ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ದಿನಾಂಕ ಪ್ರಕಟ…!

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ಪರೀಕ್ಷೆ ದಿನಾಂಕವನ್ನು ಶಿಕ್ಷಣ ಸಚಿವರು ಪ್ರಕಟಿಸಿದ್ದಾರೆ. ಜೂನ್ ಮೊದಲ ವಾರ ಎಸ್ಸೆಸ್ಸೆಲ್ಸಿ ಹಾಗೂ ಮೇ ಎರಡನೇ ವಾರ ದ್ವಿತೀಯ ಪಿಯು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್,  ಜೂನ್ ಮೊದಲ ವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಮೇ ಎರಡನೇ ವಾರ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು. ಮಕ್ಕಳಿಗೆ ಹೊರೆ ಆಗುವುದನ್ನು ತಡೆಯಲು ಈ ವರ್ಷ ಶೇ 30ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ ಎಂದಿದ್ದಾರೆ.

ಈ ಮುಂಚೆ ಇದ್ದ ಹಾಜರಾತಿಯನ್ನು ಸಡಿಲಗೊಳಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪರೀಕ್ಷೆಗೆ ಕುಳಿತುಕೊಳ್ಳಲು ಕನಿಷ್ಠ ಹಾಜರಾತಿ ನಿಯಮದಿಂದ ವಿನಾಯ್ತಿ ನೀಡಲಾಗಿದೆ ಎಂದರು. 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸುವಂತೆ ಪೋಷಕರಿಂದ ಒತ್ತಾಯ ಬಂದಿದ್ದು, ಅದರಲ್ಲೂ ಗ್ರಾಮೀಣ ಭಾಗದ ಪೋಷಕರಿಂದ ಹೆಚ್ಚಿನ ಬೇಡಿಕೆ ಇದ್ದು, ಪರಿಶೀಲಿಸಲಾಗುತ್ತಿದೆ. ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

‘ಪರೀಕ್ಷೆಗೆ ಯಾವ ಪಠ್ಯ ಅನಗತ್ಯ, ಪಿಯುಸಿಯಲ್ಲಿ ಯಾವುದು ಬಹಳ ಅಗತ್ಯ ಎಂಬ ಬಗ್ಗೆ ಪಠ್ಯ ಪುಸ್ತಕ ರಚಿಸಿದ ತಜ್ಞರು ಎರಡು ಸುತ್ತು ಸಭೆ ನಡೆಸಿದ್ದಾರೆ. ಆಯುಕ್ತರೂ ಮೂರು ಸುತ್ತಿನ ಸಭೆ ನಡೆಸಿ ಪಠ್ಯಗಳನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷವನ್ನು (2021–22) ಜುಲೈ 1ರಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights