ಕೂದಲು ಪರೀಕ್ಷೆಯಿಂದ ದೃಢವಾಯ್ತು ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಡ್ರಗ್ಸ್‌ ಸೇವನೆ!

ಡ್ರಗ್ಸ್‌ ಪ್ರಕರಣದ ಆರೋಪಿಗಳಾದ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರು ಡ್ರಗ್ಸ್ ಸೇವಿಸಿದ್ದರು ಎಂದು FSL (ವಿಧಿ ವಿಜ್ಞಾನ ಪ್ರಯೋಗಾಲಯ) ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ, ಇಂತಹದ್ದೆ ಡ್ರಗ್ಸ್ ಸೇವಿಸಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಡ್ರಗ್ಸ್‌ ದಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಈ ಇಬ್ಬರನ್ನೂ ಬಂಧಿಸಲಾಗಿತ್ತು. ಹಲವು ತಿಂಗಳುಗಳ ಬಳಿಕ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ರಾಗಿಣಿ ಮತ್ತು ಸಂಜನಾರಿಂದ ಕೂದಲಿನ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳಿಸಲಾಗಿತ್ತು. ನಿನ್ನೆ ಪರೀಕ್ಷಾ ವರದಿ ಬಂದಿದ್ದು, ವರದಿಯಲ್ಲಿ ಇವರಿಬ್ಬರಿಗೂ ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವಿತ್ತು ಎಂದು ತಿಳಿದು ಬಂದಿದೆ.

ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ನಟಿಯರ ಕೂದಲು ಸೇರಿದ ವಿವಿಧ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲಾಗಿತ್ತು. ಸ್ಯಾಂಪಲ್ ಪರೀಕ್ಷೆಯಲ್ಲಿ ಇವರು ಡ್ರಗ್ ಸೇವಿಸಿರುವುದು ದೃಢಪಟ್ಟಿದೆ. ತನಿಖಾಧಿಕಾರಿ ಇನ್ಸ್​ಪೆಕ್ಟರ್​ ಪುನೀತ್​ ಬೆಂಗಳೂರಿನ 33ನೇ CCH​ ಕೋರ್ಟ್​ಗೆ FSL ವರದಿಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳಿಗೆ ಇಳಿಯದ ಡ್ರಗ್ಸ್‌ ನೆಶೆ: ಸುವರ್ಣ ನ್ಯೂಸ್‌ಗೆ ಎಲ್ಲೆಲ್ಲೂ ಸಂಜನಾದ್ದೇ ಜಪ!

10 ತಿಂಗಳ ನಂತರ ಹೈದರಾಬಾದ್ FSL ಕೇಂದ್ರದಿಂದ ರಿಪೋರ್ಟ್ ಬಂದಿದ್ದು, ಆರೋಪ ಸಾಬೀತಾಗಿರುವುದರಿಂದ ನಟಿಯರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಎಫ್‌ಎಸ್‌ಎಲ್ ವರದಿ ಕೈ ಸೇರಿರುವುದರಿಂದ ಸಿಸಿಬಿ ತನಿಖೆ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನಲಾಗಿದೆ. ಆದರೆ, ಜಾಮೀನಿನ ಮೇಲೆ ಇರುವುದರಿಂದ ಸದ್ಯಕ್ಕೆ ಬಂಧನದ ಭೀತಿ ಇಲ್ಲ ಎನ್ನಲಾಗುತ್ತಿದೆ.

ಪಾರ್ಟಿಗಳಲ್ಲಿ ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಪ್ರಕರಣವನ್ನು ಬೆನ್ನತ್ತಿದ ಸಿಸಿಬಿ ಪೊಲೀಸರು, ಕೆಲವರನ್ನು ಬಂಧಿಸಿದ್ದರು. ಕೆಲವರು ಈಗಾಗಲೇ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, 2,900 ಪುಟಗಳ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಅಸಹಜ ಸಾವಿನ ನಂತರ ದೇಶದ ಚಿತ್ರರಂಗ ವಲಯದಲ್ಲಿ ಡ್ರಗ್ಸ್‌ ಮಾಫಿಯಾ ಬಗ್ಗೆ ಸಾಕಷ್ಟು ಸುದ್ದಿಗಳು ಹೊರಬಂದಿದ್ದವು. ಇದರಲ್ಲಿ ಹಲವಾರು ತಾರೆಯರೂ ಸೇರಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಈ ಜಾಲ ಹರಡಿಕೊಂಡಿದೆ ಎಂಬ ಸುಳಿವು ಸಿಕ್ಕ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಡ್ರಗ್ಸ್‌ ಮಾಫಿಯಾ: ನಟಿ ರಾಗಿಣಿಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights