ಪಂಜಾಬ್ ಚುನಾವಣಾ ವಸ್ತಿಲಿನಲ್ಲಿ ಐದು ಅಕಾಲಿ ನಾಯಕರು ಬಿಜೆಪಿಗೆ ಸೇರ್ಪಡೆ!

ಮುಂದಿನ ವರ್ಷ ಪಂಜಾಬ್‌ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಶಿರೋಮಣಿ ಅಕಾಲಿ ದಳದ ಐವರು ನಾಯಕರು ಮತ್ತು ಮಾಜಿ ನಿರೂಪಕರು ಸೋಮವಾರ ಬಿಜೆಪಿಗೆ ಸೇರಿದ್ದಾರೆ.

ಪಂಜಾಬ್‌ನಲ್ಲಿ ಬಹುಕೋನದ ಸ್ಪರ್ಧೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಡೆದು, ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಇತರ ಪಕ್ಷಗಳ ನಾಯಕರನ್ನು ಸೆಳೆಯಲು ಮುಂದಾಗಿದೆ.

ಅಕಾಲಿದಳದ ಮಹಿಳಾ ಘಟಕದ ಮಾಜಿ ಸದಸ್ಯೆ ಹಾಗೂ ಮಾಜಿ ಕೇಂದ್ರ ಸಚಿವ ಬಲವಂತ ಸಿಂಗ್ ರಾಮಮೂಲಿಯಾ ಮಗಳು ಅಮಂಜೋತ್ ಕೌರ್ ರಾಮೌವಾಲಿಯಾ, ಗುರುಪ್ರೀತ್ ಸಿಂಗ್ ಶಹಪುರ್, ಚಾಂದ್ ಸಿಂಗ್ ಚಠಾ ಮತ್ತು ಬಲ್ಜಿಂದರ್ ಸಿಂಗ್ ದಕೋಹಾ ಅವರು ಕೇಂದ್ರ ಕ್ಯಾಬಿನೆಟ್ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಸೋಮವಾರ ಬಿಜೆಪಿಗೆ ಸೇರಿದ್ದಾರೆ.

ಈ ಹಿಂದೆ ಎಸ್‌ಎಡಿ ಜೊತೆಯಲ್ಲಿದ್ದ ದಲಿತ ನಾಯಕ ಪ್ರೀತಮ್ ಸಿಂಗ್ ಮತ್ತು ಮಾಜಿ ಟಿವಿ ನಿರೂಪಕರಾದ ಚೇತನ್ ಮೋಹನ್ ಜೋಶಿ ಕೂಡ ಪಕ್ಷಕ್ಕೆ ಸೇರಿದ್ದಾರೆ.

ಇದನ್ನೂ ಓದಿ: ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು ಶಮನ?; ನವಜೋತ್‌ ಸಿಧು ರಾಜ್ಯಾಧ್ಯಕ್ಷ; ಅಮರಿಂದರ್ ಸಿಎಂ ಆಗಿ ಮುಂದುವರಿಕೆ?

ಇವರೆಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸಿದ ಶೇಖಾವತ್, “ವಿವಿಧ ನಾಯಕರು ಬಿಜೆಪಿಗೆ ಸೇರುವ ಮೂಲಕ ಚುನಾವಣೆಗೆ ಮುನ್ನ ಪಂಜಾಬ್‌ನಲ್ಲಿ ಯಾವ ರೀತಿಯಲ್ಲಿ ಗಾಳಿ ಬೀಸುತ್ತಿದೆ ಎಂಬುದನ್ನು ತೋರಿಸಿದ್ದಾರೆ. ದೇಶಾದ್ಯಂತ “ತಿರಸ್ಕರಿಸಲ್ಪಟ್ಟ” ಕೆಲವು ಪಕ್ಷಗಳು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ರೈತರನ್ನು ದಾರಿ ತಪ್ಪಿಸುತ್ತಿವೆ” ಎಂದು ಆರೋಪಿಸಿದ್ದಾರೆ.

ಆದಾಗ್ಯೂ, ಮೋದಿ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿ ಮತ್ತು ಪಂಜಾಬ್‌ನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂಬುದು ಜನರಿಗೆ ತಿಳಿದಿದೆ. ಪಕ್ಷಕ್ಕೆ ಸೇರ್ಪಡೆಗೊಂಡ ನಾಯಕರು “ಸುಪ್ರಸಿದ್ಧರು” ಮತ್ತು ದೀರ್ಘ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬಗಳಿಂದ ಬಂದವರು ಎಂದು ಶೇಖಾವತ್‌ ಹೇಳಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಮಾತನಾಡಿ, ಪಂಜಾಬ್ ಜನರು ಶಾಂತಿ ಮತ್ತು ಸಂತೋಷವನ್ನು ಬಯಸುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭರವಸೆಯಿಂದ ನೋಡುತ್ತಿದ್ದಾರೆ. ಪಂಜಾಬಿಗರು ಬಿಜೆಪಿಯೇ ಪರ್ಯಾಯ ಎಂದು ನಂಬಿದ್ದಾರೆಂದು ಹೇಳಿದ್ದಾರೆ.

ಇದನ್ನೂ ಓದಿ: ಹೋರಾಟದಲ್ಲಿ ಮೃತಪಟ್ಟ ರೈತರ ಬಗ್ಗೆ ದಾಖಲೆಯೇ ಇಲ್ಲ ಎಂದ ಕೇಂದ್ರ; ಅಂಕಿಅಂಶ ಕೊಟ್ಟ ಪಂಜಾಬ್‌ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights