RSS, BJP ನಾಯಕರ ಹೆಸರಲ್ಲಿ ವಂಚನೆ; ಯುವರಾಜ್‌ ಆಸ್ತಿ ಮುಟ್ಟುಗೋಲು ಹಾಕಲು ಕೋರ್ಟ್‌ ಆದೇಶ!

ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಹೆಸರು ಹೇಳಿಕೊಂಡು ಹಲವಾರು ಜನರಿಗೆ ವಂಚನೆ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ, ಆರ್. ಯುವರಾಜ್ ಅಲಿಯಾಸ್ ಸಂಗನಬಸವ ಸೇವಾಲಾಲ್ ಸ್ವಾಮಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿ 67ನೇ ಸಿಸಿಎಚ್ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.

ಆರೋಪಿ ಸ್ವಾಮಿ ವಿರುದ್ದ ಬೆಂಗಳೂರಿನಾದ್ಯಂತ ಸುಮಾರು 14 ವಂಚನೆ ಪ್ರಕರಣ ದಾಖಲಾಗಿದೆ. ಅವನನ್ನು ಡಿಸೆಂಬರ್ 17 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಉದ್ಯಮಿ ಸುಧೀಂದ್ರ ರೆಡ್ಡಿ ಎಂಬುವರಿಗೆ ರಾಜ್ಯಸಭಾ ಸೀಟು ಕೊಡಿಸುತ್ತೇನೆಂದು 10 ಕೋಟಿ ರೂ. ಕೇಳಿದ್ದ ಸ್ವಾಮಿ ಮುಂಗಡವಾಗಿ 1 ಕೋಟಿ ರೂ. ಪಡೆದುಕೊಂಡಿದ್ದ. ಈ ಹಿನ್ನಲೆಯಲ್ಲಿ ಮೋಸ ಹೋಗಿದ್ದ ಉದ್ಯಮಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಯನ್ನು ವಿಚಾರಣೆಗೊಳಪಡಿಸಿರುವ ಸಿಸಿಬಿ ಪೊಲೀಸರು, ಆರೋಪಿ ಮತ್ತು ಅವರ ಪತ್ನಿ ಎನ್‌.ಪ್ರೇಮಾ ಅವರ ಹೆಸರಿಗಿದ್ದ 26 ಆಸ್ತಿಗಳನ್ನು ಪಟ್ಟಿ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್. ಪಾಟೀಲ, ‘‘ಸಾರ್ವಜನಿಕರನ್ನು ವಂಚಿಸಿ ಗಳಿಸಿದ್ದ ಹಣದಲ್ಲೇ ಆರೋಪಿ, ಪತ್ನಿ ಹೆಸರಿನಲ್ಲಿ 70 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದನೆ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳು ಈ ಸಂಬಂಧ ದಾಖಲೆ ಹಾಗೂ ಪುರಾವೆಗಳನ್ನು ಸಂಗ್ರಹಿಸಿದ್ದು, ಅಷ್ಟೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ವಂಚನೆಗೀಡಾದವರಿಗೆ ನ್ಯಾಯ ಒದಗಿಸಬೇಕು” ಎಂದು ಕೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಆರೋಪಿಗೆ ಸೇರಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯವು ಶುಕ್ರವಾರ ಮಧ್ಯಂತರ ಆದೇಶ ಹೊರಡಿಸಿದೆ.

‘‘ಸರ್ಕಾರದ ವಿವಿಧ ಮಂಡಳಿಗಳಲ್ಲಿ ಅಧ್ಯಕ್ಷ ಹುದ್ದೆ, ಸರ್ಕಾರದ ಇಲಾಖೆಗಳಲ್ಲಿ ಕೆಲಸ, ಪ್ರತಿಷ್ಠಿತ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟು ಹಾಗೂ ಸರ್ಕಾರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಆರೋಪಿ ಯುವರಾಜ್, ಕೋಟ್ಯಂತರ ರೂಪಾಯಿ ಪಡೆದಿದ್ದರು’’ ಎಂದು ಸಿಸಿಬಿ ಮೂಲಗಳನ್ನು ಉಲ್ಲೇಖಿಸಿ ಪ್ರಜಾವಾಣಿ ವರದಿ ಮಾಡಿದೆ.

ಆರೋಪಿಯು ಹಲವಾರು ಪ್ರಮುಖ ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದು ರಾಜ್ಯ ಸರ್ಕಾರದ ಸಚಿವರೊಬ್ಬರ ಮನೆಯ ದೇವರ ಕೋಣೆಯನ್ನೇ ಬದಲಾವಣೆ ಮಾಡಿದ್ದ ಎಂದು ಹೇಳಲಾಗುತ್ತದೆ. ಸಿನಿಮಾ ನಿರ್ಮಾಪಕ ಸೇರಿದಂತೆ, ರಾಜ್ಯಪಾಲೆ ಹುದ್ದೆ ಕೊಡಿಸುತ್ತೇನೆ ಎಂದು ಮಾಜಿ ನ್ಯಾಯಾಧೀಶೆಯೊಬ್ಬರಿಂದ 8.8 ಕೋಟಿ ಪಡೆದುಕೊಂಡಿದ್ದ ಎನ್ನಲಾಗಿದೆ.

ತನಗೆ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರೊಂದಿಗೆ ಸಂಪರ್ಕ ಇದೆ ಎಂದು ಆರೋಪಿಯು ಜನರಿಗೆ ಮೋಸ ಮಾಡುತ್ತಿದ್ದ. ಈಗಾಗಲೇ ಸಚಿವರಾದ ಲಕ್ಷ್ಮಣ ಸವದಿ, ವಿ.ಸೋಮಣ್ಣ, ಕಾಂಗ್ರೆಸ್ ನಾಯಕ ಕೆ.ಚಿ ವೇಣುಗೋಪಾಲ್ ಜೊತೆ ಆರೋಪಿಯು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ‘ನಮ್ಮೊಂದಿಗೆ ಮಂತ್ರಿಗಳಿದ್ದಾರೆ’ ಎಂದಿದ್ದ ಅರ್ನಾಬ್: ಸೋರಿಕೆಯಾದ ಚಾಟ್‌ಗಳಿಂದ BJP ದೂರಉಳಿದಿದ್ಯಾಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights