ಅಂಬೇಡ್ಕರ್ ಮೊಮ್ಮಗ ರಾಜರತ್ನ ಅಂಬೇಡ್ಕರ್ ಪೇಜ್‌ ಡಿಲೀಟ್ ಮಾಡಲು ಫೇಸ್‌ಬುಕ್‌ ಯತ್ನ!

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ನಿರಂತರವಾಗಿ ದನಿ ಎತ್ತುತ್ತಿರುವ, ಅವರ ಜನ ವಿರೋಧಿ ಆಡಳಿತ ಮತ್ತು ಕಾರ್ಯತಂತ್ರಗಳ ವಿರುದ್ಧ ಹೋರಾಟ ನಡೆಸುತ್ತಿರುವ, ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್‌ ಅವರ ಫೇಸ್‌ಬುಕ್‌ ಫೇಜನ್ನು ಡಿಲೀಟ್‌ ಮಾಡಲು ಫೇಸ್‌ಬುಕ್‌ ಯತ್ನಿಸಿದೆ.

ಸಂವಿಧಾನದ ಎಲ್ಲಾ ಅಂಗಗಳು ಆರೆಸ್ಸೆಸ್ಸ್‌ ವಶಪಡಿಸಿಕೊಂಡಿರುವ ಸಮಯದಲ್ಲಿ ಅವರ ವಿರುದ್ದವಾಗಿ ಮಾತನಾಡುವ ನನ್ನ ಪೇಜನ್ನು ಫೇಸ್‌‌ಬುಕ್ ಡಿಲಿಟ್ ಮಾಡುತ್ತಿದೆ ಎಂದು ರಾಜರತ್ನ ಅಂಬೇಡ್ಕರ್‌ ಅವರು ವಿಡಿಯೋ ಮಾಡಿ ಆರೋಪಿಸಿದ್ದರು. ಮತ್ತೊಂದು ವಿಡಿಯೋವನ್ನು ತಮ್ಮ ಪೇಜ್‌ನಲ್ಲಿ ಅಪ್ಲೋಡ್ ಮಾಡಿದ್ದು ಅದರಲ್ಲಿ ತನ್ನ ಐಟಿ ಸ್ನೇಹಿತರು ಫೇಸ್‌ಬುಕ್‌ನೊಂದಿಗೆ ವ್ಯವಹರಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಫೇಸ್‌‌ಬುಕ್‌ ಪೇಜ್‌‌ನ ವಿಡಿಯೋದಲ್ಲಿ ನಿನ್ನೆ ಮಾಹಿತಿ ನೀಡಿರುವ ’ಭಾರತೀಯ ಬೌದ್ದ ಸಮಾಜ’ದ ಅಧ್ಯಕ್ಷರೂ ಆಗಿರುವ ರಾಜರತ್ನ ಅಂಬೇಡ್ಕರ್‌, “ಇದು ನನ್ನ ಕೊನೆಯ ವಿಡಿಯೋವಾಗಿದೆ, ಯಾಕೆಂದರೆ ನೆವೆಂಬರ್‌ 12 ರಂದು ನನ್ನ ಪೇಜನ್ನು ಡಿಲೀಟ್ ಮಾಡುವುದಾಗಿ ಪೇಸ್‌‌ಬುಕ್ ಈ ಮೈಲ್ ಮಾಡಿದೆ. ಪೇಜ್‌‌ನಲ್ಲಿ ಯಾವುದಾದರು ಸಾಮುದಾಯಿಕ ನಿಯಮದ ಉಲ್ಲಂಘನೆ ಮೀರಿರುವ ವಿಷಯವನ್ನು ಹಾಕಿದ್ದರೆ, ಅವರು ಅದರ ವಿರುದ್ದ ಕ್ರಮಗಳನ್ನು ತೆಗೆದುಕೊಳ್ಳಬೇಕು, ಆದರೆ ಇಲ್ಲಿ ನನ್ನ ಇಡಿ ಪೇಜನ್ನೆ ಡಿಲಿಟ್ ಮಾಡುತ್ತಿದ್ದಾರೆ. ನನ್ನ ಪೇಜ್‌‌ನಲ್ಲಿ ಒಂದು ವಿಡಿಯೋ ಹಾಕಿದರೆ 8 ನಿಮಿಷಕ್ಕೆ ಸುಮಾರು 56 ಲಕ್ಷ ಜನರನ್ನು ತಲುಪುತ್ತದೆ. ಇದು ಒಂದೇ ದಿನದಲ್ಲಿ ಹೆಚ್ಚಿದ್ದಲ್ಲ ಮೂರು ನಾಲ್ಕು ವರ್ಷದಿಂದ ಈ ಬೆಳವಣಿಗೆ ಆಗಿದೆ, ಆದರೆ ಪೇಸ್‌‌ಬುಕ್ ಈಗ ಪೇಜ್ ಡಿಲೀಟ್ ಮಾಡುವುದಾಗಿ ನೋಟಿಸ್ ನೀಡಿದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಿಜೆಪಿ ಒಲವು ಹೊಂದಿದ್ದ ಫೇಸ್‌ಬುಕ್‌ ಕಾರ್ಯನಿರ್ವಾಹಕಿ ಅಂಕಿದಾಸ್‌ ರಾಜೀನಾಮೆ!

“ಇದು ಯಾಕೆ ಆಗುತ್ತಿದೆ ಎಂದರೆ, ಮಾಧ್ಯಮ ಸೇರಿದಂತೆ ಸಂವಿಧಾನದ ಎಲ್ಲಾ ಅಂಗಗಳನ್ನು ಆರೆಸ್ಸೆಸ್ ವಶಪಡಿಸಿಕೊಂಡಾಗಿದೆ. ಕೊನೆಯದಾಗಿ ನಮಗೆ ಸಾಮಾಜಿಕ ಜಾಲತಾಣವೆಂಬ ಹೊಸ ಅಂಗ ಸಿಕ್ಕಿತ್ತು. ಇದರಲ್ಲಿ ನಮ್ಮ ಮಾತನ್ನು ಜನರಿಗೆ ತಲುಪಿಸಬಹುದಾಗಿತ್ತು. ನನ್ನ ಪೇಜ್‌ಅನ್ನು ಭಾರತ ಮಾತ್ರವಲ್ಲದೆ ವಿಶ್ವದ 18 ದೇಶಗಳಲ್ಲಿ ವೀಕ್ಷಿಸುತ್ತಿದ್ದರು, ಈಗ ಇದನ್ನು ಅನಿರೀಕ್ಷಿತವಾಗಿ ಡಿಲೀಟ್ ಮಾಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದರು.

ಇದೀಗ ಮತ್ತೆ ಇನ್ನೊಂದು ವಿಡಿಯೋ ಹಾಕಿರುವ ಅವರು ಹಲವಾರು ಐಟಿ ಕ್ಷೇತ್ರದ ತಜ್ಞರು ನಿನ್ನೆ ರಾತ್ರಿ ಪೂರ್ತಿ ಕುಳಿತು ಕೊಂಡು ಫೇಸ್‌ಬುಕ್‌ನೊಂದಿಗೆ ವ್ಯವಹರಿಸಿ ಸಮಸ್ಯೆಯನ್ನು ಬಗೆಹರಿಸಿದ್ದು, ಪ್ರಸ್ತುತ ನನ್ನ ಫೇಸ್‌‌ಬುಕ್ ಪೇಜ್ ಉಳಿದೆ ಎಂದಿರುವ ಅವರು, “ಈ ಪುಟವನ್ನು ಉಳಿಸಿದ್ದಕ್ಕಾಗಿ ಎಲ್ಲಾ ಐಟಿ ವೃತ್ತಿಪರರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ವಡಾಲಾದ ಡಾ.ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕರೂ ಆಗಿರುವ ರಾಜರತ್ನ ಅಂಬೇಡ್ಕರ್, ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಭಾರತದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್‌ನ ಕಡು ಟೀಕಾಕಾರರಾಗಿರುವ ರಾಜರತ್ನ, ಆರೆಸ್ಸೆಸ್ ಒಂದು ಭಯೋತ್ಪಾದನಾ ಸಂಘಟನೆ ಹಾಗೂ ಅದನ್ನು ಬ್ಯಾನ್ ಮಾಡಬೇಕಾಗಿದೆ, ಅದರ ವಿಚಾರದಾರೆಯನ್ನು ಧ್ವಂಸಗೊಳಿಸಿ ಎಂದು ಈ ಹಿಂದೆ ಅವರು ಕರೆ ನೀಡಿದ್ದರು.


ಇದನ್ನೂ ಓದಿ: ದ್ವೇಷದ ಪ್ರಚೋದನೆಯಿಂದ ಲಾಭ ಗಳಿಸುತ್ತಿದೆ ಫೇಸ್‌ಬುಕ್‌; ಉದ್ಯೋಗ ತೊರೆದ ಭಾರತ ಮೂಲದ ಇಂಜಿನಿಯರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights