ಫೇಸ್ ವ್ಯಾಲ್ಯೂ ಕಳೆದ ಫೇಸ್ ಮಾಸ್ಕ್…! ಚುನಾವಣೆಗಳಲ್ಲಿ ಸ್ಟಾರ್‌ಗಳೂ ಇಲ್ಲ, ಸ್ಟಾರ್‌ ಪ್ರಚಾರಕರೂ ಇಲ್ಲ!

ಕರ್ನಾಟಕ ರಾಜ್ಯದಲ್ಲಿ ನಾಲ್ಕು ಕ್ಷೇತಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಆಡಳಿತಾರೂಢ ಬಿಜೆಪಿ ಪಕ್ಷ ಬಿಟ್ಟು ಮಿಕ್ಕೆಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಫೈನಲ್ ಮಾಡಿ ಆಗಿದೆ. ಅಭ್ಯರ್ಥಿಗಳಿಗೆ ತಮ್ಮ ಪಕ್ಷದ ಹಿರಿಯರು, ಪ್ರಭಾವಿಗಳು ತಮ್ಮ ಪರವಾಗಿ ಚುನಾವಣಾ ಭಾಷಣ ಮಾಡಲು ಬರಲಿ ಎಂದು ಆಸೆ. ಪಕ್ಷದಲ್ಲಿ ಸ್ಟಾರ್ ಪ್ರಚಾರಕರೆಂದು ಗುರುತಿಸಿಕೊಂಡಿರುವ ಕೆಲವು ಮುಖಂಡರು ತಮ್ಮನ್ನು ಯಾರೂ ಚುನಾವಣಾ ಭಾಷಣಕ್ಕೆ ಕರೆಯದಿದ್ದರೆ ಸಾಕು. ಪ್ರಚಾರಕ್ಕೆ ಹೋಗುವ ಚಾನ್ಸೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ.

ರಾಜಕೀಯ ಧುರೀಣರಿಗೆ ಕೈಗೆ ಮೈಕು, ಮುಂದೆ ನಾಲ್ಕು ಜನ ಚಪ್ಪಾಳೆ ತಟ್ಟುವ ಜನರಿದ್ದರೆ ಸಾಕು ಗಂಟೆಗಟ್ಟಲೆ ಭಾಷಣ ಕೊರೆಯಲು ಸಿದ್ಧರಾಗುತ್ತಾರೆ. ಹುರುಪುಗೊಳ್ಳುತ್ತಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚುನಾವಣಾ ಪ್ರಚಾರಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ರಾಜಕೀಯ ಸಭೆ ಮತ್ತು ಪ್ರಚಾರ ಸಭೆ ನಡೆಯುವ ಸ್ಥಳಗಳಲ್ಲಿ ಇಂತಿಷ್ಟೇ ಜನ ಸೇರಬೇಕು ಎಂದು ಹೇಳಿದೆ.

ಇನ್‍ಡೋರ್ ಹಾಲ್‍ಗಳಾದರೆ 200 ಜನ ಮೀರಬಾರದು. ಸ್ಟೇಡಿಯಂ, ದೊಡ್ಡ ದೊಡ್ಡ ಗ್ರೌಂಡ್ಸ್, ಮೈದಾನಗಳಾದರೆ, ಅಲ್ಲಿನ ಸೀಟಿಂಗ್ ಕೆಪಾಸಿಟಿಯ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಕೊಟ್ಟಿರಬೇಕು. ಜೊತೆಗೆ ಷರತ್ತುಗಳು ಅನ್ವಯವಾಗುತ್ತದೆ. ಫೇಸ್ ಶೀಲ್ಡ್, ಫೇಸ್ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ, ತಪ್ಪಿದರೆ ಕ್ರಮ ಅನಿವಾರ್ಯವಾಗಲಿದೆ.

ಇದನ್ನೂ ಓದಿ: ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ಧ FIR ಇಲ್ಲ, ತನಿಖೆ ಇಲ್ಲ: ಪೊಲೀಸರ ವಿರುದ್ಧ ಕೋರ್ಟ್‌ಗೆ ಜಸಂಪ

ಸ್ಟಾರ್ ಪ್ರಚಾರಕರಿಗೆ ತಮ್ಮ ಫೇಸ್ ವ್ಯಾಲ್ಯೂನೇ ಮುಖ್ಯ ಬಂಡವಾಳ. ಫೇಸ್ ಶೀಲ್ಡ್, ಫೇಸ್ ಮಾಸ್ಕ್ ಹಾಕುವುದರಿಂದ ತಮ್ಮ ಮುಖ ಮುಕ್ಕಾಲು ಭಾಗ ಮುಚ್ಚುವುದರಿಂದ ಫೇಸ್ ವ್ಯಾಲ್ಯೂ ತೋರಿಸಲು ಅವಕಾಶವೇ ಇಲ್ಲದಂತಾಗಿದೆ. ಉಪ ಚುನಾವಣೆಯಿರಲಿ, ಮುಖ್ಯ ಚುನಾವಣೆಯೇ ಇರಲಿ ಸಿನಿಮಾ ಸ್ಟಾರ್‍ಗಳ ಹಾಜರಿ ಮುಖ್ಯವಾಗಿರುತ್ತಿತ್ತು. ಸ್ಟಾರ್ ನಟ ಅಥವಾ ನಟಿಯರನ್ನು ಸಭೆಗಳಿಗೆ ಕರೆಸಿ ಆ ಮೂಲಕ ಜನಗಳು ಹೆಚ್ಚು ಹೆಚ್ಚು ಸೇರುವಂತೆ ಮಾಡುತ್ತಿದ್ದರು. ಆದರೆ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಮೇಲೆ ನಟ-ನಟಿಯರೂ, ರಾಜಕೀಯ ವ್ಯಕ್ತಿಗಳ ಜತೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಾಗೆಯೇ ರಾಜಕೀಯ ನಾಯಕರು ಸಿನಿಮಾ ವ್ಯಕ್ತಿಗಳೆಂದರೆ ಬೆಚ್ಚಿಬೀಳುತ್ತಿದ್ದಾರೆ.

ಪಾಪ ಅಭ್ಯರ್ಥಿಗಳು ಸ್ಟಾರ್ ಗಳೂ ಇಲ್ಲದೇ, ಸ್ಟಾರ್ ಪ್ರಚಾರಕರೂ ಇಲ್ಲದೇ ಒದ್ದಾಡುತ್ತಿದ್ದಾರೆ. ಸ್ಟಾರ್ ಪ್ರಚಾರಕರು ಬರುವ 48 ಗಂಟೆ ಮುನ್ನ ಸ್ಥಳದ ಮಾಹಿತಿಯನ್ನು ನೀಡಿ ಅನುಮತಿ ಪಡೆಯಬೇಕು. ಸಾಮಾಜಿಕ ಅಂತರ ಕಾಪಾಡಲು ಪ್ರಚಾರದ ಸಭೆಯಲ್ಲೂ ಮಾರ್ಕ್ ಮಾಡಬೇಕು. ಇಷ್ಟೆಲ್ಲಾ ನಿಯಮ ಪಾಲಿಸಲು ಯಾವುದೇ ಸ್ಟಾರ್ ಪ್ರಚಾರಕರಿಗಾಗಲಿ, ಕ್ಷೇತ್ರದ ಅಭ್ಯರ್ಥಿಗಳಿಗಾಗಲಿ ಸಾಧ್ಯವಿಲ್ಲದ ಕಾರಣ ಫೇಸ್ ಮಾಸ್ಕ್ ನಿಂದ ಫೇಸ್ ವಾಲ್ಯೂ ಕಳೆದುಕೊಂಡಿರುವ ಸ್ಟಾರ್ ಪ್ರಚಾರಕರು ಅತ್ತ ದರಿ ಇತ್ತ ಪುಲಿ ಎಂಬ ಸಂದಿಗ್ಧತೆಯಲ್ಲಿ ಗಲಿಬಿಲಿಗೊಂಡಿದ್ದಾರೆ. ಅಭ್ಯರ್ಥಿಗಳು ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.


ಇದನ್ನೂ ಓದಿ: ಬಿಜೆಪಿ ಸಂಧಾನಕ್ಕೆ ಬಗ್ಗದ ಬಂಡಾಯಗಾರರು: ಚುಣಾವಣೆಯಲ್ಲಿ ಸ್ವತಂತ್ರ್ಯ ಸ್ಪರ್ಧೆ ಖಚಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights