಾದವನ್ನು ಕುಮಾರಪ್ಪನವರು ಪ್ರಬಲವಾಗಿ ವಿರೋಧಿಸಿದರು. ಮನುಷ್ಯರು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡು ಶೋಷಣೆ ಹಾಗೂ ಹಿಂಸೆಯಿಂದ ಶ್ರೀಮಂತಿಕೆ ಸಾಧಿಸುವ ಪ್ರಯತ್ನವನ್ನು ಘೋರವಾದ ಅಪರಾಧವೆಂದು ಹೇಳಿದರು. ಹಣದ ಮೌಲ್ಯದಿಂದಲೇ ಎಲ್ಲವನ್ನು ಅಳೆದಾಗ ಅಭಿವೃದ್ಧಿ ಏರುಪೇರಾಗುತ್ತದೆ ಹಾಗೂ ಜೀವನದ ಅವಶ್ಯಕತೆಗಳಿಗೆ ಗಮನ ತಪ್ಪುತ್ತದೆ. ಕಾಲ ದೇಶಗಳ ಪರಿವೆಯೇ ಇಲ್ಲದ ಹಣದ ವಹಿವಾಟು ಎಲ್ಲವನ್ನೂ ನಿರ್ಧರಿಸಿದಂತಾಗುತ್ತದೆ; ಇದರ ಪರಿಣಾಮವೆಂದರೆ ಹಿಂಸೆ ಹಾಗೂ ಸರ್ವನಾಶ. ಹಣದ ಬೆಲೆಗಳು ಹಾಗೂ ಅಳತೆಗಳು ಸ್ವಲ್ಪವಾದರೂ ಶಾಶ್ವತವಾಗಿರಬೇಕಾದರೆ ಅಶಾಶ್ವತನಾದ ಮನುಷ್ಯ ಅದರ ಅಳತೆಗೋಲು ಆಗಬಾರದು ಎಂಬುದು ಕುಮಾರಪ್ಪನವರ ಚಿಂತನೆಯಾಗಿದೆ.

ಯಂತ್ರಯುಗದಲ್ಲಿ ಗ್ರಾಮೀಣ ಗೃಹ ಕೈಗಾರಿಕೆಗಳು ಬದುಕತ್ತವೆಯೇ ಎನ್ನುವ ಪ್ರಶ್ನೆಯನ್ನು ಎತ್ತಿಕೊಳ್ಳುವ ಕುಮಾರಪ್ಪನವರು ಗೃಹ ಕೈಗಾರಿಕೆ ಎಂಬುದು ಕೇವಲ ಒಂದು ಉತ್ಪಾದನ ವಿಧಾನ ಅಥವಾ ಒಂದು ಆರ್ಥಿಕ ವಿಧಾನ ಮಾತ್ರ ಅಲ್ಲ ಎಂದಿದ್ದಾರೆ. ಅದೊಂದು ಆರ್ಥಿಕ ವಿಧಾನದ ಮುಖ್ಯ ಅಂಶವಾಗಿದೆ. ನಮಗೆ ಯಾವ ವಿಧಾನ ಇಷ್ಟವೆಂಬುದು ನಮ್ಮ ಧ್ಯೇಯಗಳನ್ನು ಅವಲಂಬಿಸಿದೆ. ಅದಕ್ಕೆ ನಮಗೆ ಜೀವನ ಮೌಲ್ಯಗಳು ಯಾವವು ಎಂಬುದೇ ಆಧಾರವಾಗಿದೆ. ಆದ್ದರಿಂದ ಕುಮಾರಪ್ಪನವರು, ಮೌಲ್ಯಗಳು ಹಾಗೂ ಬೆಲೆಗಟ್ಟುವ ರೀತಿ ಎರಡೂ ಮಾನವ ಜೀವನದ ಪ್ರಗತಿ ರಥವನ್ನು ಎಳೆಯುವ ಕುದುರೆಗಳೆಂದು ಕರೆದಿದ್ದಾರೆ. ಇವುಗಳೇ ನಮ್ಮ ಪಯಣದ ದಿಕ್ಕು ಶಾಶ್ವತತೆ, ಅಹಿಂಸೆಯ ಕಡೆಗೋ ಅಥವಾ ಅಶಾಶ್ವತತೆ, ಹಿಂಸೆಯ ಕಡೆಗೋ ಎಂಬುದನ್ನು ನಿರ್ಧರಿಸುವ ಮಾಪನಗಳಾಗಿವೆ. ಆದುದರಿಂದ ಈ ಎರಡೂ ವಿಷಯಗಳ ಬಗ್ಗೆ ಸ್ಪಷ್ಟತೆಯಿರದಿದ್ದರೆ ಸರ್ವನಾಶವೇ ಗತಿ ಎಂಬುದು ಕುಮಾರಪ್ಪನವರ ಮುಖ್ಯ ವಾದವಾಗಿದೆ.

ಯಂತ್ರಕೇಂದ್ರಿತ ಕೈಗಾರಿಕೆಗಳು ಮನುಷ್ಯ ಜೀವನವನ್ನು ವಿಕಾಸಗೊಳಿಸುವುದರಲ್ಲಿ ವಿಫಲವಾಲವಾಗಿವೆ ಹಾಗೂ ಅದು ಮನುಷ್ಯನ ಸೃಷ್ಟಿಶೀಲತೆಯನ್ನು ನಾಶಗೊಳಿಸಿ, ಬರೀ ಪಡಿಯಚ್ಚುಗಳನ್ನು ನಿರ್ಮಾಣ ಮಾಡುತ್ತದೆ ಎಂದಿದ್ದಾರೆ ಕುಮಾರಪ್ಪ. ಹಾಗಾದರೆ ಮನುಷ್ಯನ ಜೀವನ ಯಾವುದರಿಂದ ಸೃಷ್ಟಿಶೀಲವಾಗುತ್ತದೆ ಎಂಬುದನ್ನು ಕುರಿತು ಹೀಗೆ ಹೇಳಿದ್ದಾರೆ: “ಮನುಷ್ಯ ಒಬ್ಬ ಕಲೆಗಾರ. ಅವನ ಮೌಲ್ಯಗಳೇ ಅವನ ಬಣ್ಣ. ಅವನ ಇಚ್ಛಾಬಲವೇ ಅವನ ಕುಂಚ. ಬಾಳು ಅವನ ಕೈಯಲ್ಲಿರುವ ಪಟ. ಅದರ ಮೇಲೆ ಆ ಕುಂಚದಿಂದ ಅವನು ಹೇಗೆ ಗೆರೆ ಎಳೆದರೆ ಹಾಗೆ ಚಿತ್ರ ಮೂಡುತ್ತದೆ. ಮಾನವ ಲೋಕದ ಪ್ರಗತಿಗೆ ಅದು ಸಾಧಕವಾಗಬಹುದು, ಬಾಧಕವಾಗಲೂಬಹುದು. ಸ್ವಾರ್ಥಮಯ ಮೌಲ್ಯಗಳು ನೀರುಬಣ್ಣವಿದ್ದ ಹಾಗೆ. ದಿನ ಕಳೆದ ಹಾಗೆ ಆ ಬಣ್ಣ ಮಾಸುತ್ತದೆ. ಅದು ಬಹು ಕಾಲ ಬಾಳದು, ಹಿಂಸೆಯಿಂದ ವಿರೂಪವಾಗುತ್ತದೆ. ನಿಸ್ವಾರ್ಥ ಮೌಲ್ಯಗಳು ಅಜಂತಾದಲ್ಲಿ ಶತಮಾನ ಹಲವಾದರೂ ಅಚ್ಚಳಿಯದಿರುವ ಮೃದ್ವರ್ಣಗಳಿಂತಿವೆ. ಅಂತಹ ಬಣ್ಣದಲ್ಲಿ ಚಿತ್ರಿಸಿದ ಅವನ ಚಿತ್ರಗಳು ಶಾಶ್ವತವಾಗಿ ಅಹಿಂಸಾಮಯವಾಗಿ ಪೀಳಿಗೆ ಪೀಳಿಗೆಗಳಿಗಾಗಿ ತಮ್ಮ ಸಂದೇಶ ಸಾರುತ್ತ ಬರುತ್ತವೆ.” ಅರ್ಥಶಾಸ್ತ್ರಜ್ಞನೊಬ್ಬ ರೂಪಕದ ಭಾಷೆಯಲ್ಲಿ ಹೇಳಿರುವುದು ವಿಶೇಷವಾಗಿದೆ. ಬೃಹತ್ ಕೈಗಾರಿಕೆಗಳಿಂದ ನಮಗೆ ಬೇಕಿರುವ ವೈವಿದ್ಯಮಯ ಪದಾರ್ಥಗಳನ್ನು ಕೇಳುವಂತಿಲ್ಲ. ರಾಶಿಗಟ್ಟಲೇ ಉತ್ಪಾದಿಸಿ ಸುರಿದುದನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಮನುಷ್ಯನ ಸೃಷ್ಟಿಶೀಲ ಸಾಮರ್ಥ್ಯವು ನಿಷ್ಕ್ರಿಯವಾಗುತ್ತದೆ; ಮನುಷ್ಯನ ಶ್ರಮವು ಅಗ್ಗಗೊಂಡು ಅವನು ಬಂಡವಾಳದಾರನಿಗೆ ಗುಲಾಮನಾಗುತ್ತಾನೆ; ಮನುಷ್ಯನ ದುಡಿತದ ಹೆಚ್ಚುವರಿ ಶ್ರಮದಿಂದ ಬರುವ ಫಲವನ್ನು ಬಂಡವಾಳಗಾರ ದೋಚುತ್ತಾನೆ; ಇದು ಹಿಂಸೆ, ಸಂಘರ್ಷಗಳಿಗೆ ದಾರಿ ಮಾಡಿಕೊಡುವುದುರಿಂದ ಆರ್ಥಿಕ ಅಸಮಾನತೆಯ ಕಂದರ ಹೆಚ್ಚುತ್ತ ಹೋಗುತ್ತದೆ; ಇಂತಹದ್ದರ ಪರಿಣಾಮದಿಂದಲೇ ಪ್ರಸ್ತುತ ಭಾರತದ ಶೇಕಡ ತೊಂಬತ್ತರಷ್ಟು ಸಂಪತ್ತು ಕೇವಲ ಶೇಕಡ ಹತ್ತರಷ್ಟು ಬಂಡವಾಳದಾರರ ಕೈಯಲ್ಲಿ ಶೇಖರಣೆಯಾಗಿದೆ. ಕುಮಾರಪ್ಪನವರು ತಮ್ಮ ಕೃತಿಯಲ್ಲಿ ಪ್ರತಿಪಾದಿಸಿದ ಶಾಶ್ವತ ಮೌಲ್ಯಗಳನ್ನು ಅಂದಿನ ಪ್ರಧಾನಿಯಾಗಿದ್ದ ಜವಹರಲಾಲ ನೆಹರು ಸರ್ಕಾರವು ಅಸಡ್ಡೆಯಿಂದ ಕಂಡಿತು.

ತಮ್ಮ ಸಂಶೋಧನ ಕೃತಿಯ ಮೂಲಕ ಕುಮಾರಪ್ಪನವರು ಗಾಂಧಿಜಿಯವರ ಸಂಪರ್ಕಕ್ಕೆ ಬಂದ ಸನ್ನಿವೇಶವು ಸ್ವಾರಸ್ಯಕರವಾಗಿದೆ. ಗಾಂಧೀಜಿ ಆಗಷ್ಟೇ ಭಾರತದ ಗ್ರಾಮೀಣ ಪ್ರದೇಶದ ಬಡವರ ಉದ್ಧಾರಕ್ಕಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ತೊಡಗಿದ್ದರು. ಬಡವರ ಶೋಷಿತರ ದೀನ ದಲಿತರ ಏಳ್ಗೆಯ ರೂವಾರಿಯಾಗಿ ಕಾಣುತ್ತಿದ್ದ ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವದಿಂದ ಸಹಜವಾಗಿಯೇ ಕುಮಾರಪ್ಪನವರು ಆಕರ್ಷಿತರಾಗಿದ್ದರು. ಅಹಮದಾಬಾದಿನ ‘ಸಬರಮತಿ’ ಆಶ್ರಮದಲ್ಲಿ ಗ್ರಾಮೀಣ ಅಭಿವೃದ್ಧಿಯ ಕ್ರಿಯಾಯೋಜನೆಯಲ್ಲಿ ತೊಡಗಿದ್ದ ಗಾಂಧೀಜಿ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಗಾಗಿ ಮುಂಬಯಿಗೆ ಬಂದಿರುತ್ತಾರೆ. ಆಗ ಮುಂಬಯಿಯಲ್ಲಿದ್ದ ಕುಮಾರಪ್ಪನವರಿಗೆ ಗಾಂಧೀಜಿಯವರನ್ನು ಭೇಟಿಯಾಗುವ ಮನಸ್ಸಾಗುತ್ತದೆ. ಆದರೆ ಖುದ್ದಾಗಿ ಕಾಣುವ ಅವಕಾಶ ದೊರೆಯಲಿಲ್ಲ. ಗಾಂಧೀಜಿಯವರ ಕಾರ್ಯದರ್ಶಿ ಪ್ಯಾರೇಲಾಲರನ್ನು ಭೇಟಿಯಾಗಿ ತಮ್ಮ ಸಂಶೋಧನ ಪ್ರಬಂಧವನ್ನು ಗಾಂಧೀಜಿಯಗೆ ನೀಡುವಂತೆ ಕೋರಿಕೊಳ್ಳುತ್ತಾರೆ. ತಮ್ಮ ವಿಳಾಸದ ಕಾರ್ಡ್ ಅನ್ನು ಕೊಟ್ಟು ವಾಪಸ್ಸಾಗುತ್ತಾರೆ. ಇದನ್ನು ಮರೆತು ಸುಮ್ಮನಾಗಿದ್ದ ಕುಮಾರಪ್ಪನವರಿಗೆ 1929ರ ಮೇ 9ರಂದು ಮಧ್ಯಾಹ್ನ 2:30ಕ್ಕೆ ಬಂದು ಗಾಂಧೀಜಿಯರನ್ನು ಭೇಟಿಯಾಗುವಂತೆ ಪ್ಯಾರೆಲಾಲರಿಂದ ಪತ್ರ ಬರುತ್ತದೆ. ಭಾರತೀಯ ಹಳ್ಳಿಗಳ ದಿವಾಳತನವನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಬರೆದ ಪ್ರಬಂಧವು ಗಾಂಧೀಜಿಯವರಿಗೆ ಇಷ್ಟವಾಗಿತ್ತು. ಅವರು ಕುಮಾರಪ್ಪನವರ ಆರ್ಥಿಕತೆಯ  ಪಾಂಡಿತ್ಯವನ್ನು ಆ ಕ್ಷಣದಲ್ಲಿಯೇ ಗುರುತಿಸಿದ್ದರು.

ಕುಮಾರಪ್ಪನವರು ನಿಗದಿತ ಕಾಲಾವಧಿಗೂ ಕೊಂಚ ಮುಂಚಿತವಾಗಿಯೇ ಸಬರಮತಿ ಆಶ್ರಮಕ್ಕೆ ಹೋದಾಗ ಗಾಂಧಿಜಿಯನ್ನು ಕಂಡ ತಮ್ಮ ಮೊದಲ ಅನುಭವವನ್ನು ಹೇಳಿಕೊಂಡಿದ್ದು ಹೀಗಿದೆ: “ಆಶ್ರಮದ ಮರದ ಕೆಳಗೆ ಒಂದು ಕಟ್ಟೆ. ಸಗಣಿಯಿಂದ ಸ್ವಚ್ಛವಾಗಿ ಸಾರಿಸಿದ ನೆಲದ ಮೇಲೆ ಮುದುಕನೊಬ್ಬ ಕುಳಿತು ಚರಕದಿಂದ ನೂಲುತ್ತಿದ್ದ. ನಾನು ಚರಕವನ್ನೇ ನೋಡಿರಲಿಲ್ಲ. ಕುತೂಹಲದಿಂದ ನನ್ನ ಊರುಗೋಲಿನ ಮೇಲೆ ಬಗ್ಗಿ ಎದುರಿಗೆ ನೋಡುತ್ತಿದ್ದೆ. ಆ ಮುದುಕ ಗಮನಿಸಲೇ ಇಲ್ಲ. ಸರಿಯಾಗಿ ಎರಡೂವರೆ ಗಂಟೆಯಾಯಿತು. ಆತನ ಸೊಂಟದಲ್ಲಿ ತೂಗುತ್ತಿದ್ದ ಗಡಿಯಾರ ನೋಡಿ ಕಣ್ಣೆತ್ತಿದ; ಮಂದಹಾಸ ಬೀರಿ, ‘ನೀವೇ ಕುಮಾರಪ್ಪನೇ?’ ಎಂದಾಗ ನನಗೆ ಗರ ಬಡಿದಂತಾಯಿತು. ಇವರೇ ಗಾಂಧೀಜಿ ಎಂಬ ಕಲ್ಪನೆಯೇ ನನಗಿರಲಿಲ್ಲ. ತಕ್ಷಣ ನನ್ನ ಸಿಲ್ಕ್ ಸೂಟನ್ನೂ ಗಮನಿಸದೆ ನೆಲದ ಮೇಲೆ ಕೂರಲು ಪ್ರಯತ್ನಪಟ್ಟೆ. ಕಾಲನ್ನು ಹೊರಕ್ಕೆ ಚಾಚಿ ಕಷ್ಟಪಟ್ಟು ಕುಳಿತೆ. ಇದನ್ನು ಕಂಡ ಒಬ್ಬ ಆಶ್ರಮವಾಸಿ ಕುರ್ಚಿ ತಂದ. ‘ಮೇಲೆಯೇ ಕುಳಿತುಕೊಳ್ಳಿ’ ಎಂದರು ಗಾಂಧೀಜಿ. ‘ಉಂಟೇ! ನೀವು ಕೆಳಗೆ ಕುಳಿತು ನಾನು ಮೇಲೆ ಕೂರಲೇ, ಎಂದೂ ಆಗದು!’ ಎಂದೆ. ಮಾತು ಪ್ರಾರಂಭಿಸಿ ‘ನಿಮ್ಮ ಪ್ರಬಂಧ ಓದಿದೆ, ತುಂಬಾ ಚೆನ್ನಾಗಿದೆ’ ಎಂದರು. ನನಗೆ ಸ್ವರ್ಗವೇ ಸಿಕ್ಕಂತಾಯಿತು. ನಂತರ ಅವರ ಸಹಜ ನಗುವಿನೊಡನೆ ‘ನಮ್ಮ ವಿದ್ಯಾಪೀಠದ ಕುಲಪತಿಗಳನ್ನು ಭೇಟಿಯಾಗಿ. ಅವರಾರು ಗೊತ್ತೇ?’ ಎಂದರು. ‘ಇದೀಗ ಕುರ್ಚಿ ತಂದಿರಿಸಿದ ಮಹನೀಯರು, ಕಾಕಾ ಕಾಲೇಲ್ಕರ್’ ಎಂದರು. ನನ್ನ ಮನಸ್ಸು ಕೃತಜ್ಞತೆಯಿಂದ ನಮಿಸಿತು.” ಈ ಭೇಟಿಯೇ ಕುಮಾರಪ್ಪನವರ ಬದುಕಿನ ಪಥವನ್ನು ಬದಲಿಸಿತು. ತಮ್ಮ ವಿದೇಶಿ ಶೈಲಿಯ ಬದುಕಿಗೆ ವಿದಾಯ ಹೇಳಿದ ಕುಮಾರಪ್ಪನವರು ಸೊರಗುತ್ತಿದ್ದ ಭಾರತದ ಹಳ್ಳಿಗಳ ಅಭ್ಯುದಯಕ್ಕಾಗಿ ತಮ್ಮ ಬಾಳನ್ನು ಮುಡಿಪಾಗಿಟ್ಟರು. ಗಾಂಧೀಜಿಯವರ ರಚನಾತ್ಮಕ ಕ್ರಿಯಾಯೋಜನೆಗೆ ಹೆಗಲೆಣೆಯಾಗಿ ದುಡಿದರು.

ಬೆಂಗಳೂರಿನಲ್ಲಿ ಹಳೆಯ ಪುಸ್ತಕದಂಗಡಿಗಳನ್ನು ತಡಕಾಡಿದಾಗ ನನಗೆ ಇತ್ತೀಚೆಗಷ್ಟೇ ಕುಮಾರಪ್ಪನವರ ‘ರಾಜ್ಯಾದಾಯವೂ ಬಡತನವೂ’ ಎಂಬ ಮತ್ತೊಂದು ಪುಸ್ತಕವು ಕನ್ನಡದಲ್ಲಿ ದೊರಕಿತು. ಈ ಲೇಖನದಲ್ಲಿ ಈಗಾಗಲೇ ಪ್ರಸ್ತಾಪಿಸಿದ ಕುಮಾರಪ್ಪನವರ ‘Public Finance And Our Poverty’ ಕೃತಿಯನ್ನು ಡಿ.ಎಸ್. ಶರ್ಮ   ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಧಾರವಾಡದ ಬುರ್ಲಿ ಬಿಂದುಮಾಧವ ಅವರ ‘ಮಿಂಚಿನ ಬಳ್ಳಿ’ ಪ್ರಕಾಶನದಿಂದ 1943ರಲ್ಲಿಯೇ ಪ್ರಕಟವಾಗಿದೆ. ನನಗೆ ತಿಳಿದ ಮಟ್ಟಿಗೆ ಕುಮಾರಪ್ಪನವರ ಎರಡು ಮಹತ್ವದ ಕೃತಿಗಳು ಕನ್ನಡಕ್ಕೆ ಭಾಷಾಂತರಗೊಂಡಿವೆ. ಈ ಎರಡು ಕೃತಿಗಳು ಪುನರ್ ಮುದ್ರಣ ಕಂಡಿಲ್ಲದಿರುವುದರಿಂದ ಓದುಗರಿಗೆ ಸಿಗುವುದು ಕಷ್ಟವಾಗಿದೆ. ಕನ್ನಡದಲ್ಲಿ ಕುಮಾರಪ್ಪನವರ ಕೃತಿಗಳ ಬಗ್ಗೆ ಹಾಗೂ ಅವರ ಆರ್ಥಿಕ, ಸಾಮಾಜಿಕ, ಪರಿಸರದ ಚಿಂತನೆಗಳ ಕುರಿತು ಗಂಭೀರ ಅಧ್ಯಯನ, ಚರ್ಚೆ, ಸಂವಾದಗಳನ್ನು ನಡೆಸುವ ಅಗತ್ಯವಿದೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights