ಪಂಚರಾಜ್ಯ ಚುನಾವಣೆ 2022: ಕಾಂಗ್ರೆಸ್‌ಗೆ ಬಿಗ್‌ಶಾಕ್‌; ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ!

2022ರ ಆರಂಭದಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಎಬಿಪಿ ಮತ್ತು ಸಿ ವೋಟರ್ ಐದು ರಾಜ್ಯಗಳ ಚುನಾವಣಾ ಸಮೀಕ್ಷೆ ನಡೆಸಿದ್ದು, ರಾಜಕೀಯ ಲೆಕ್ಕಾಚಾರಗಳು ಬದಲಾಗಿವೆ ಎಂದು ಸಮೀಕ್ಷೆ ಹೇಳಿದೆ.

ಪಂಜಾಬ್, ಉತ್ತರಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಐದೂ ರಾಜ್ಯಗಳೂ ಕಾಂಗ್ರೆಸ್‌ಗೆ ನಿರಾಸೆಯನ್ನುಂಟು ಮಾಡಲಿವೆ ಎಂದು ಸಮೀಕ್ಷೆ ಹೇಳಿದೆ. ಪಂಜಾಬ್‌ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಆಮ್‌ ಆದ್ಮಿ ಪಾರ್ಟಿಯು ಸರಳ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ, ಆಡಳಿತಾರೂಢ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಉಳಿದಂತೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೇರಲಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್‌ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಪಂಜಾಬ್ ನಲ್ಲಿ ಒಟ್ಟು 117 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ 51 -57, ಕಾಂಗ್ರೆಸ್ 38 -46, ಅಕಾಲಿದಳ 16 -24 ಸ್ಥಾನ ಗಳಿಸುವ ನಿರೀಕ್ಷೆ ಇದೆ. ಕಳೆದ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅದನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ.

ಉತ್ತರ ಪ್ರದೇಶದ ಒಟ್ಟು 403 ಸ್ಥಾನಗಳಲ್ಲಿ ಬಿಜೆಪಿ 259 -267, ಸಮಾಜವಾದಿ ಪಾರ್ಟಿ 109 -117, ಬಿಎಸ್‌ಪಿ 12 -16 ಕಾಂಗ್ರೆಸ್ 3 -7 ಹಾಗೂ ಇತರರು 6 -10 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.

ಉತ್ತರಾಖಂಡದಲ್ಲಿನ 70 ಸ್ಥಾನಗಳಲ್ಲಿ ಬಿಜೆಪಿ 44 -48, ಕಾಂಗ್ರೆಸ್ 19 -23 ಹಾಗೂ ಆಮ್ ಆದ್ಮಿ ಪಕ್ಷ 4, ಇತರರು 2 ಸ್ಥಾನಗಳನ್ನು ಪಡೆಯಬಹುದು.

ಗೋವಾದ 40 ಸ್ಥಾನಗಳಲ್ಲಿ ಬಿಜೆಪಿ 22 -26, ಆಮ್ ಆದ್ಮಿ ಪಕ್ಷ 4 -8, ಕಾಂಗ್ರೆಸ್ 3 -7, ಇತರರು 3 – 7 ಸ್ಥಾನಗಳಲ್ಲಿ ಜಯ ಗಳಿಸುವ ನಿರೀಕ್ಷೆ ಇದೆ.

ಮಣಿಪುರದ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 32 – 36, ಕಾಂಗ್ರೆಸ್ 18 – 22, ಎನ್.ಪಿ.ಎಲ್. 2 -6 ಹಾಗೂ ಇತರರು 4 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

2017 ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ 312 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ, ರಾಜ್ಯದಲ್ಲಿ ಕೊರೊನಾ 2ನೇ ಅಲೆಯನ್ನು ನಿಭಾಯಿಸಿದ ರೀತಿಯ ವೈಫಲ್ಯಗಳು, ಅತ್ಯಾಚಾರ, ದೌರ್ಜನ್ಯಗಳಿಂದಾಗಿ ಬಿಜೆಪಿಯ ವರ್ಚಸ್ಸು ಕುಸಿಯುತ್ತಿದೆ. ಆದರೂ, ಮುಂದಿನ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: ಬಿಜೆಪಿಯ ತಂತ್ರಗಳು ವಿವಿಧ ರಾಜ್ಯಗಳಲ್ಲಿ ಟಿಎಂಸಿಯನ್ನು ಬಲಪಡಿಸುತ್ತವೆ: ಮದನ್‌ ಮಿತ್ರಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights