ಖೈರ್ಲಾಂಜಿಯಿಂದ ಹತ್ರಾಸ್‌ವರೆಗೆ ದಲಿತರ ಮೇಲಿನ ಅತ್ಯಾಚಾರ ಮತ್ತು ದಮನದ ಕಥನ!

ಭಯ ಮತ್ತು ನೋವಿನ ಕಿರುಚಾಟ, ಸಂಪೂರ್ಣ ಶಕ್ತಿಹೀನತೆಯ ಪ್ರಜ್ಞೆ, ಬೆದರಿಕೆಗಳ ಭೀತಿ, ಅಮಾನವೀಯ ಕ್ರೂರತೆ- ಇವೆಲ್ಲವನ್ನೂ ಎದುರಿಸಿದ್ದು, ಉತ್ತರ ಪ್ರದೇಶದ ಹತ್ರಾಸ್‌ನ ಬೂಲ್‌ಗಾರಿ ಗ್ರಾಮದ 19 ವರ್ಷದ ಯುವತಿ. ಇಂತಹ ಕ್ರೌರ್ಯ ಇದೇ ಮೊದಲಲ್ಲ. ಇಂತಹ ಕ್ರೌರ್ಯಕ್ಕೆ ಮಹಾರಾಷ್ಟ್ರದ ಖೈರ್ಲಾಂಜಿ ಗ್ರಾಮದಲ್ಲಿ 17 ವರ್ಷದ ಪ್ರಿಯಾಂಕಾ ಭೋಟ್‌ಮಂಗೆ ಮತ್ತು ಆಕೆಯ ತಾಯಿ ಸುರೇಖಾ ಕೂಡ ಬಲಿಯಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಕ್ರೌರ್ಯದ ಸರಣಿ ಮುಂದುವವರೆಗಿದೆ. ಪ್ರಭುತ್ವ ಕಣ್ಣು ಜಾಣ ಕುರುಡಾಗಿದೆ.

ಸಾಮೂಹಿಕ ಅತ್ಯಾಚಾರ ಮತ್ತು ದಲಿತ ಮಹಿಳೆಯರ ಹತ್ಯೆ – ಈ ಎರಡು ಘಟನೆಗಳನ್ನು 14 ವರ್ಷಗಳಿಂದ ಬೇರ್ಪಡಿಸಲಾಗಿದೆ. ಮಹಿಳೆಯ ಮೇಲಿನ ದೌರ್ಜನ್ಯಗಳಂತಹ ಅಪರಾಧಗಳ ಸಮಯದಲ್ಲಿ ಭಾರತದ ಸಾಮೂಹಿಕ ಆತ್ಮಸಾಕ್ಷಿ ಮತ್ತು ಸೂಕ್ಷ್ಮತೆಯು ನಿರ್ಭಯ ಪ್ರಕರಣದಿಂದ ತೀಕ್ಷ್ಣವಾಗಿದೆ ಎಂದು ಭಾವಿಸಲಾಗಿದೆ. ಆದರೆ, ಮಹಿಳೆಯವರ ಸುರಕ್ಷತೆ ಮತ್ತು ರಕ್ಷಣೆ ಎಂಬುದು ಮರೀಚಿಕೆಯಂತೆ ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ದಲಿತ ಮಹಿಳೆಯ ವಿಷಯದಲ್ಲಿ ಇನ್ನೂ ಹೆಚ್ಚು.  2006 ರಲ್ಲಿ ನಡೆದ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಹಲ್ಲೆಗಳಂತ ಅಪರಾಧಗಳು ಇಂದು ಹಲವಾರು ಪಟ್ಟು ಹೆಚ್ಚಾಗಿವೆ.

2006ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಖೈರ್ಲಾಂಜಿ ಹಳ್ಳಿಯಲ್ಲಿ ದಲಿತ ಕುಟುಂಬವೊಂದರ ನಾಲ್ಕು ಮಂದಿಯ (ತಾಯಿ, 45 ವರ್ಷದ ಸುರೇಖಾ ಭೋತ್‌ಮಾಂಗೆ, ಮಕ್ಕಳು 21 ವರ್ಷದ ಸುಧೀರ್ ಭಯ್ಯಾಲಾಲ್ ಭೋತ್‌ಮಾಂಗೆ, 19 ವರ್ಷದ ರೋಶನ್ ಭಯ್ಯಾಲಾಲ್ ಭೋತ್‌ಮಾಂಗೆ ಹಾಗೂ ಮಗಳು 17 ವರ್ಷದ ಪ್ರಿಯಾಂಕಾ ಭಯ್ಯಾಲಾಲ್ ಭೋತ್‌ಮಾಂಗೆ) ಮೇಲೆ ಅಮಾನುಷವಾಗಿ ಹಲ್ಲೆಯೆಸಗಿ ಅವರನ್ನು ಕೊಲೆ ಮಾಡಲಾಯಿತು.

ಅವರೆಲ್ಲರನ್ನೂ ಅವರ ಗುಡಿಸಲಿನಿಂದ ಹೊರಗೆಳೆದು, ಬೆತ್ತಲೆ ಮಾಡಿ ಎತ್ತಿನ ಬಂಡಿಯೊಂದರ ಮೇಲೆ ಕಟ್ಟಿಹಾಕಿ ಊರೆಲ್ಲಾ ಮೆರವಣಿಗೆ ಮಾಡಲಾಯಿತು. ನಂತರ ಅವರ ಮೇಲೆ ಚಿತ್ರಹಿಂಸೆ, ಇಬ್ಬರು ಮಹಿಳೆಯರ ಮೇಲೂ ಲೈಂಗಿಕ ಅತ್ಯಾಚಾರ ಮತ್ತು ನಾಲ್ಕೂ ಜನರ ಕೊಲೆ ಸರಣಿಯಂತೆ ನಡೆಯಿತು. ಮಹಿಳೆಯರನ್ನೂ ಒಳಗೊಂಡಂತೆ ಸುಮಾರು 70 ಮಂದಿಯಿದ್ದ ಬಲಿಷ್ಠ ಜಾತಿಯವರು ಈ ಕಗ್ಗೊಲೆಗಳಲ್ಲಿ ಪಾಲ್ಗೊಂಡರು. ಇಡೀ ಹಳ್ಳಿಯ ಕಣ್ಮುಂದೆ ಹಾಡೇಹಗಲು ನಡೆದ ಈ ಘೋರ ಪಾತಕದ ಬಳಿಕ ಮೃತದೇಹಗಳನ್ನು ಸಮೀಪದ ನಾಲೆಯಲ್ಲಿ ಎಸೆಯಲಾಗಿತ್ತು. ಇದರ ವಿರುದ್ಧ ಸಾರ್ವಜನಕ ಆಕ್ರೋಶ ಭುಗಿಲೆದ್ದಿತ್ತು.

Khairlanji To Una: The Power Of Memory - YouTube

ಮುಖ್ಯವಾಗಿ ದಲಿತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆ ಪ್ರಕರಣದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ಮತ್ತು ಪ್ರಕರಣವನ್ನು ಮರೆಮಾಚಿದ್ದ ಮುಂಬೈ, ದೆಹಲಿ ಮಾಧ್ಯಮಗಳು ಮಾತನಾಡುವಂತೆ ಮಾಡಿತ್ತು. ಕಳೆದ 14 ವರ್ಷಗಳಲ್ಲಿ ಇದೇನೂ ಬದಲಾಗಿಲ್ಲ.

ಅಂದು, ಖೈರ್ಲಾಂಚಿಯಲ್ಲಿ ಬಲಿಯಾದವರು ಮಾವೋವಾದಿಗಳಾಗಿರಬಹುದು ಎಂದು ಮಹಾರಾಷ್ಟ್ರದ ಆಗಿನ ಗೈಹ ಸಚಿವರು ಅನುಮಾನ ವ್ಯಕ್ತಪಡಿಸಿದ್ದರು. ಇಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಅಧಿಕಾರಿಗಳು ಉಲ್ಟಾಹೊಡೆಯುತ್ತಿದ್ದಾರೆ. ಅವರು ಘಟನೆ ನಡೆದ ಸಂದರ್ಭದಲ್ಲಿ ಅದು “ಸುಳ್ಳು ಸುದ್ದಿ” ಎಂದು ಹೇಳಿದ್ದರು. 19 ವರ್ಷದ ಸಂತ್ರಸ್ತ ಯುವತಿಯ ಪ್ರಕರಣ ಸುಳ್ಳು ಎಂದಿದ್ದರು. ಆಕೆಯ ಕುಟುಂಬದ ಪ್ರಕಾರ,  ತೀವ್ರವಾದ ಗಾಯಗಳಾಗಿದ್ದರೂ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು. ಆಕೆಯ ಪರಿಸ್ಥಿತಿ ಕಠಿಣಗೊಂಡಾಗಷ್ಟೇ ದೆಹಲಿ ಆಸ್ಪತ್ರೆಗೆ ಕರೆತಂದರು. ಇದೂ ಸಾಕಾಗದೇ, ಆಕೆಯ ಕುಟುಂಬದವರನ್ನು ಮಧ್ಯರಾತ್ರಿಯಲ್ಲಿ ಅವರ ಮನೆಯಲ್ಲಿ ಬಂಧಿಸಿ  “ಆಪ್ ಸೆ ಭಿ ಕುಚ್ ಗಲಾಟಿಯಾನ್ ಹುಯಿ ಹೈ” ಎಂದು ಎಚ್ಚರಿಸಿ ಆಕೆಯ ದೇಹವನ್ನು ಸುಟ್ಟುಹಾಕಿದರು.

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಹೇಳಿಕೆ ಬದಲಿಸುವಂತೆ ಧಮಕಿ ಹಾಕಿದ ಜಿಲ್ಲಾಧಿಕಾರಿ: ವಿಡಿಯೋ ವೈರಲ್‌

ದಲಿತ ಮಹಿಳೆಯರು ಸ್ವಲ್ಪ ಘನತೆಯಿಂದ ಬದುಕುತ್ತಾರೆ, ಆದರೆ, ಇಂತಹ ಕ್ರೌರ್ಯವು ಅವರು ಕೂಡ ಘನತೆಯಿಲ್ಲದೆ ಸಾಯಬೇಕು ಎಂದು ತೋರುತ್ತದೆ. ಖೈರ್ಲಾಂಜಿಯಿಂದ ಹಿಡಿದು ಹತ್ರಾಸ್ ವರೆಗೆ ಲಕ್ಷಾಂತರ ಕಥೆಗಳು. ಅವುಗಳಲ್ಲಿ, ಕ್ರೌರ್ಯಕ್ಕೆ ಬಲಿಯಾದ ಮಹಿಳೆಯರು, ವಿಶೇಷವಾಗಿ ದಲಿತ-ಬುಡಕಟ್ಟು ಮಹಿಳೆಯರು ಲಿಂಗ ಅಥವಾ ಜಾತಿ ಪ್ರಾಬಲ್ಯದ ಜೊತೆಗೆ ವಿಷಕಾರಿ ಪುರುಷಾಧಿಪತ್ಯ-ಪುರುಷತ್ವದ ಕ್ರೌರ್ಯವನ್ನು ಅನುಭವಿಸಿದ್ದಾರೆ.

2006 ರಿಂದ 2019 ರವರೆಗೆ, ಒಟ್ಟು ಅತ್ಯಾಚಾರಗಳ ಸಂಖ್ಯೆ 4,00,000 ಕ್ಕಿಂತ ಹೆಚ್ಚಾಗಿದೆ.  ವರದಿಯಾದ ಅತ್ಯಾಚಾರಗಳಲ್ಲಿ ಪ್ರತಿ ನಾಲ್ಕರಲ್ಲಿ ಒಬ್ಬರು ದಲಿತ ಮಹಿಳೆಯರಾಗಿದ್ದಾರೆ. ವರದಿಯಾಗದೇ ಉಳಿದ ಪ್ರಕರಣಗಳು ಸಾಕಷ್ಟಿವೆ. ಅಲ್ಲದೆ, ಅತ್ಯಾಚಾರದ ವರದಿಯು ವೈವಾಹಿಕ ಅತ್ಯಾಚಾರಗಳನ್ನು ಒಳಗೊಂಡಿಲ್ಲ.

ಅತ್ಯಾಚಾರ ಪ್ರಕರಣಗಳ ಸಂಖ್ಯೆಗಳು:

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ದತ್ತಾಂಶದ ಪ್ರಕಾರ, 2006 ರಲ್ಲಿ ವರದಿಯಾದ ಒಟ್ಟು ಅತ್ಯಾಚಾರಗಳ ಸಂಖ್ಯೆ 20,000 ಕ್ಕಿಂತ ಕಡಿಮೆ ಎಂದು ಹೇಳಿದೆ. 10 ವರ್ಷಗಳ ನಂತರ, ಇದು 40,000 ಕ್ಕೆ ಏರಿಕೆಯಾಗಿದೆ. ಸಾಂದರ್ಭಿಕವಾಗಿಯೋ, ನಿರ್ದಿಷ್ಟವಾಗಿಯೋ ಕೆಲವು ಕ್ರೂರ ಪ್ರಕರಣಗಳಷ್ಟೇ ರಾಷ್ಟ್ರದ ಗಮನವನ್ನು ಸೆಳೆಯಬಹುದು.

ನಿರ್ಭಯಾ ಪ್ರಕರಣವು 2012ರ ಡಿಸೆಂಬರ್‌ನಲ್ಲಿ ರಾಷ್ಟ್ರವನ್ನು ಬೆಚ್ಚಿಬೀಳಿಸಿತು. ಪ್ರಕರಣದ ವಿರುದ್ಧದ ಆಕ್ರೋಶವು ದೆಹಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ತಿರುಗಿಸಿತು. ಇದು ಅತ್ಯಾಚಾರ ಮತ್ತು ಗಂಭೀರ ಪ್ರತಿಜ್ಞೆಗಳ ಮೇಲಿನ ಕ್ರಿಮಿನಲ್ ಕಾನೂನಿನಲ್ಲಿ ಬದಲಾವಣೆಗಳಿಗೆ ಕಾರಣವೂ ಆಯಿತು.  “ಇನ್ನು ನಿರ್ಭಯರಿಲ್ಲ” ಎಂದು ಒಂದು ನಿಧಿಯನ್ನು ಸ್ಥಾಪಿಸಲಾಯಿತು. ಅಲ್ಲದೆ, 2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಪ್ರಕರಣವನ್ನು ಬಳಸಿಕೊಂಡಿತು.

ಮಾಜಿ ಪತಿಯ ಕುಟುಂಬ ಸೇರಿದಂತೆ 139 ಜನರ ಮೇಲೆ ಅತ್ಯಾಚಾರ ಆರೋಪ ಎಸಗಿದ ಮಹಿಳೆ | India News in Kannada

ಅಂದಿನಿಂದ ಪ್ರತಿವರ್ಷ ಒಟ್ಟು ಅತ್ಯಾಚಾರ ವರದಿಗಳ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯವರು ತಮ್ಮ ಮೇಲಾದ ದೌರ್ಜನ್ಯವನ್ನು ವರದಿ ಮಾಡಲು ಸಾಧ್ಯವಾಗಿದೆ. ಇದು ಭಾಗಶಃ ನಿಜವಿರಬಹುದು. ನಿರ್ಭಯಾ ಪ್ರಕರಣದ ನಿರಂತರ ಪ್ರಸಾರವು ಅತ್ಯಾಚಾರವನ್ನು ವರದಿ ಮಾಡುವಲ್ಲಿ ಕೆಲವು ಕಳಂಕಗಳನ್ನು ದೂರವಿಟ್ಟಿರಬಹುದು.  ಆದರೆ, ಅನೇಕ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂದು ಅದು ದೃಢಪಡಿಸಿತು. ಪ್ರತಿ ವರ್ಷ 32,000-33,000 ಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಅಂದರೆ, ಕಳೆದ ಏಳು ವರ್ಷಗಳಲ್ಲಿ ಪ್ರತಿದಿನ ಸುಮಾರು 90 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ.

ಬಹುಪಾಲು ಅಂಕಿಅಂಶಗಳು, ಕಥುವಾ ದೇವಸ್ಥಾನದ ಪುಟ್ಟ ಹುಡುಗಿಯ ಮೇಲಿನ ಅತ್ಯಾಚಾರ,  ಚೆನ್ನೈನಲ್ಲಿ 12 ವರ್ಷದ ಬಾಲಕಿಯ ಮೇಲಿನ ಏಳು ತಿಂಗಳ ನಿರಂತರ ಅತ್ಯಾಚಾರ, ಕೇರಳ ಸನ್ಯಾಸಿಗಳು, ಉತ್ತರ ಪ್ರದೇಶದ ಉನ್ನಾವೊ ಪ್ರಕರಣ ಮತ್ತು ಹೈದರಾಬಾದ್‌ನ ಪಶುವೈಧ್ಯೆಯ ಪ್ರಕರಣಗಳಂತ ಕೆಲವು ಪ್ರಕರಣಗಳನ್ನಷ್ಟೇ ನೆನಪಿಸುತ್ತವೆ.

ಅತ್ಯಾಚಾರದ ಕತೆಗಳನ್ನು ಸಂಖ್ಯೆಗಳ ಮೂಲಕ ಓದುವುದು ಮಹಿಳೆಯವರು ಎದುರಿಸುತ್ತಿರುವ ಭಯಾನಕ ಸತ್ಯವನ್ನು ತಿಳಿಸಲಾರದು. ಬಿಡಿಸಿ ನೋಡಿದಾಗ ಜಾತಿ ಮತ್ತು ಅತ್ಯಾಚಾರದ ನಡುವಿನ ಸಂಬಂಧ ತಿಳಿಯುತ್ತದೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ದಲಿತ ಮಹಿಳೆಯರು ಅಲ್ಲಿನ ಜಾತಿ ಧರ್ಮಾಂಧತೆಯ ಕಾರಣದಿಂದಾಗಿ ವಿಷಕಾರಿ ದೌರ್ಜನ್ಯವನ್ನು, ಅತ್ಯಾಚಾರಗಳು ಎದುರಿಸುತ್ತಿದ್ದಾರೆ. ಈ ರಾಜ್ಯಗಳು ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಅಪರಾಧಗಳಲ್ಲಿ ಮೇಲಿನ ಸ್ಥಾನದಲ್ಲಿವೆ. ದುಷ್ಕರ್ಮಿಗಳು, ಬಹುತೇಕ ಮೇಲ್ಜಾತಿಯ ಪುರುಷರೇ ಆಗಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಪ್ರತಿದಿನ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ; 16 ನಿಮಿಷಕ್ಕೊಂದು ದೌರ್ಜನ್ಯ!

2009 ಮತ್ತು 2018 ರ ನಡುವೆ ದಲಿತರ ಮೇಲಿನ ಅಪರಾಧಗಳು 6% ಹೆಚ್ಚಾಗಿದೆ ಎಂದು ನ್ಯಾಯಕ್ಕಾಗಿ ರಾಷ್ಟ್ರೀಯ ದಲಿತ ಚಳವಳಿ (ಎನ್‌ಡಿಎಂಜೆ)ಯ ಈ ವರ್ಷದ ವರದಿಯಲ್ಲಿ ತಿಳಿಸಲಾಗಿದೆ. “ದಲಿತ ಮಹಿಳೆಯರು ಹೆಚ್ಚಾಗಿ ಪ್ರಬಲ ಜಾತಿಯವರಿಂದ ಹಿಂಸಾಚಾರವನ್ನು ಎದುರಿಸುತ್ತಾರೆ. ಹಿಂಸಾಚಾರವು ದೈಹಿಕ ಹಿಂಸೆ, ಲೈಂಗಿಕ ಹಿಂಸೆಗಳಾಗಿದ್ದು ಗಂಭೀರವಾಗಿದೆ. ಕಳೆದ ಐದು ವರ್ಷಗಳಲ್ಲಿ 41,867 ಪ್ರಕರಣಗಳು ಅಥವಾ 20.40% ರಷ್ಟು ಪರಿಶಿಷ್ಟ ಜಾತಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿವೆ ” ಎಂದು ವರದಿ ತಿಳಿಸಿದೆ.

ಎನ್‌ಸಿಆರ್‌ಬಿ ಸಂಸ್ಥೆಯು ದಲಿತರ ವಿರುದ್ಧದ ಅಪರಾಧಗಳ ಬಗ್ಗೆ ವರದಿ ಮಾಡಿದೆ. 2013 ಮತ್ತು 2018ರ ನಡುವೆ ಇಂತಹ ಅಪರಾಧಗಳಲ್ಲಿ ಪ್ರತಿವರ್ಷ ಹೆಚ್ಚಳವಾಗಿದೆ ಎಂದು ದಾಖಲಿಸಿದೆ. ಉತ್ತರಪ್ರದೇಶ ದಲಿತರ ವಿರುದ್ಧ ಅತಿ ಹೆಚ್ಚು (25.6%) ದೌರ್ಜನ್ಯಗಳಾಗಿವೆ ಎಂದು ವರದಿ ಮಾಡಿದೆ.  2017 ರಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ನಿರ್ದಿಷ್ಟವಾಗಿ ಮತ್ತು ಪ್ರತ್ಯೇಕವಾಗಿ ನೋಂದಾಯಿಸಲಾದ ಪ್ರಕರಣಗಳ ಸಂಖ್ಯೆ 5,775 ಎಂದು ದತ್ತಾಂಶವನ್ನು ಸಂಸ್ಥೆ ಪ್ರಕಟಿಸಿತು. ಅವರಲ್ಲಿ 55% ದಲಿತರನ್ನು “ಉದ್ದೇಶಪೂರ್ವಕ ಅವಮಾನ ಅಥವಾ ಬೆದರಿಸಲು,” ದಲಿತರ ಭೂಮಿಯನ್ನು ಆಕ್ರಮಿಸಿಕೊಳ್ಳಲು, ದಲಿತರು ಸಾರ್ವಜನಿಕ ಸ್ಥಳಗಳನ್ನು ಬಳಸದಂತೆ ತಡೆಯುವುದು ಮತ್ತು ಸಾಮಾಜಿಕ ಬಹಿಷ್ಕಾರಗಳಂತಹ ಕ್ರೌರ್ಯಕ್ಕಾಗಿ ನಡೆದಿವೆ.

ಜಾತಿ ದೌರ್ಜನ್ಯವನ್ನು ಮರೆಮಾಚುವ ಹುನ್ನಾರ:

ಹತ್ರಾಸ್‌ನ ಸಂತ್ರಸ್ತೆಯ ಕುಟುಂಬವು ಬೂಲ್‌ಗರಿ ಗ್ರಾಮದ ಕಲವೇ ದಲಿತ ಕುಟುಂಬಗಳಲ್ಲಿ ಒಂದಾಗಿದೆ. ಆ ಕುಟುಂಬ ಮೇಲ್ಜಾತಿಯ ಠಾಕೂರ್ ಸಮುದಾಯದವರೊಡೆನೆ ಭೂಮಿ ವಿಚಾರವಾಗಿ ವಿವಾದವನ್ನು ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ವಿವಿಧಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬದ ಮೇಲೆ ನಡೆದ ದಾಳಿಯಲ್ಲಿ ಅವರ ಅಜ್ಜ ಬೆರಳುಗಳನ್ನು ಕಳೆದುಕೊಂಡಿದ್ದರು ಎಂದು ಬಲಿಯಾದ ಸಂತ್ರಸ್ಥೆಯ ಸಹೋದರ ಮಾಧ್ಯಮಗಳೊಂದಿಗೆ ಹೇಳಿದ್ದಾರೆ. ಅಲ್ಲದೆ, ಅವರು ಅಂಗಡಿಗಳಿಂದ ಕೊಳ್ಳುವಾಗ ಹಣದ ಮೇಲೆ ನೀರನ್ನು ಸಿಂಪಡಿಸುತ್ತಾರೆ ಮತ್ತು ಅಂಗಡಿಯಲ್ಲಿನ ವಸ್ತುಗಳನ್ನು ಮುಟ್ಟಲು ಅವರಿಗೆ ಅವಕಾಶವಿಲ್ಲ ಎಂದೂ ಅವರು ವಿವರಿಸಿದ್ದಾರೆ.

ಜಾತಿಯ ಸಂದರ್ಭವನ್ನು ನಿರ್ಲಕ್ಷಿಸಿ ಅದನ್ನು ಕೇವಲ ಲೈಂಗಿಕ ಅಪರಾಧವೆಂದು ನೋಡುವುದು ಅರ್ಥಹೀನ. ಇದು ತಳಸಮುದಾಯದವರು ನಿಮ್ಮ ಸ್ಥಾನಮಾನದೊಳಗೆ ನೀವಿರಿ, ನಮ್ಮೊಂದಿಗೆ ವಿವಿಧ ಬೇಡ ಎಂದು ಎಚ್ಚರಿಸಲು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕ್ರೌರ್ಯ ಎಸಗಿದ್ದಾರೆ.

ಇದು ಖೈರ್ಲಾಂಜಿಯ ಘಟನೆಯನ್ನು ಹೋಲುತ್ತದೆ. ಖೈರ್ಲಾಂಜಿಯ ಭೋತ್‌ಮಾಂಗೆ ಕುಟುಂಬದ ಮೇಲೆ ಎಸಗಲಾದ ಅಮಾನುಷ ದಾಳಿ ಆಕಸ್ಮಿಕವಾಗಿ ನಡೆದುದೇನೂ ಅಲ್ಲ. ಸುಮಾರು 20 ವರ್ಷಗಳಿಂದಲೂ ಈ ಕುಟುಂಬಕ್ಕೆ ಕಿರುಕುಳ ನೀಡುತ್ತಾ ಬರಲಾಗಿತ್ತು. ಭಾರತದ ಬಹಳಷ್ಟು ದಲಿತ ಕುಟುಂಬಗಳ ಸ್ಥಿತಿಗೆ ವಿರುದ್ಧವಾಗಿ ಭೋತ್‌ಮಾಂಗೆ ಕುಟುಂಬದ ಸ್ಥಿತಿ ಆ ಹಳ್ಳಿಯಲ್ಲಿನ ಪ್ರಬಲ ಜಾತಿಗಳ ಕೆಲವು ಕುಟುಂಬಗಳಿಗಿಂತಲೂ ಉತ್ತಮವಾಗಿತ್ತು. ಅವರು ಸುಮಾರು 07 ಎಕರೆ ಜಮೀನನ್ನು ಹೊಂದ್ದರು. ಉತ್ತಮ ಬೆಳೆಯನ್ನೂ ತೆಗೆಯುತ್ತಿದ್ದರು. ಅಲ್ಲದೆ, ತಮ್ಮ ಮೂವರು ಮಕ್ಕಳನ್ನೂ ವಿದ್ಯಾವಂತರಾಗಿ ಮಾಡುವ ಧಾಷ್ಟ್ಯ ತೋರಿದ್ದರು; ಅವರೊಂದು ಪಕ್ಕಾ ಮನೆ ನಿರ್ಮಿಸಲು ಬಯಸಿದ್ದರು. ಇದನ್ನು ಮೇಲ್ಜಾತಿಯ ಪುರುಷರು ನಿಂದಿಸಿದ್ದರು.

ಸುರೇಖಾ ಮತ್ತು ಆಕೆಯ ಮಗಳ ಕೇಲವ ಅತ್ಯಾಚಾರಕ್ಕೊಳಗಾಗಲಿಲ್ಲ, ಅವರನ್ನು ಹಳ್ಳಿಯ ಸುತ್ತಲೂ ಮೆರವಣಿಗೆ ಮಾಡಲಾಯಿತು. ನಂತರ 70 ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದರು. ಆಕೆಯ ತಲೆಬುರುಡೆ ಮುರಿದು ಕಣ್ಣು ಅಸಹ್ಯವಾಯಿತು. ಆಕೆಯ ಮಗಳ ಖಾಸಗಿ ಭಾಗಗಳಲ್ಲಿ ವಿದೇಶಿ ವಸ್ತುಗಳು ಪತ್ತೆಯಾಗಿದ್ದವು. ಅಂತಹ ಕ್ರೌರ್ಯಕ್ಕೆ ಆ ಇಬ್ಬರೂ ಬಲಿಯಾಗಿದ್ದರು. ಅಲ್ಲದೆ, ಆಕೆಯ ಸಹೋದರರೂ ಇದೇ ರೀತಿಯ ಹಲ್ಲೆಗಳನ್ನು ಅನುಭವಿಸಿದರು. ಇವು ಅನುಮಾನವೇ ಇಲ್ಲದ ಜಾತಿ ದೌರ್ಜನ್ಯ.

“ಇಡೀ ಹಳ್ಳಿಯು ಈ ಕ್ರೌರ್ಯದಲ್ಲಿ ಭಾಗಿಯಾಗಿತ್ತು. ನಾನು ನನ್ನ ಜಮೀನಿನಲ್ಲಿದ್ದೆ. ಊರಿನವರ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ನಾನು ಪೊದೆಯ ಹಿಂದೆ ಅಡಗಿಕೊಂಡಿದ್ದೆ” ಎಂದು ಸುರೇಖಾ ಅವರ ಪತಿ ಭೈಯಲಾಲ್ ಭೋಟ್ಮಂಗೆ ಹೇಳಿದ್ದರು.

ಸ್ಥಳೀಯ ಪೊಲೀಸರನ್ನು ಅಮಾನತುಗೊಳಿಸಲಾಯಿತು. ಪ್ರಕರಣವನ್ನು ಸಿಬಿಐ ತನಿಖೆ ಮಾಡಿತು. ನ್ಯಾಯಾಲಯವು ಎಂಟು ಜನರನ್ನು ಕೊಲೆ ಅಪರಾಧಿ ಎಂದು ಪರಿಗಣಿಸಿ, ಅವರಲ್ಲಿ ಆರು ಜನರಿಗೆ ಮರಣದಂಡನೆಯನ್ನು ವಿಧಿಸಿತು. 2010 ರಲ್ಲಿ, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮೇಲ್ಮನವಿಗಳನ್ನು ಆಲಿಸಿ ಮರಣದಂಡನೆಯನ್ನು 25 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿತು. ನ್ಯಾಯಪೀಠವು ಕೊಲೆಗಳನ್ನು “ಸೇಡು ಹತ್ಯೆಗಳು” ಎಂದಿದೆ. ಈ ಕೊಲೆಗಳು ಜಾತಿ ಪೂರ್ವಾಗ್ರಹಗಳಿಂದ ಪ್ರೇರೇಪಿಸಲ್ಪಟ್ಟಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಖೈರ್ಲಾಂಜಿ - Gauri Media

ಅಷ್ಟೇ ಆಘಾತಕಾರಿ ಸಂಗತಿಯೆಂದರೆ, ಅಪರಾಧಿಗಳು ಅತ್ಯಾಚಾರ ಆರೋಪದಿಂದ ಮುಕ್ತರಾಗಿದ್ದಾರೆ. ಪ್ರಕರಣಗಳನ್ನು ದಾಖಲಿಸುವಲ್ಲಿನ ವಿಳಂಬ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸವುಲ್ಲಿ, ಸಾಕ್ಷ್ಯಗಳನ್ನು ರಕ್ಷಿಸುವಲ್ಲಿ ಸ್ಥಳೀಯ ಪೊಲೀಸರು ನಿರ್ಲಕ್ಷಿಸಿದ್ದು ಅದಕ್ಕೆ ಕಾರಣವಾಗಿವೆ. ಪ್ರಿಯಾಂಕಾ ಅವರ ದೇಹವು ಗಾಯಗೊಂಡಿದೆ. ಅದರೆ “ಲೈಂಗಿಕ ದೃಷ್ಟಿಗೆ ತೃಪ್ತಿ ಪಡೆಯಲು ಸಾದ್ಯವಿಲ್ಲವೆಂದು ಭಾವಿಸಿ” ಆರೋಪಿಗಳು ಅವಳನ್ನು ನಿರಾಕರಿಸಿದ್ದಾರೆ. ಹಾಗಾಗಿ ಪ್ರಿಯಾಂಕಾ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಹತ್ರಾಸ್‌ ಸಂತ್ರಸ್ತೆಯ ಮೃತದೇಹ ಸುಟ್ಟು, ಅತ್ಯಾಚಾರ ನಡೆದಿರುವುದು ಖಚಿತವಾಗಿಲ್ಲ ಎಂದ ಯುಪಿ ಪೊಲೀಸ್‌

ಪ್ರಕರಣದಲ್ಲಿ ಭೈಯಲಾಲ್‌ ಭೋಟ್ಮಾಂಗೆಗೆ ಸ್ವಲ್ಪ ಪರಿಹಾರ ದೊರಕಿತು. ಅವರು ಬೇರೆಡೆ ವಾಸಿಸುತ್ತಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ,  ಅವರು ಮೂರು ವರ್ಷಗಳ ಹಿಂದೆ ನಿಧನರಾದರು. ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಹತ್ರಾಸ್ ಪ್ರಕರಣದಲ್ಲೂ ಸಹ, ಯುವತಿಯ ಮೃತದೇಹವನ್ನು  ಕೊನೆಯ ಬಾರಿ ನೋಡದಂತೆ ಕುಟುಂಬವನ್ನು ಪೊಲೀಸರು ತಡೆದರು. ಕುಟುಂಬವನ್ನು ಗೃಹ ಬಂಧನದಲ್ಲಿರಿಸಿ ರಾತ್ರೋರಾತ್ರಿ ಆಕೆಯ ದೇಹವನ್ನು ಸುಟ್ಟುಹಾಕಿದರು. ಪ್ರಕರಣದ ವಿರುದ್ಧ ಭುಗಿಲೆದ್ದ ರಾಷ್ಟ್ರೀಯ ಆಕ್ರೋಶವು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಯಿತು. ಆದರೆ ಸಂಗ್ರಹಿಸಿದ ವೈದ್ಯಕೀಯ ಸಾಕ್ಷ್ಯಗಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಒತ್ತಡಕ್ಕೆ ಮಣಿದು ಬರೆಯಲಾಗಿದೆ. ಹಾಗಾಗಿ ವರದಿಯು ನ್ಯಾಯಾಲಯದಲ್ಲಿ ಅತ್ಯಾಚಾರದ ಆರೋಪಗಳನ್ನು ಸಾಬೀತುಪಡಿಸುತ್ತದೆ ಎಂದು ಯಾರಿಗೂ ಭರವಸೆಯಿಲ್ಲ.

ದಲಿತರಿಗೆ “ಅತ್ಯಾಚಾರ’ ಎಂಬ ದಮನ ಮತ್ತು ಎಚ್ಚರಿಕೆ ಸಂದೇಶ 

ದಲಿತರು ಮತ್ತು ಬುಡಕಟ್ಟು ಜನಾಂಗದ ಮೇಲೆ ಅತ್ಯಾಚಾರ ಸೇರಿದಂತೆ ಹಲವಾರು ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ದಲಿತರ ಭೂಮಿಯನ್ನು ಕಸಿದುಕೊಳ್ಳುವ, ಸಾರ್ವಜನಿಕ ಸ್ಥಳಗಳಿಗೆ ಅವರು ಬಾರದಂತೆ ಉದ್ದೇಶವೂ ನಿಚ್ಚಳವಾಗಿದೆ. ಇಂತಹ ದಮನವು ಯಾವ ಭಯವೂ ಇಲ್ಲದೆ ನಡೆಯುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗದಿದ್ದಾಗ ಆಡಳಿತವು “ನಮ್ಮ ಕಡೆ” ಇದೆ ಎಂಬ ಭಾವನೆ ಬೆಳೆಯುತ್ತಿದ್ದು, ದಲಿತರ ಮೇಲಿನ ಕ್ರೌರ್ಯಕ್ಕೆ ಪುಷ್ಟಿನೀಡುತ್ತಿದೆ.

ನಿರ್ಭಯಾ ಪ್ರಕರಣವನ್ನು ರಾಜಕೀಯ ಬಂಡವಾಳವಾಗಿ ಮಾಡಿಕೊಂಡಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿ, ಹತ್ರಾಸ್‌ ಘಟನೆಗೆ ಖಂಡನಾ ಹೇಳಿಕೆ ಕೊಟ್ಟು ತೆಪ್ಪಗಿದ್ದಾರೆ. ತನ್ನ ಚುನಾವಣಾ ಕಾರ್ಯತಂತ್ರಗಳು ಮತ್ತು ರಾಜಕೀಯ ಬಂಡವಾಳದಲ್ಲಿ ಮೇಲ್ಜಾತಿಯವರಾದ ಬ್ರಾಹ್ಮಣರು, ಠಾಕೂರ್‌ಗಳು ಮತ್ತು ಬನಿಯಾಗಳ ಪರವಾದ ಒಲವು ಹೊಂದಿರುವ ಬಿಜೆಪಿ “ಸಬ್ಕಾ ಸಾಥ್” ಬಗ್ಗೆ ಮಾತನಾಡಲು ಅಂಜುವುದಿಲ್ಲ.

ಈ ನಿರಂತರ ಮತ್ತು ಘೋರ ಅಪರಾಧಗಳು ಒಂದು ಸಂದೇಶವಾಗಿವೆ ಎಂದು ದಲಿತ ಹೋರಾಟಗಾರ, ಪ್ರಾಧ್ಯಾಪಕ ಆನಂದ್ ತೇಲ್ತುಂಬ್ಡೆ ಹೇಳಿದ್ದಾರೆ. ಈಗ ಅವರು ಮಾವೋವಾದಿ ಸಂಪರ್ಕದ ಆರೋಪದಿಂದಾಗಿ ಜೈಲಿನಲ್ಲಿದ್ದಾರೆ.

An interview with Dalit activist Dr Anand Teltumbde - Rediff.com News

ತೇಲ್ತುಂಬ್ಡೆಯವರು ತಮ್ಮ ವಿಶ್ಲೇಷಣಾತ್ಮಕ ಪುಸ್ತಕವಾದ ‘Khairlanji: A Strange and Bitter Crop”ನಲ್ಲಿ ದಲಿತರ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಇಂತಹ ತೀವ್ರ ಕ್ರೂರ ಪ್ರಕರಣಗಳು ಅಥವಾ “ಸಂಸ್ಕೃತಿಯಿಲ್ಲದ ಅನಾಗರಿಕ ರಾಕ್ಷಸರ ದುಷ್ಕೃತ್ಯಗಳು” ಏಕೆ ನಡೆಯುತ್ತವೆ ಎಂದು ವಿವರಿಸಿದ್ದಾರೆ. “ದಲಿತರ ಮೇಲಿನ ದೌರ್ಜನ್ಯ, ವಿಶೇಷವಾಗಿ ಅತ್ಯಾಚಾರಗಳಂತಹ ಕೃತ್ಯಗಳು ಮನುವಾದಿ ಸಾಮಾಜಿಕ ವ್ಯವಸ್ಥೆಯನ್ನು ಜಾರಿಗೆ ತರುವ ಒಂದು ಕ್ರಿಯಾತ್ಮಕ ಮತ್ತು ವ್ಯವಸ್ಥಿತ ಮಾರ್ಗವಾಗಿದೆ.

ಅದಕ್ಕಾಗಿಯೇ ಅತ್ಯಾಚಾರವನ್ನು “ಸಾಮೂಹಿಕವಾಗಿ, ಸಾರ್ವಜನಿಕವಾಗಿ ನಡೆಸಲಾಗುತ್ತದೆ… ಅತ್ಯಾಚಾರವು ಸಂಭ್ರಮಾಚರಣೆಯ ಚಮತ್ಕಾರವಾಗುತ್ತದೆ. ಅತ್ಯಾಚಾರವು ದಲಿತರನ್ನು ಎದುರಿಸುವ ಎಚ್ಚರಿಕೆ ಸಂದೇಶವಾಗಿ ಬಳಕೆಯಾಗುತ್ತಿದೆ. ಭಾರತದ ಪ್ರತಿಯೊಂದು ಹಳ್ಳಿಯೂ ಸಂಭಾವ್ಯ ಖೈರ್ಲಾಂಜಿ” ಎಂದು ಅವರು ಬರೆದಿದ್ದಾರೆ.

– ಸೋಮಶೇಖರ್ ಚಲ್ಯ

ಮೂಲ: ನ್ಯೂಸ್‌ ಕ್ಲಿಕ್


ಇದನ್ನೂ ಓದಿ: ಹತ್ರಾಸ್‌ ಅತ್ಯಾಚಾರ ಪ್ರಕರಣ: ಜಗತ್ತಿನ ಮುಂದೆ ಸತ್ಯಬಿಚ್ಚಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights