Film : ಆಸ್ಕರ್‌ ಪ್ರಶಸ್ತಿ ಪಡೆದ ದಕ್ಷಿಣ ಕೊರಿಯಾದ ಪ್ಯಾರಸೈಟ್ ಚಿತ್ರ ಏನನ್ನು ಹೇಳುತ್ತದೆ?

ಜಗತ್ತು ದಕ್ಷಿಣ ಕೊರಿಯಾದಿಂದ ಮುಂದಿನ ಸಿನಿಮಾಗಳಿಗಾಗಿ ಕುತೂಹಲದಿಂದ ಕಾಯುತ್ತಿರುವಂತೆ ಮಾಡುವಲ್ಲಿ ‘ಪ್ಯಾರಸೈಟ್’ ಯಶಸ್ವಿಯಾಗಿದೆ. ನೋಡಬೇಕಾದ, ನೋಡಿ ಚರ್ಚಿಸಬೇಕಾದ ಸಿನಿಮಾ.

2020ರ ಸಾಲಿನ 92ನೇ ಆಸ್ಕರ್ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕರಲ್ಲದೆ, ಅವರ ಪ್ಯಾರಸೈಟ್ ಚಿತ್ರವು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯ ಮತ್ತು ಅತ್ಯುತ್ತಮ ಚಿತ್ರಕಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಚಿತ್ರದ ಕುರಿತು ಈ ಹಿಂದೆ ಸಂವಾದ ಮಾಸಪತ್ರಿಕೆಗೆ ಬಿ.ಶ್ರೀಪಾದ್‌ ಭಟ್‌ ಬರೆದ ಲೇಖನ ಇದು.

ಹಿನ್ನಲೆ
1910 ರಲ್ಲಿ ಕೊರಿಯಾದ ರಾಜ ಪ್ರಬುತ್ವ ಕೊನೆಗೊಂಡು ಜಪಾನ್‌ನ ಕಲೋನಿಯಲ್ ಆಡಳಿತಕ್ಕೆ ಒಳಪಟ್ಟಿತು. 1910-1945ರವರೆಗೆ ಜಪಾನಿ ಕೊರಿಯಾ ಎಂದೆ ಕರೆಯಲಾಗುತ್ತಿತ್ತು. ನಂತರ ಎರಡನೆ ಮಹಾಯುದ್ದದ ನಂತರ ಕೊರಿಯಾ ಉತ್ತರ (ಸೋವಿಯತ್ ಒಕ್ಕೂಟ ಆಡಳಿತ) ಮತ್ತು ದಕ್ಷಿಣ (ಅಮೇರಿಕಾ ಆಡಳಿತ) ಪ್ರಾಂತಗಳಾಗಿ ಇಬ್ಬಾಗವಾಯಿತು. 1948-1987ರ ಕಾಲಘಟ್ಟದಲ್ಲಿ ದಕ್ಷಿಣ ಕೊರಿಯ ಸತತವಾಗಿ ನಿರಂಕುಶ ಪ್ರಬುತ್ವದ ಆಡಳಿತದ ಹಿಡಿತದಲ್ಲಿತ್ತು. ಪ್ರಬಲ ಕಮ್ಯುನಿಶ್ಟ್ ವಿರೋದಿ ‘ಸೈಗ್ಮಾನದ ರ‍್ಹೀ’ 1950-53ರ ಕೊರಿಯನ್ ಯುದ್ದದ ಸಂದರ್ಬದಲ್ಲಿ ದ.ಕೊರಿಯದ ನಾಯಕತ್ವ ವಹಿಸಿದ್ದ. 16, ಮೇ, 1961ರಲ್ಲಿ ಪಾರ್ಕ ಚುಂಗ್-ಹೀ ಮಿಲಿಟರಿ ಪಿತೂರಿ ಮೂಲಕ ಅದಿಕಾರಕ್ಕೆ ಬಂದ ಮತ್ತು ಎಲ್ಲಾ ಬಗೆಯ ನಾಗರಿಕ ಹಕ್ಕುಗಳನ್ನ ದಮನಗೊಳಿಸಿದ. 1979ರಲ್ಲಿ ಆತನ ಹತ್ಯೆಯಾಯಿತು. ಪಾರ್ಕ ಚುಂಗ್ ಈ 18 ವರ್ಷಗಳ ನಿರಂಕುಶ ಆಡಳಿತದಲ್ಲಿ ಆರ್ಥಿಕ ಪವಾಡವನ್ನೆ ಮಾಡಿದ ಎಂದೂ ಹೇಳುತ್ತಾರೆ.

ನಂತರ ಮತ್ತೊಂದು ಮಿಲಿಟರಿ ಪಿತೂರಿಯ ಮೂಲಕ ಚುನ್ ಡೂ-ಹ್ವನ್ 12, 1979ರಲ್ಲಿ ಅದಿಕಾರಕ್ಕೆ ಬಂದ. ಮೇ 1980ರಲ್ಲಿ ಈ ನಿರಂಕುಶ ಪ್ರಬುತ್ವದ ವಿರುದ್ದ ಗ್ವಾನ್‌ಗ್ಜು ನಗರದಲ್ಲಿ ದೊಡ್ಡ ದಂಗೆ ಹುಟ್ಟಿಕೊಂಡಿತು. ಆದರೆ ಈ ಪ್ರತಿಬಟನೆಯಲ್ಲಿ ಮಿಲಟರಿ ಆಡಳಿತ ನೂರಾರು ಜನರನ್ನ ಹತ್ಯೆ ಮಾಡಿತು. 1987ರಲ್ಲಿ “ಜುನೆ ಹೋರಾಟ”ದಿಂದ ದಕ್ಷಿಣ ಕೊರಿಯಾದಲ್ಲಿ ಹಂತಹಂತವಾಗಿ ಪ್ರಜಾಪ್ರಬುತ್ವ ನೆಲೆಯೂರಲು ಕಾರಣವಾಯಿತು. ಈ ತೊಂಬತ್ತರ ದಶಕದಲ್ಲಿ ಪ್ರಜಾತಾಂತ್ರಿಕ ಹೋರಾಟಗಾರರಾದ ಕಿಮ್ ಯಂಗ್-ಸಾಮ್, ಕಿಮ್ ಡೀ-ಜಂಗ್ ಮತ್ತು ರೋಹ್ ಮೂ-ಹೈಯುನ್ ಅದ್ಯಕ್ಷೀಯ ಚುನಾವಣೆಗಳಲ್ಲಿ ಜಯಗಳಿಸಿದರು.

ಈಗ ಪ್ರಜಾಪ್ರಬುತ್ವದ ಮೂರನೆ ದಶಕದಲ್ಲಿ ಕಾಲಿಡುತ್ತಿರುವ ದಕ್ಷಿಣ ಕೊರಿಯಾದ ಸಿನಿಮಾ ಕ್ಷೇತ್ರ ಬೆರಗು ಮೂಡಿಸುವಷ್ಟು ಪ್ರಬುದ್ದವಾಗಿದೆ. ನಿರಂಕುಶ ಪ್ರಬುತ್ವದಿಂದ ಪ್ರಜಾಪ್ರಬುತ್ವದೆಡಿಗಿನ 50 ವರ್ಷಗಳ ದೀರ್ಘ ಪಯಣವನ್ನ ಸಿನಿಮಾದ ಮೂಲಕ ಸಮರ್ಥವಾಗಿ ದಾಖಲಿಸಿದೆ. ಈ ಮೂಲಕ ಪ್ರತಿಬಾವಂತ ನಿರ್ದೇಶಕರು, ನಟರು, ತಂತ್ರಜ್ಞರು ಹೊರಹೊಮ್ಮಿದರು. ಗ್ವಾನ್‌ಗ್ಜು ದಂಗೆಯ ಕಥನವನ್ನ ಹೇಳುವ ‘ದ ಪೆಟಲ್, ‘ಮೇ 18 ಮತ್ತು ಟ್ಯಾಕ್ಸಿ ಡ್ರೈವರ್’, ‘ನ್ಯಾಶನಲ್ ಸೆಕ್ಯರಿಟಿ’, ‘ದ ಓಲ್ಡ್ ಗಾರ್ಡನ್’, ’ಪೆಪ್ಪರ್ ಮಿಂಟ್ ಕ್ಯಾಂಡಿ’ ಯಂತಹ ಸಿನಿಮಾಗಳು ಸಮಾಜೋ-ರಾಜಕೀಯ ವಸ್ತುಸ್ಥಿತಿಯನ್ನ ಹೊರಜಗತ್ತಿಗೆ ಪರಿಚಯಿಸುತ್ತವೆ.

21 ಶತಮಾನದ ದ.ಕೊರಿಯಾದ ಸಿನಿಮಾರಂಗವು ಹಾಲಿವುಡ್‌ನ ಪ್ರಬಾವವನ್ನ ವಿರೋದಿಸುತ್ತಲೆ ತನ್ನ ಸ್ಥಳೀಯ, ಜಾಗತಿಕ ಮಾರುಕಟ್ಟೆಯನ್ನ ವಿಸ್ತರಿಸಿಕೊಂಡಿದೆ. “ಕೊರಿಯನ್ ಅಲೆ” ಎಂದೆ ಕರೆಲ್ಪಡುವಶ್ಟು ಈ ಹೊಸ ಶತಮಾನದ ದಕ್ಷಿಣ ಕೊರಿಯ ಸಿನಿಮಾ ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯವಾಗಿದೆ ಮತ್ತು ಸೃಜನಶೀಲವಾಗಿದೆ. ಕಲೋನಿಯಲ್ ಕಾಲಘಟ್ಟದ ಅನುಬವಗಳನ್ನು ಬಸಿದುಕೊಂಡು ತನ್ನ ರಾಶಿಯ ಇತಿಹಾಸವನ್ನು ವಸ್ತುನಿಷ್ಟವಾಗಿ ನಿರೂಪಿಸಿದ್ದಾರೆ. ಸಮಾಜದ ತವಕ, ತಲ್ಲಣಗಳನ್ನ ಸಮರ್ಥವಾಗಿ ಅಬಿವ್ಯಕ್ತಿಸಿರುವ ದ.ಕೊರಿಯಾ ನಿರ್ದೇಶಕರು ಅಲ್ಲಿನ ವರ್ಗ ಅಸಮಾನತೆ ಕುರಿತಾಗಿಯೂ ಸೂಕ್ಷ್ಮವಾಗಿ ಚಿಂತಿಸಿದ್ದಾರೆ. 21ನೆ ಶತಮಾನದ ದ.ಕೊರಿಯಾ ಸಿನಿಮಾ ಚಳುವಳಿ ಪುನರುಜ್ಜೀವನದ ಕಥನವೆಂದೇ ಹೇಳಲಾಗುತ್ತದೆ. ತನ್ನ ಬಿಕ್ಕಟ್ಟಿನ ಭೂತಕಾಲವನ್ನು ಪೋಸ್ಟ್ ಕಲೋನಿಯಲ್ ಸಂದರ್ಭದ ಸೂಕ್ಷ್ಮ ಸಂವೇದನೆಯಲ್ಲಿ ಪುನನಿರ್ಮಿಸಿದ್ದಾರೆ.

ದೃವೀಕರಣಗೊಂಡ ವರ್ಗ ಸಮಾಜ ಮತ್ತು ದುರಂತ ಕಾಮಿಡಿ
ಬಾಂಗ್ ಜೂನ್-ಹೋ ದಕ್ಷಿಣ ಕೊರಿಯಾ ಸಿನಿಮಾರಂಗದ ಒಂದು ಪ್ರಕಾರ, ಶೈಲಿ, ಕಲೆಯ ಬಗೆ ಎಂದೆ ಕರಯಲ್ಪಡುತ್ತಾನೆ. 2018ರಲ್ಲಿ ಆತನ ‘ಪ್ಯಾರಸೈಟ್’ ಸಿನಿಮಾ ಕ್ಯಾನೆ ಸಿನಿಮಾ ಉತ್ಸವದಲ್ಲಿ ಅತ್ಯುತ್ತಮ ಚಿತ್ರವೆಂದು ಪಾಮೆ ಡಿ ಒರ್ ಪ್ರಶಸ್ತಿ ಗಳಿಸಿದೆ. ಈ ಹಿಂದೆ ಬಾಂಗ್ ನಿರ್ದೇಶಿಸಿದ ‘ಮೆಮೋರಿಸ್ ಆಫ್ ಮರ್ಡರ್’, ‘ಬಾರ್ಕಿಂಗ್ ಡಾಗ್ಸ್ ನೆವರ್ ಬೈಟ್ಸ್’, ‘ಓಕ್ಜ’, ‘ಮದರ್’ ಇತ್ಯಾದಿ ಸಿನಿಮಾಗಳು ತಮ್ಮದೆ ಆದ ಅನನ್ಯತೆಯಿಂದ ಬೆರಗು ಮೂಡಿಸುತ್ತವೆ.

21ನೆ ಶತಮಾನದ ದ.ಕೊರಿಯಾ ಸಿನಿಮಾ ಕುರಿತು ಮಾತನಾಡುವಾಗ ಅದು ಬಾಂಗ್ ಜೂನ್ ಸಿನಿಮಾದ ರೀತಿಯಲ್ಲಿದೆಯೆ ಎಂದು ತುಲನಾತ್ಮಕವಾಗಿ ಪ್ರಶ್ನೆ ಕೇಳುವುದು ವಾಡಿಕೆಯಾಗಿದೆ. ‘ಸಿನಿಮಾ ಮತ್ತು ಕಲೆಯ ಕೊರಿಯನ್ ಅಕಾಡೆಮಿ ಆಫ್ ಫಿಲ್ಮ’ನಲ್ಲಿ ಸಮಾಜಶಾಸ್ತ್ರ ಮತ್ತು ಸಿನಿಮಾ ಕುರಿತು ಅದ್ಯಯನ ಮಾಡಿರುವ ಬಾಂಗ್ ಕ್ಯಾನೆಯಲ್ಲಿ ‘ಪ್ಯಾರಸೈಟ್’ ಸಿನಿಮಾಗೆ ಪ್ರಶಸ್ತಿ ಸ್ವೀಕರಿಸುತ್ತ ‘ನನಗೆ ಹಾಲಿವುಡ್ ಸ್ಟುಡಿಯೋಗೆ ಹೋಗಲು ಇಷ್ಟವಿಲ್ಲ, ನನ್ನ ಸಿನಿಮಾಗಳಿಗೆ ನಾನೆ ಚಿತ್ರಕತೆ (ಸ್ಕ್ರಿಪ್ಟ್) ಬರೆದು ನಿರ್ದೇಶಿಸುತ್ತೇನೆ, ಹಾಲಿವುಡ್‌ನ ಚಿತ್ರಕತೆಗಳಿಗೆ ನಾನು ನಿರ್ದೇಶನ ಮಾಡಲಾರೆ’ ಎಂದು ಹೇಳಿದ್ದಾನೆ.

ಈತನ ಪ್ರತಿಯೊಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಾಂಗ್ ಕಂಗ್ ಹೋ ‘ಪ್ಯಾರಸೈಟ್’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾನೆ. ‘ಪ್ಯಾರಸೈಟ್’ ಸಿನಿಮಾ ಕುರಿತು ಮಾತನಾಡುತ್ತ ಬಾಂಗ್ ‘ಇದು ಜಾಗತಿಕ ವಿದ್ಯಾಮಾನವಾದ ದೃವೀಕರಣದ ಕುರಿತು ವ್ಯವಹರಿಸುತ್ತದೆ, ಖಳನಾಯಕರಿಲ್ಲದಿದ್ದರೂ ಕೆಟ್ಟ ಘಟನೆಗಳು ಸಂಬವಿಸುತ್ತವೆ, ಇದು ಕಣಿ ಹೇಳಲಾಗದ ದುರಂತ ಕಾಮಿಡಿ. ತನ್ನ ಸಿನಿಮಾರಂಗದ ಎರಡನೆ ದಶಕದ ಪಯಣದ ಕುರಿತು ಚಿಂತಿಸಲು ‘ಪ್ಯಾರಸೈಟ್’ ಸಿನಿಮಾ ಒಂದು ಆಯಕಟ್ಟಿನ ಘಟ್ಟ’ ಎಂದು ಹೇಳುತ್ತಾನೆ.

ಹಾಗಿದ್ದರೆ ಏನಿದು ‘ಪ್ಯಾರಸೈಟ್’ (ಪರಾವಲಂಬಿ) ಸಿನಿಮಾ? ಕಳೆದ ವರ್ಷ ಬಿಡುಗಡೆಯಾಗಿ ಕ್ಯಾನೆ ಸಿನಿಮಾ ಉತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಜಪಾನ್‌ನ  ‘ಶಾಪ್ ಲಿಫ್ಟರ್’ ಸಿನಿಮಾದೊಂದಿಗೆ ಈ ಸಿನಿಮಾದ ಕೆಲ ಸಾಮ್ಯತೆಗಳಿವೆ. ಒಂದು ಎರಡೂ ಏಶ್ಯಾ ಖಂಡದ ಸಿನಿಮಾಗಳು. ಮುಖ್ಯವಾಗಿ ಎರಡೂ ಸಿನಿಮಾಗಳಲ್ಲಿ ಕೆಳವರ್ಗದ ಬದುಕಿನ ನಿರೂಪಣೆ ಇದೆ. ಆದರೆ ‘ಪ್ಯಾರಸೈಟ್’ ಸಿನಿಮಾದ ಮೂಲಕ ಬಾಂಗ್ ಯಾವುದೆ ವರ್ಗವಿರಲಿ ಅದು ಮನುಷ್ಯತ್ವವನ್ನ ಹೀರಿಕೊಂಡುಬಿಡುತ್ತದೆ ಎಂದು ಪ್ರತಿಪಾದಿಸುತ್ತಾನೆ. ಇದಕ್ಕಾಗಿ ಸಿನಿಮಾದ ಮದ್ಯಂತರದ ನಂತರ ದುರಂತಗಳ ತಿರುವುಗಳನ್ನ ಹೆಣೆಯುವ (ಸ್ವತಃ ಚಿತ್ರಕತೆ ಬರೆದ) ನಿರ್ದೇಶಕ ಈ ದುರಂತಕ್ಕೆ ಆರಂಭದಿಂದಲೂ ಕಾಮಿಡಿಯ ಲೇಪನವನ್ನ ಮಾಡುತ್ತಾನೆ. ರಾಚನಿಕ ಅಸಮಾನತೆಯನ್ನ ಪರೀಕ್ಷಿಸುತ್ತ ಆ ಮೂಲಕ ವ್ಯವಸ್ಥೆಯೊಳಗಿನ ಬದುಕಿನ ಅರ್ಥವನ್ನ ವಿವರಿಸಲು ಬಯಸುತ್ತಾನೆ. ಬಾಂಗ್‌ನ ಈ ಫಿಲಾಸಫಿಯನ್ನ ನೀವು ಒಪ್ಪಿಕೊಳ್ಳುತ್ತೀರೋ ಇಲ್ಲವೋ ಎಂಬುದು ಚರ್ಚೆಗೆ ಸಂಬಂದಿಸಿದ ವಿಷಯ. ಈ ಸಿನಿಮಾದಲ್ಲಿ ಪಾತ್ರಗಳು ಚೆಲ್ಲಾಪಿಲ್ಲಿಯಾಗಿವೆ. ಆದರೆ ಬದುಕು ಕೇಂದ್ರದಿಂದ ಕಳಚಿಕೊಂಡಿಲ್ಲ. ಹಾಗಿದ್ದಲ್ಲಿ ಹಿಡಿದಟ್ಟುಕೊಂಡಿರುವ ಆ ಕೇಂದ್ರ ಎನ್ನವುದರ ವಿಶೇಷತೆ ಏನಿದೆ?

ಆರಂಬದ ದೃಶ್ಯದಲ್ಲಿ ಪರಿಚಯಿಸುವಂತೆ ಇಲ್ಲಿ ಸದಾ ಕರುಬುತ್ತಿರುವ, ಉತ್ಸಾಹಹೀನ, ಸೋಮಾರಿತನದ ಕೆಳವರ್ಗದ ಕುಟುಂಬವು ತಮ್ಮ ದೈನಂದಿನ ಬದುಕಿನಲ್ಲಿ ಬೇರೆಯವರನ್ನ ದುರುಪಯೋಗಪಡೆಸಿಕೊಳ್ಳುವ ಕೈಚಳಕವನ್ನ ನೆಚ್ಚಿಕೊಂಡು ಬದುಕುತ್ತಿರುತ್ತಾರೆ. ಹೆಂಡತಿ, ಮಗ ಮತ್ತು ಮಗಳೊಂದಿಗೆ ಸ್ಲಂ ಒಂದರ ಅಪಾರ್ಟಮೆಂಟ್‌ನ ನೆಲಮಾಳಿಗೆಯಲ್ಲಿ  ಜೀವನ ಸಾಗಿಸುತ್ತಿರುವ ಕಿಮ್ ಕಿ –ಟೇಕ್‌ನ ಕುಟುಂಬ ಬಡತನದ ಅಂಚಿನಲ್ಲಿರುತ್ತದೆ. ಜೀವನೋಪಾಯಕ್ಕೆ ಪಿಜ್ಜದ ರಟ್ಟಿನ ಪುಡುಕೆಗಳನ್ನ ಮಾಡುವ ಕಿಮ್‌ನ ಕುಟುಂಬ ,ಪಕ್ಕದ ಮನೆಯವರು ರೋಗಕಾರಕ ಕ್ರಿಮಿಗಳನ್ನ ನಾಶ ಮಾಡುವ ಔಷಧಿಯನ್ನ ಸಿಂಪಡಿಸುತ್ತಿರುವಾಗ ಅದರ ಉಪಯೋಗ ತಮಗೂ ದೊರಕಲಿ ಎಂದು ತಮ್ಮ ಮನೆಯ ಬಾಗಿಲುಗಳನ್ನ ತೆರೆದಿಡುತ್ತಾರೆ. ಮಗ ಕಿ-ವೂ, ಮಗಳು ಕಿ-ಜುಂಗ್ ಪಕ್ಕದ ಕಾಫಿ ಶಾಪ್‌ನ ವೈ-ಫೈಯನ್ನ ಕದ್ದುಮುಚ್ಚಿ ಎಳೆದುಕೊಳ್ಳುತ್ತಾರೆ.

ಕಚುಗುಳಿಯಂತಿರುವ ಆರಂಬದ ಈ ದೃಶ್ಯಗಳು ಕಿಮ್ ಕಿ ಕುಟುಂಬದ ಜೀವನದ ದೋರಣೆಯನ್ನ ಸಹ ನಿರೂಪಿಸುತ್ತದೆ. ತಮ್ಮ ಹಸಿವಿನ ದುರಂತ ಬದುಕಿಗೆ ಯಾವುದೆ ಕರುಣೆ ತೋರಿಸದ ಸಮಾಜದ ಕುರಿತೂ ಕಿಮ್-ಕಿ ಕುಟುಂಬವು ಕೇರ್ ಮಾಡುವುದಿಲ್ಲ, ಉಳಿವಿಗಾಗಿ ಅವಕಾಶಗಳನ್ನ ಬಾಚಿಕೊಳ್ಳುವಾಗ ಅದರ ಸರಿ ತಪ್ಪುಗಳ ಚರ್ಚೆಗೆ ತಲೆಕಡೆಸಿಕೊಳ್ಳುವುದಿಲ್ಲ. ಇದನ್ನೆ ಬಾಂಗ್ ದುರಂತ ಕಾಮಿಡಿ ಎನ್ನುತ್ತಾನೆ. ಇದು ಸಿನಿಮಾದ ಕ್ಲೈಮಾಕ್ಸ್ ವರೆಗೂ ಪ್ರತಿಫಲಿಸುತ್ತಲೆ ಇರುತ್ತದೆ. ಮನುಷ್ಯ ಬದುಕಿನ ಪ್ರತಿಬಿಂಬ ಈ ದುರಂತ ಕಾಮಿಡಿಯೆ ಅಥವಾ ದುರಂತ ಕಾಮಿಡಿ ಮನುಷ್ಯನ ಜೀವನದ ಉದ್ದಕ್ಕೂ ನೈಜತೆಯಲ್ಲಿ ಕಾಡುತ್ತಲೆ ಇರುತ್ತದೆಯೆ? ಈ ಪ್ರಶ್ನೆಗಳು ನಮ್ಮನ್ನ ಹಿಂಬಾಲಿಸುತ್ತವೆ. ಈ ದುರಂತ ಕಾಮಿಡಿಯನ್ನ ನಿರೂಪಿಸಲು ನಿರ್ದೇಶಕ ರೂಪಕಗಳ ಮೊರೆ ಹೋಗುವುದಿಲ್ಲ. ಬದಲಿಕ ಲೌಕಿಕ ಜಗತ್ತಿನ ಎಲ್ಲಾ ಮಗ್ಗಲುಗಳನ್ನ ಶೋದಿಸುತ್ತಲೆ ಅದನ್ನೆ ತಬ್ಬಿಕೊಳ್ಳುತ್ತ ಬೆಳೆಯುತ್ತಾ ತನ್ನೊಳಗೆ ಪ್ರತಿಫಲಿಸುತ್ತದೆ.

ಆದರೆ ಬಡಜನರು ಕೆಳಸ್ತರದಲ್ಲಿ ನೆಲಮಾಳಿಗೆಯಲ್ಲಿ ಬದಕುತ್ತಾರೆ ಮತ್ತು ಈ ಶ್ರೇಣೀಕರಣಕ್ಕೆ ಕಾರಣವಿದೆ, ಯಾಕೆಂದರೆ ಅವರು ದಡ್ಡರು, ಸೋಮಾರಿಗಳು ಹಾಗಾಗಿ ಅವರು ಪರಾವಲಂಬಿಗಳು ಎನ್ನುವ ಸಂದೇಶವನ್ನು ಈ ‘ಪ್ಯಾರಸೈಟ್’ ಸಿನಿಮಾ ಹೊರಗೆಡಹುತ್ತದೆ. ಇದು ಜೀವಪರತೆಯ ಮೆರುಗನ್ನ ಹೊಸಕಿ ಹಾಕಿದಂತೆ ಬಾಸವಾಗುತ್ತದೆ. ಕಿಮ್-ಕಿ ಕುಟುಂಬವು ತನ್ನ ಆಸ್ತಿತ್ವಕ್ಕಾಗಿ ಈ ಮೋಸದಾಟ ಆಡುವುದರಿಂದ ಅವರಿಗೆ ನೈತಿಕತೆ ಪ್ರಶ್ನೆ ಉದ್ಬವಿಸುವುದಿಲ್ಲ ಎನ್ನುವ ದೋರಣೆ ಕಿರಿಕಿರಿ ಉಂಟು ಮಾಡುತ್ತದೆ. ಕ್ರಿಮಿನಾಶಕ ಮತ್ತು ಬಡಜನತೆಯನ್ನ ಅಸಂಗತವಾಗಿ ಸಮೀಕರಿಸಲಾಗುತ್ತದೆ. ಒಟ್ಟಾರೆಯಾಗಿ ಕಿಮ್ ಕಿ ಕುಟುಂಬದ ಬಡತನವನ್ನ ವೈನೋದಿಕ ಉಪಶಮನದಂತೆ ಬಳಸಿಕೊಂಡಿರುವುದನ್ನ ನಿರ್ದೇಶಕನ ಯಶಸ್ಸು ಎನ್ನಬೇಕೆ ಅಥವಾ ಅಸೂಕ್ಷ್ಮತೆ ಎಂದು ಟೀಕಿಸಬೇಕೆ? ಇಲ್ಲಿ ಬಡತನವನ್ನ ವೈಬವೀಕರಿಸುವುದಿಲ್ಲ ಎಂಬುದು ಮಾತ್ರ ನಿಜಕ್ಕೂ ಶ್ಲಾಘನೀಯ ಅಂಶ.

ಕತೆ ಮುಂದುವರೆದಂತೆ ಆಕಸ್ಮಿಕ ಸಂದರ್ಭವೂಂದರಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವ ಕಿ-ವೂ ತನ್ನ ಚಾಕಚಕ್ಯತೆ ಬಳಸಿ ಶ್ರೀಮಂತ ಪಾರ್ಕ ಕುಟುಂಬದ ಮಗಳಿಗೆ ಮನೆ ಪಾಠ ಮಾಡುವ ಶಿಕ್ಷಕನಾಗಿ ಆ ಭವ್ಯ ಬಂಗಲೆಯೊಳಗೆ ಸೇರಿಕೊಳ್ಳುತ್ತಾನೆ, ಆ ನಂತರ ಈತನ ಮೂಲಕ ಆತನ ಸಹೋದರಿ ಕಿ-ಜುಂಗ್ ಡ್ರಾಯಿಂಗ್ ಶಿಕ್ಷಕಿಯಾಗಿ, ತಂದೆ ಕಿಮ್ –ಕಿ ಡ್ರೈವರ್ ಆಗಿ ತಾಯಿ ಮನೆಕೆಲಸದ ಸಹಾಯಕಿಯಾಗಿ ಆ ಶ್ರೀಮಂತ ಕುಟುಂಬದ ಭವ್ಯ ಬಂಗೆಯೊಳಗೆ ನುಸುಳಿಕೊಳ್ಳುತ್ತಾರೆ. ಆದರೆ ಪಾರ್ಕ ಕುಟುಂಬಕ್ಕೆ ತಾವೆಲ್ಲರೂ ಪರಸ್ಪರ ಅಪರಿಚಿತರು ಎಂದೆ ನಂಬಿಸಿರುತ್ತಾರೆ.

ಇಲ್ಲಿ ದೊಡ್ಡ ವ್ಯಂಗ್ಯವಿದೆ. ಆ ಶ್ರೀಮಂತ ಕುಟುಂಬದಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದ ಡ್ರೈವರ್, ಮನೆಗೆಲಸದವಳ ಮೇಲೆ ಸುಳ್ಳು ಆಪಾದನೆ ಹೊರೆಸುವುದರ ಮೂಲಕ ವಜಾಗೊಳಿಸಿ ಇವರು ಒಳಸೇರಿಕೊಳ್ಳುವ ಈ ಇಡೀ ಪ್ರಹಸನ ಮತ್ತೊಂದು ದುರಂತ ಕಾಮಿಡಿಯಂತಿದೆ.  ಮತ್ತೊಂದು ಕೆಳವರ್ಗದ ಜನರ ಕೆಲಸ ಕಸಿದುಕೊಳ್ಳುವುದರ ಮೂಲಕ ಅವರಿಗೆ ಪಾಶವಿ ಸ್ವರೂಪವಾಗುವ ಕಿಮ್-ಕಿ ಕುಟುಂಬ ಬಡತನದಲ್ಲಿರುವ ತಮ್ಮ ಆಸ್ತಿತ್ವಕ್ಕಾಗಿ ಈ ಮರೆಮೋಸದ ಕೈಚಳಕ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಸಮರ್ಥನೆ ಇದೆಯೆ? ಇಲ್ಲವೆ? ಇಲ್ಲಿ ನಿರ್ದೇಶಕ ಬಾಂಗ್ ಅದರ ಚರ್ಚೆಯ ತಂಟೆಗೆ ಹೋಗುವುದಿಲ್ಲ. ಆದರೆ ವರ್ಗ ತಾರತಮ್ಯವನ್ನ ವಿವರಿಸುವಾಗ ಈ ಸಂಗತಿಯನ್ನ ನಿರ್ಲಕ್ಷಿಸಲು ಸಾದ್ಯವಿಲ್ಲ. ಆದರೆ ನಿರ್ದೇಶಕನಿಗೆ ಇದು ಮುಖ್ಯವೆನಿಸಿಲ್ಲ.

ಅಸಹಾಯಕ ಬಡತನದ ಹಸಿವು ವರ್ಸಸ್  ಸೊಮ್ಮುಗೆಡೆಸುವ ವೈಭವದ ಶ್ರೀಮಂತಿಕೆಯ ನಡುವಿನ ವರ್ಗ ಸಂಘರ್ಷದ ಮೆಲೋಡ್ರಾಮವನ್ನ ಬಾಂಗ್ ಸ್ಪಷ್ಟವಾಗಿ ತಿರಸ್ಕರಿಸುತ್ತಾನೆ. ಆದರೆ ಈ ಸಂಘರ್ಷದ ಬದಲಿಗೆ ವರ್ಗ ಸಂಬಂದಗಳ ಸಂಕೀರ್ಣತೆ, ಟೊಳ್ಳುತನವನ್ನ ನಿರೂಪಿಸುತ್ತ ಹೋಗುತ್ತಾನೆ. ಆದರೂ ಸಹ ಈ ಸಂಬಂದಗಳ ಆತ್ಮದೊಳಗೆ ವರ್ಗ ಸಂಘರ್ಷ ಚಿಗುರೊಡೆಯುತ್ತದೆ ಎನ್ನುವ ಸಾದ್ಯತೆಗಳನ್ನ ನಿರ್ದೇಶಕ ಸ್ವತಃ ನಿರಾಕರಿಸುತ್ತಾನೆ. ಆದರೆ ನಿರಾಕರಣೆಯ ಮೂಲಕ ಚಿತ್ರಕತೆಗೆ ಒಂದು ಮಿತಿಯನ್ನ ಹೇರಿರುವುದು ನಮಗೆ ಅನುಭವವಾಗುತ್ತದೆ. ಕಲೋನಿಯಲೋತ್ತರದ ದಶಕಗಳಲ್ಲಿ ದ.ಕೊರಿಯ ಅಡಾವುಡಿಯಲ್ಲಿ, ಒಂದು ಬಗೆಯ ದುಡುಕುತನದಲ್ಲಿ ತೀವ್ರ ಗತಿಯಲ್ಲಿ ಅಬಿವೃದ್ದಿ ಹೊಂದಿತು. ಈ ಅಬಿವೃದ್ದಿಯ ಕಾಲಘಟ್ಟದಲ್ಲಿ ಸಂಪತ್ತು ಮತ್ತು ಹಸಿವಿನ ನಡುವಿನ ವೈರುದ್ಯಗಳಿಗೆ ತಲೆಕೆಡಿಸಿಕೊಳ್ಳದ ದ.ಕೊರಿಯ ಸಮಾಜವು ಈ ವ್ಯವಸ್ಥೆಗೆ ಮದ್ಯಮವರ್ಗದ ಮನಸ್ಥಿತಿಯಲ್ಲಿ ಹೊಂದಿಕೊಂಡಿತು. ಇದನ್ನೆ ಮುಂದುವರೆಸಿದ ಬಾಂಗ್‌ರಂತಹ ನಿರ್ದೇಶಕರು  ಹಸಿವು ಮತ್ತು ಶ್ರೀಮಂತಿಕೆಯ ಈ ಎರಡು ತಿಕ್ಕಾಟಗಳು ಎಲ್ಲಿಯೂ ಸೂಕ್ಷ್ಮವಾದ ಹೋರಾಟದ, ಸಂಘರ್ಷದ ಹಾದಿ ತುಳಿಯದಂತೆ ಎಚ್ಚರ ವಹಿಸುತ್ತಾರೆ ಮತ್ತು ಜಾಣತನದಿಂದ ಇದು ವರ್ಗಗಳ ದೃವಿಕರಣ ಎಂದು ಹೇಳುತ್ತಾರೆ. ಇಲ್ಲಿ ಶ್ರೀಮಂತಿಕೆಯ ಅವನತಿಯ ಮೂಲಕ ಬಡಜನರ ಆಸ್ತಿತ್ವದ ಹಕ್ಕು ಸ್ಥಾಪನೆ ತಾರ್ಕಿಕ ಅಂತ್ಯ ತಲುಪುವುದೂ ಇಲ್ಲ. ಬದಲಿಗೆ ಎರಡೂ ವರ್ಗಗಳ ಸೋಲುಗೆಲುವು ಕಡೆಗೂ ದುರಂತದಲ್ಲಿ ಅಂತ್ಯಗೊಳ್ಳುತ್ತದೆ ಎಂದು ನಿರೂಪಿಸುತ್ತಾರೆ. ‘ಪ್ಯಾರಸೈಟ್’ ಸಿನಿಮಾದ ಅಂತ್ಯವೂ ಸಹ ಬೆಚ್ಚಿಬೀಳಿಸುವಂತಹ ಬೀಕರ ದುರಂತವಾಗಿದೆ.

ಈ ಸಿನಿಮಾದಲ್ಲಿನ ಅನೇಕ ಘಟನೆಗಳು ಬಡಜನರು ತಮ್ಮ ನಿರ್ಗತಿಕತೆಯಲ್ಲಿ ನೆಮ್ಮದಿಯಿಂದಿರುತ್ತಾರೆ ಎನ್ನುವ ಅಂಶವನ್ನ ಪದೆ ಪದೆ ಜ್ಞಾಪಿಸುತ್ತದೆ. ಶ್ರೀಮಂತ ಕುಟುಂಬ ಪಾರ್ಕ ದಂಪತಿಗಳ ಮಗ ‘ಯಾಕೆ ಡ್ರೈವರ್ (ಅಪ್ಪ), ಮನೆಕೆಲಸದ ಸಹಾಯಕಿ (ಅಮ್ಮ), ಶಿಕ್ಷಕಿ (ಮಗಳು)ಯ ದುರ್ವಾಸನೆ ಒಂದೆ ತೆರನಾಗಿದೆ’ ಎಂದು ಪ್ರಶ್ನಿಸುವುದರ ಮೂಲಕ ತಾವೆಲ್ಲ ಬೇರೆಯವರೆಂಬ ಮರೆ ಮೋಸದಲ್ಲಿ ಆ ಮನೆಯಲ್ಲಿ ನುಸುಳಿರುವ ಕಿಮ್ ಕಿ ಕುಟುಂಬಕ್ಕೆ ಭಯ ಹುಟ್ಟಿಸುತ್ತಾನೆ. ತಮ್ಮ ದೇಹಕ್ಕಂಟಿದ ಈ ಕೊಳೆಯನ್ನ ಯಾವುದೆ ಸೋಪಿನಿಂದ ತೊಳೆಯಲು ಸಾದ್ಯವಿಲ್ಲ ಎಂದು ಹೇಳುವ ಆತನ ಮಗ ಕಿಮ್-ವೂ ಕಡೆಗೂ ಒಂದು ದಿನ ಈ ಅಸಹಾಯಕತೆ, ಸೋಲಿನಿಂದ ಹೊರಬರಲೇಬೇಕು ಎನ್ನುವ ಬಯಕೆ ವ್ಯಕ್ತಪಡಿಸುತ್ತಾನೆ. ಈ ಶ್ರೀಮಂತ ಕುಟುಂಬದ ಮಾಲೀಕ ಪಾರ್ಕ ಪದೆ ಪದೆ ಈ ದುರ್ವಾಸನೆ ಕುರಿತು ಅಸಹನೆ ವ್ಯಕ್ತಪಡಿಸುತ್ತಿರುತ್ತಾನೆ. ಇದು ತಂದೆ ಕಿಮ್ ಕಿಗೆ ಕಹಿ ಬಾವನೆ ಮೂಡಿಸುತ್ತದೆ. ತಮ್ಮ ಬದುಕು ದುರ್ಗಂದ ಬೀರುವ ಕೊಳೆ ಬಟ್ಟೆಯಂತೆ ಎಂದು ಅಣಕಿಸಿದಂತಾಗಿ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಒಂದು ಹಂತದಲ್ಲಿ ತಮ್ಮ ಕ್ರೋದವನ್ನ ಸ್ಫೋಟಿಸುತ್ತಾನೆ. ಈ ಕ್ರೋದ ಮುಂದೆ ಅನೇಕ ದುರಂತದ ತಿರುವುಗಳಿಗೆ ಕಾರಣವಾಗುತ್ತದೆ.

‘ಪ್ಯಾರಸೈಟ್’ ಸಿನಿಮಾ ಶ್ರೀಮಂತರ ತಗಲೂಫಿತನ ಮತ್ತು ಬಡಜನರ ನಿರುದ್ವೇಗವನ್ನ ಮನಸೋ ಇಚ್ಚೆ ರೂಕ್ಷಗೊಳಿಸುತ್ತದೆ. ನಿರ್ದೇಶಕ ಬಾಂಗ್ ಸಂಪತ್ತಿನ ಅಸಮಾನ ಹಂಚಿಕೆಯನ್ನ ವಿಮರ್ಶಾತ್ಮಕವಾಗಿ ವಿಶ್ಲೇಶಿಸುತ್ತಾನೆ. ಎಂತಹ ಹಿಂಸೆಗಳು, ಕೊಲೆಗಳು ನಡೆದರೂ ಸಹ ಶ್ರೀಮಂತರು ಅದರಿಂದ  ಪಾಠ ಕಲಿಯುವುದಿಲ್ಲ, ವರ್ಗದಲ್ಲಿ ತಮ್ಮ ವಿರುದ್ದ ನೆಲೆಯಲ್ಲಿರುವವರೊಂದಿಗೆ ಬೆರೆಯುವುದಿಲ್ಲ ಎನ್ನುವ ಅಬಿಮತವನ್ನ ಈ ಸಿನಿಮಾವು ದ್ವನಿಪೂರ್ಣವಾಗಿ ಬೆಂಬಲಿಸುತ್ತದೆ. ಇದನ್ನೆ ನಿರ್ದೇಶಕ ಬಾಂಗ್ ದೃವೀಕರಣ ಎಂದು ಕರೆಯುತ್ತಾನೆ. ಈ ವರ್ಗ ಅಸಮಾನತೆಯ ಕ್ರೂರತೆ ಮತ್ತು ಆಳವನ್ನ ಕಾಲಜ್ಞಾನಿಯಂತೆ ಭವಿಷ್ಯ ನುಡಿಯಲು ಸಾದ್ಯವಿಲ್ಲ ಎನ್ನುವ ನಿರ್ದೇಶಕ ಕ್ಲೈಮಾಕ್ಸ್ನಲ್ಲಿ ಈ ಎಲ್ಲಾ ಕಾರಣಗಳಿಂದಾಗಿ ಅರಾಜಕತೆ ಉಂಟಾಗುತ್ತದೆ ಎಂದು ನಿರೂಪಿಸುತ್ತಾನೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ‘ಪ್ಯಾರಸೈಟ್’ ಬಾಂಗ್‌ನ ಕುಪಿತ ಚಿತ್ರ ಎಂದು ಹೇಳಬಹುದು. ತನ್ನ ಕುಪಿತ ಮನಸ್ಸನ್ನ ದುರಂತ ಕಾಮಿಡಿಯ ಮೂಲಕ ಅಬಿವ್ಯಕ್ತಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ಇದರ ಕೇಂದ್ರದಲ್ಲಿ ಇಡೀ ಸಿನಿಮಾ ಕಟ್ಟುವಲ್ಲಿ ಸಫಲನಾಗಿದ್ದಾನೆ.

ಜಗತ್ತು ದಕ್ಷಿಣ ಕೊರಿಯಾದಿಂದ ಮುಂದಿನ ಸಿನಿಮಾಗಳಿಗಾಗಿ ಕುತೂಹಲದಿಂದ ಕಾಯುತ್ತಿರುವಂತೆ ಮಾಡುವಲ್ಲಿ  ‘ಪ್ಯಾರಸೈಟ್’ ಯಶಸ್ವಿಯಾಗಿದೆ. ನೋಡಬೇಕಾದ, ನೋಡಿ ಚರ್ಚಿಸಬೇಕಾದ ಸಿನಿಮಾ.

ಮರೆಯುವ ಮುನ್ನ

21ನೆ ಶತಮಾನದ ದ.ಕೊರಿಯಾದ ಕೆಲ ಪ್ರಮುಖ ಸಿನಿಮಾಗಳು : ದ ಏಜ್ ಆಫ್ ಶಾಡೋಸ್, ಟ್ರೇನ್ ಟು ಬೂಶನ್, ಮೆಮೊರೀಸ್ ಆಫ್ ಮರ್ಡರ್, ಸ್ಪಿಂಗ್ ಸಮ್ಮರ್ ಫಾಲ್ ವಿಂಟರ್. .  ಸ್ಪಿಂಗ್, ಟ್ರುತ್ ಬಿನೀತ್, ಮದರ್, ಬರ್ನಿಂಗ್, ಓಲ್ಡ್ ಬಾಯ್, ಇತ್ಯಾದಿ – ಪಟ್ಟಿ ಅಪೂರ್ಣ.

ಕೃಪೆ: ಸಂವಾದ ಮಾಸಪತ್ರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights