RSSಗೆ ಲಾಯಲ್‌; BJPಯಲ್ಲಿ ಬಿಎಸ್‌ವೈಗೆ ರೆಬಲ್‌: RSS ಸಿಎಂ ಕ್ಯಾಂಡಿಡೇಟ್‌ ಈಶ್ವರಪ್ಪ?

ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಸದ್ದು ಜೋರಾಗುತ್ತಲೇ ಇದೆ. ಇಷ್ಟು ದಿನ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅವರು ಸಿಎಂ ಯಡಿಯೂರಪ್ಪ ವಿರುದ್ದ ಭಾರೀ ವಾಗ್ದಾಳಿ ನಡೆಸುತ್ತಿದ್ದರು. ಇದೀಗ ಅವರ ಜೊತೆಗೆ ಈಶ್ವರಪ್ಪ ಕೂಡ ಸೇರಿಕೊಂಡಿದ್ದಾರೆ. ಬಿಎಸ್‌ವೈ ವಿರುದ್ದ ಬಹಿರಂಗವಾಗಿ ರಾಜ್ಯಪಾಲರಿಗೆ ದೂರು ನೀಡಿರುವ ಈಶ್ವರಪ್ಪರನ್ನು ರೆಬಲ್ ಸಚಿವ ಎಂದು ಹೇಳಲಾಗುತ್ತಿತ್ತು. ಆದರೆ, ನಾನು ರೆಬಲ್‌ ಅಲ್ಲ ಲಾಯಲ್‌ ಎಂದು ಈಶ್ವರಪ್ಪ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ಈಶ್ವರಪ್ಪ ಎಂದಿಗೂ ಆರ್‌ಎಸ್‌ಎಸ್‌ಗೆ ಲಾಯಲ್‌ ಆಗಿರುತ್ತಾರೆ. ಅಸಲಿಗೆ ಅವರು ರೆಬಲ್‌ ಆಗಿರುವ ಸಿಎಂ ಯಡಿಯೂರಪ್ಪ ವಿರುದ್ದವಷ್ಟೇ. ಕರ್ನಾಟಕದ ರಾಜಕೀಯದಲ್ಲಿ ಆರ್‌ಎಸ್‌ಎಸ್‌ ಮೂಲದವರನ್ನು ಮತ್ತಷ್ಟು ಮುನ್ನಲೆಗೆ ತರುವ ಉದ್ದೇಶದಿಂದ ಆರ್‌ಎಸ್‌ಎಸ್‌ ಯಡಿಯೂರಪ್ಪ ವಿರುದ್ದ ಗುಡುಗುತ್ತಲೇ ಇದೆ. ಇದಕ್ಕಾಗಿ ಈಗ ಈಶ್ವರಪ್ಪ ಅವರನ್ನು ಆರ್‌ಎಸ್‌ಎಸ್‌ ಮುಂದೆ ಬಿಟ್ಟಿದೆ.

ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ ಲೀಡರ್‌ಗಳಾಗಿರುವ ಬಿ.ಎಲ್‌ ಸಂತೋಷ್‌, ಗೋ ಮಧುಸೂಧನ್‌ ಅವರಿಗೆ ಆಪ್ತರಾಗಿರುವ ಈಶ್ವರಪ್ಪ ತಾವೂ ಮುಖ್ಯಮಂತ್ರಿಯಾಗಬೇಕು ಎಂಬ ಜಿಜ್ಞಾಸೆಯನ್ನು ಹೊಂದಿದ್ದಾರೆ. ಈ ಹಿಂದೆ ಇದ್ದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದೂ ಇದೇ ಬಿಎಲ್‌ ಸಂತೋಷ್‌. ಆದರೆ, ಆಗ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಉಂಬುತನದಲ್ಲಿದ್ದವರಿಗೆ ಇದೀಗ ಯಡಿಯೂರಪ್ಪರನ್ನೂ ಸಿಎಂ ಪಟ್ಟದಿಂದ ಇಳಿಸಿ, ಆರ್‌ಎಸ್‌ಎಸ್‌ ಹಿನ್ನೆಲೆಯವರನ್ನು ಆ ಸೀಟಿಗೆ ಕೂರಿಸುವ ಇರಾದೆ ಹೆಚ್ಚಾಗಿದೆ.

ಇದನ್ನೂ ಓದಿ: ಕಾಶಿ, ಮಥುರಾದ ಮಸೀದಿ ಕೆಡವಿ ಮಂದಿರ ನಿರ್ಮಾಣ: ಹೇಳಿಕೆಗೆ ಈಗಲೂ ಬದ್ದ: ಈಶ್ವರಪ್ಪ

ಈ ಸ್ಥಾನಕ್ಕಾಗಿ ಈಶ್ವರಪ್ಪ ಅವರೂ ಒಂದು ಕೈ ನೋಡೋಣ ಎಂದು ಹಣವಣಿಸುತ್ತಿದ್ದಾರೆ. 2009ಯಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಬಿಎಸ್‌ವೈ ಸಿಎಂ ಸ್ಥಾನದಿಂದ ಪದಚ್ಯುತಿಗೊಂಡ ನಂತರ, ರಾಜ್ಯಕ್ಕೆ ಬಿಜೆಪಿಯಿಂದ ತಿಂಗಳಿಗೊಬ್ಬರು ಮುಖ್ಯಮಂತ್ರಿಗಳಾದರು. ಆ ರೀತಿಯಲ್ಲಿ ಸಿಎಂ ಆದವರಲ್ಲಿ ಹಲವರು ಆರ್‌ಎಸ್‌ಎಸ್‌ ಹಿನ್ನೆಲೆಯವರು.

ಸದ್ಯ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್‌ ಕೇಡರ್‌ ರೀತಿಯಲ್ಲಿ ವಕ್ತಾರಿಕೆ ನಡೆಸುತ್ತಿರುವವರು ಈಶ್ವರಪ್ಪ ಮಾತ್ರ. ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ರಾಮಮಂದಿರದ ಪರವಾಗಿ ತೀರ್ಪು ಬಂದಾಗ, ಇನ್ನು ಮಥುರಾ ಮತ್ತು ಕಾಶಿಗಳು ಬಾಕಿ ಉಳಿದಿವೆ. ಅಲ್ಲಿಯ ಮಸೀದಿಗಳನ್ನು ತೆರವುಗೊಳಿಸಿ, ಆ ಜಾಗವನ್ನು ಪವಿತ್ರಗೊಳಿಸುತ್ತೇವೆ ಎಂದು ರಾಜ್ಯದಲ್ಲಿ ಹೇಳಿದ್ದು ಈಶ್ವರಪ್ಪ ಮಾತ್ರ. ಅದಲ್ಲದೇ, ಹಲವು ಭಾರಿ ಅವರು ಹಿಂದೂತ್ವದ ಬಗ್ಗೆ ಮಾತನಾಡುತ್ತಲೇ ಇದ್ದಾರೆ.

ಹೀಗಾಗಿ, ಯಡಿಯೂರಪ್ಪ ವಿರುದ್ದ ಈಶ್ವರಪ್ಪ ರೆಬಲ್‌ ಆಗಿದ್ದರೂ ಸಹ, ಆರ್‌ಎಸ್‌ಎಸ್‌ಗೆ ಲಾಯಲ್‌ ಆಗಿಯೇ ಉಳಿದಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್‌ ಮತ್ತು ಸಂಘಪರಿವಾರದ ಬಿಜೆಪಿ ನಾಯಕರು ಈಶ್ವರಪ್ಪರನ್ನು ಮುಂದೆ ಬಿಟ್ಟಿದ್ದಾರೆ. ಅಲ್ಲದೆ, ಯಡಿಯೂರಪ್ಪರನ್ನು ಪದಚ್ಯುತಿಗೊಳಿಸುವ ಸಂಚೂ ಇದರ ಹಿಂದಿದೆ.

ಇದನ್ನೂ ಓದಿ: ಎತ್ತಿಗೆ ಜ್ವರ ಎಮ್ಮೆಗೆ ಬರೆ: ಸಚಿವರ ತಪ್ಪಿಗೆ ವೈದ್ಯಾಧಿಕಾರಿ ಅಮಾನತು!

ಇದಕ್ಕೆ ಪುಷ್ಟಿ ನೀಡುವಂತೆ, ಸಚಿವ ಸಂಪುಟ ವಿಸ್ತರಣೆಯಾದಾಗಿನಿಂದಲೂ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್‌, ಮೇ ತಿಂಗಳಿನಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿದ್ದರು. ಇದೀಗ ಈಶ್ವರಪ್ಪ ಸಿಎಂ ವಿರುದ್ಧ ದೂರು ನೀಡಿರುವುದು, ಸಿಎಂ ಬದಲಾವಣೆಯ ಸಾಧ್ಯತೆಯನ್ನು ಹೆಚ್ಚಿಸಿದೆ.

ಅಲ್ಲದೆ, ಸಿಎಂ ವಿರುದ್ಧವೇ ನಿರಂತರವಾಗಿ ಯತ್ನಾಳ್‌ ಆರೋಪ-ವಾಗ್ದಾಳಿ ನಡೆಸುತ್ತಿದ್ದರೂ ಸಹ ಬಿಜೆಪಿ ಹೈಕಮಾಂಡ್‌ ಯತ್ನಾಳ್‌ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಯತ್ನಾಳ್‌ ಅವರನ್ನು ಸಂಘಪರಿವಾರದ ಹಿನ್ನೆಲೆಯ ಸಚಿವ-ಶಾಸಕರೇ ಮುಂದೆ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈಗ ಆರ್‌ಎಸ್‌ಎಸ್‌ನಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ಈಶ್ವರಪ್ಪ ಅವರೇ ನೇರವಾಗಿ ಬಿಎಸ್‌ವೈ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ಪರಿವಾರಕ್ಕೆ ನಿಷ್ಠರಾಗಿರುವ ಈಶ್ವರಪ್ಪ ಜೊತೆಗೆ ಆರ್‌ಎಸ್‌ಎಸ್‌ ಹಿನ್ನೆಲೆಯವರು ನಿಲ್ಲುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಅಲ್ಲದೆ, ಬಿಎಲ್‌ ಸಂತೋಷ್‌ ಕೂಡ ಬಿಎಸ್‌ವೈ ವಿರುದ್ದ ಆಗಾಗ ಗುಡುಗುವುದು ಸಾಮಾನ್ಯವಾಗಿ ಕಂಡು ಬಂದಿದೆ. ಇದೆಲ್ಲವೂ ಬಿಎಸ್‌ವೈ ಕುರ್ಚಿಯನ್ನು ಅಲುಗಾಡಿಸುವುದು ನಿಶ್ಚತವೆಂದು ಹೇಳಲಾಗಿದೆ.

ಇದನ್ನೂ ಓದಿ: ಈಶ್ವರಪ್ಪರನ್ನು ಉಚ್ಛಾಟಿಸಿ; ಇಲ್ಲವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ: ಬಿಎಸ್‌ವೈಗೆ ಡಿಕೆಶಿ ಸವಾಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights