ಲಖಿಂಪುರ ರೀತಿಯ ಘಟನೆಗಳು ದೇಶದಲ್ಲಿ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್‌

ಲಖಿಂಪುರ್‌ ಖೇರಿಯಲ್ಲಿ ನಡೆದಂತಹ ಘಟನೆ ಭಾರತದ ಇತರ ಭಾಗಗಳಲ್ಲಿ ನಡೆಯುತ್ತಲೆ ಇರುತ್ತವೆ. ಅದನ್ನು ಕೂಡಾ ಎಲ್ಲರೂ ಪ್ರಶ್ನಿಸಬೇಕು ಎಂದು ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು ಸಂವಾದವೊಂದರಲ್ಲಿ ಮಾತನಾಡುವಾಗ “ಲಖಿಂಪುರ್‌ ಖೇರಿಯಲ್ಲಿ ನಡೆದ ಘಟನೆ ಖಂಡನೀಯವಾಗಿದ್ದು, ಅದನ್ನು ಸಮರ್ಥಿಸುವುದಿಲ್ಲ. ಭಾರತದ ಇತರ ಭಾಗಗಳಲ್ಲಿಯೂ ಸಹಜವಾಗಿ ನಡೆಯುವ ಇಂತಹ ಘಟನೆಗಳ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಎಂದು ಕೇಳಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಅದನ್ನು ಗುರಿಯಾಗಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಗರು ಯಾರಾದರೂ ಸತ್ತರೆ ಕಾಂಗ್ರೆಸ್‌ನಿಂದ 1 ಕೋಟಿ ರೂ ಪರಿಹಾರ: ಶಾಸಕ ಅಮರೇಗೌಡ ಪಾಟೀಲ್

ಲಖಿಂಪುರ್ ಖೇರಿಯಲ್ಲಿ ನಾಲ್ವರು ರೈತರ ಹತ್ಯೆ ಮತ್ತು ಒಕ್ಕೂಟ ಸರ್ಕಾರದ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನದ ಕುರಿತು ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. “ಘಟನೆಯ ಬಗ್ಗೆ ಪ್ರಧಾನ ಮಂತ್ರಿಯಾಗಲಿ, ಇತರ ಮಂತ್ರಿಯಾಗಲಿ ಯಾಕೆ ಮಾತನಾಡುತ್ತಿಲ್ಲ ಮತ್ತು ಘಟನೆಯ ಬಗ್ಗೆ ಪ್ರಶ್ನಿಸಿದಾಗ ಸಮರ್ಥನೆ ನೀಡುವಂತೆ ಪ್ರತಿಕ್ರಿಯೆ ಯಾಕೆ ನೀಡಲಾಗುತ್ತದೆ” ಎಂದು ಅವರನ್ನು ಪ್ರಶ್ನಿಸಲಾಗಿತ್ತು.

ಇದಕ್ಕೆ ಉತ್ತರಿಸಿದ ನಿರ್ಮಲಾ ಅವರು, “ಖಂಡಿತವಾಗಿ ಅಲ್ಲ…ನೀವು ಕೇಳಿರುವ ಈ ಘಟನೆ ಖಂಡಿತ ಸಂಪೂರ್ಣ ಖಂಡನೀಯವಾಗಿದೆ, ನಮ್ಮಲ್ಲಿ ಪ್ರತಿಯೊಬ್ಬರೂ ಅದನ್ನೆ ಹೇಳುತ್ತಾರೆ. ಅದೇ ರೀತಿ ಬೇರೆಡೆ ಕೂಡಾ ಇದೇ ರೀತಿಯ ಘಟನೆ ನಡೆಯುತ್ತದೆ, ಇದು ನನ್ನ ಕಾಳಜಿ” ಎಂದು ಅವರು ಹೇಳಿದ್ದಾರೆ.

“ಭಾರತದಲ್ಲಿ ರೀತಿಯ ಸಮಸ್ಯೆಗಳು ದೇಶದ ಅನೇಕ ಭಾಗಗಳಲ್ಲಿ ಸಮಾನವಾಗಿ ನಡೆಯುತ್ತಿದೆ. ನೀವು, ಇತರರು ಹಾಗೂ ಡಾ.ಅಮರ್ತ್ಯ ಸೇನ್‌ ಅವರು ಸೇರಿದಂತೆ ಭಾರತವನ್ನು ತಿಳಿದಿರುವ ಅನೇಕರಿಗೆ ಹೇಳಲು ಬಯಸುವುದು, ಇಂತಹ ಘಟನೆಗಳು ಪ್ರತಿ ಭಾರಿ ಸಂಭವಿಸಿದಾಗ ಪ್ರಶ್ನೆಗಳನ್ನು ಕೇಳಬೇಕು. ಕೇವಲ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಮಾತ್ರವೆ ನಡೆದಾಗ ಮತ್ತು ಅದರಲ್ಲಿ ನನ್ನ ಕ್ಯಾಬಿನೆಟ್ ಸಹೋದ್ಯೋಗಿಯ ಮಗನೊಬ್ಬ ಇದ್ದಾನೆಂಬುದನ್ನು ಊಹಿಸಿ ಪ್ರಶ್ನಿಸುವುದಲ್ಲ. ಘಟನೆಯ ಬಗ್ಗೆ ಸರಿಯಾದ ವಿಚಾರಣೆ ನಡೆಸಿ ನ್ಯಾಯವನ್ನು ಎತ್ತಿಹಿಡಿಯುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ : ಮಂತ್ರಿಯ ಮಗನನ್ನು ಬಂಧಿಸಲು ಕಾರಣವೇನು? ಇನ್ಸೈಡ್ ಸ್ಟೋರಿ..

“ಇದು ಕೇವಲ ನನ್ನ ಪಕ್ಷ ಅಥವಾ ನನ್ನ ಪ್ರಧಾನ ಮಂತ್ರಿಯ ಬಗ್ಗೆ ಸಮರ್ಥಿಸುವುದಲ್ಲ. ಇದು ಭಾರತವನ್ನು ಸಮರ್ಥಿಸುವುದು. ನಾನು ಭಾರತಕ್ಕಾಗಿ ಮಾತನಾಡುತ್ತೇನೆ, ಬಡವರ ನ್ಯಾಯಕ್ಕಾಗಿ ಮಾತನಾಡುತ್ತೇನೆ. ನನ್ನನ್ನು ಗೇಲಿ ಮಾಡಲಾಗುವುದಿಲ್ಲ, ಒಂದು ವೇಳೆ ಗೇಲಿ ಮಾಡುತ್ತಿದ್ದರೆ, ನಾನು ಎದ್ದು ನಿಂತು ‘ಕ್ಷಮಿಸಿ, ಸತ್ಯಗಳ ಬಗ್ಗೆ ಮಾತನಾಡೋಣ’ ಎಂದು ಸಮರ್ಥಿಸಿಕೊಳ್ಳುತ್ತೇನೆ. ಇದು ನಿಮಗೆ ನನ್ನ ಉತ್ತರ” ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 3 ರಂದು ಯುಪಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಲಖಿಂಪುರ್‌ ಖೇರಿಗೆ ನೀಡಿದ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ವಾಪಾಸಾಗುತ್ತಿದ್ದ ರೈತರ ಮೇಲೆ ಕಾರುಗಳನ್ನು ಹರಿಸಲಾಗಿತ್ತು. ಈ ಕಾರಿನಲ್ಲಿ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಇದ್ದರು ಎಂದು ರೈತರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಲಖಿಂಪುರ್ ಹಿಂಸಾಚಾರದ ಆರೋಪಿ ಆಶಿಶ್ ಬಂಧನಕ್ಕೆ ಆಗ್ರಹ : ಅ.18ರಂದು ‘ರೈಲು ತಡೆ’ ಪ್ರತಿಭಟನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights