ಅತ್ಯಾಚಾರದ ಬಗ್ಗೆ ಉದಾಸೀನದ ಹೇಳಿಕೆ: ಕ್ಷಮೆ ಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!

‘ಅತ್ಯಾಚಾರ ಅನಿವಾರ್ಯವಾದರೆ ಮಲಗಿ ಆನಂದಿಸಿ’ ಎಂಬ ಹೇಳಿಕೆಯನ್ನು ವಿಧಾನಸಭಾ ಕಲಾಪದ ವೇಳೆ ಉಲ್ಲೇಖಿಸಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಭಾರಿ ಟೀಕೆಗೆ ಗುರಿಯಾಗಿದ್ದರು. ಅವರ ಹೇಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ, ಅವರು ಕ್ಷಮೆಯಾಚಿಸಿದ್ದಾರೆ.

ತಮ್ಮ ಉದಾಸೀನ ಮತ್ತು ನಿರ್ಲಕ್ಷ್ಯದ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳ ಬಗ್ಗೆ ಮುಂದೆ ಎಚ್ಚರವಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

“ಅತ್ಯಾಚಾರ”ದ ಕುರಿತು ಇಂದಿನ ವಿಧಾನಸಭೆಯಲ್ಲಿ ನಾನು ಮಾಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಹೇಳಿಕೆಗಾಗಿ ನಾನು ಎಲ್ಲರಲ್ಲಿಯೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೆನೆ. ನನ್ನ ಉದ್ದೇಶವು ಒಂದು ಹೇಯ ಅಪರಾಧವನ್ನು ಕ್ಷುಲ್ಲಕಗೊಳಿಸುವುದು ಅಥವಾ ಅಮುಖ್ಯವಾಗಿಸುವುದು ಆಗಿರಲಿಲ್ಲ. ಅದು ಯೋಚಿಸದೇ ಬಂದ ಹೇಳಿಕೆ! ಇನ್ನು ಮುಂದೆ ನನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುತ್ತೇನೆ” ಎಂದಿದ್ದಾರೆ.

ಗುರುವಾರ ಅಧಿವೇಶನದ ಸಮಯದಲ್ಲಿ ರೈತರ ಸಮಸ್ಯೆಗಳ ಮೇಲಿನ ಚರ್ಚೆ ವೇಳೆ ಎಲ್ಲರಿಗೂ ಸಮಯ ನೀಡಿದರೆ ಅಧಿವೇಶನ ನಡೆಸುವುದಾದರೂ ಹೇಗೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದಾಗ ರಮೇಶ್‌ ಕುಮಾರ್‌ ಈ ಆಕ್ಷೇಪಾರ್ಹ ಹೇಳಿಕೆಯನ್ನು ಉಲ್ಲೇಖಿಸಿದ್ದರು.

‘ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ. ನೀವು ಏನು ಡಿಸೈಡ್ ಮಾಡಿಕೊಳ್ಳುತ್ತಿರೋ ಅದಕ್ಕೆ ನಾನು ಎಸ್‌, ಎಸ್‌ ಎನ್ನಬೇಕು ಅಷ್ಟೇ. ರಮೇಶ್ ಕುಮಾರ್ ಅವರೇ ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್​ದ ಸಿಚುಯೇಷನ್ ಅನ್ನೋ ರೀತಿ ಆಗಿದೆ. ಇದನ್ನು ಕಂಟ್ರೋಲ್ ಮಾಡಿ ನಿಯಂತ್ರಣದಲ್ಲಿಟ್ಟು, ಒಂದು ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಬಿಟ್ಟು ಹೀಗೆ ಮಾತಾಡಿ ಎಂದು ಬಿಟ್ಟುಬಿಡುವುದು. ಆ ಸ್ಥಿತಿಗೆ ಬಂದುಬಿಟ್ಟಿದೆ” ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಮೇಶ್​ಕುಮಾರ್, ‘ದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌’ (ಒಂದು ಹೇಳಿಕೆಯಿದೆ. ಅತ್ಯಾಚಾರ ಅನಿವಾರ್ಯವಾದಾಗ, ಮಲಗಿ ಆನಂದಿಸಿ) ಎಂದು ಹೇಳಿದ್ದರು. ಈ ಹೇಳಿಕೆಗೆ ಸ್ಪೀಕರ್ ಕಾಗೇರಿ ಸೇರಿದಂತೆ ಹಲವು ಮಂದಿ ನಕ್ಕು, ತಮಾಷೆಯಾಗಿ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಶಾಲಾ ಮಕ್ಕಳ ಮೊಟ್ಟೆ ಕಸಿಯುತ್ತಿರುವ ಸ್ವಾಮೀಜಿಗಳನ್ನು ಸಂವಿಧಾನ ವಿರೋಧಿ ಆರೋಪದ ಅಡಿಯಲ್ಲಿ ಬಂಧಿಸಬೇಕು: ಶಿಕ್ಷಣ ತಜ್ಞರ ಆಗ್ರಹ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights