ಉದ್ಯೋಗಿಗಳಿಗೆ ವಾರದಲ್ಲಿ 4 ದಿನ ಮಾತ್ರ ಕೆಲಸ? ಕಾರ್ಮಿಕ ಇಲಾಖೆಯ ಹೊಸ ನೀತಿ ಹೇಳುವುದೇನು?

ವಾರದಲ್ಲಿ 06 ದಿನಗಳ ಕಾಲ ದಿನಕ್ಕೆ 08 ಗಂಟೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕೆಲಸದ ಅವಧಿ ಬದಲಾವಣಗೆ ಕೇಂದ್ರ ಕಾರ್ಮಿಕ ಇಲಾಖೆ ಮುಂದಾಗಿದೆ. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ, ಕೆಲವು ನಿಯಮಗಳನ್ನು ಬದಲಾಯಿಸಿದ್ದು, ಕಂಪನಿಗಳು ತಮ್ಮ ಕಾರ್ಮಿಕರಿಂದ 04 ಅಥವಾ 05 ದಿನಗಳು ಮಾತ್ರ ದುಡಿಸಿಕೊಳ್ಳಬಹುದಾದ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ ಎಂದು ಕಾರ್ಮಿಕ ಕಾರ್ಯದರ್ಶಿ ಹೇಳಿದ್ದಾರೆ.

ಇದರಿಂದಾಗಿ ಕಾರ್ಮಿಕರಿಗೆ ರಜಾ ದಿನಗಳು ಹೆಚ್ಚಾಗಬಹುದೇ ವಿನಹಃ, ಅವರು ಅವರು ವಾರದಲ್ಲಿ ದುಡಿಯುವ ಕೆಲಸ ಅವಧಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ವಾರಕ್ಕೆ 48 ಗಂಟೆಗಳ ಕೆಲಸದ ಅವಧಿ ಹಾಗೆಯೇ ಮುಂದುವರೆಯಲಿದ್ದು, ಕೆಲಸದ ದಿನಗಳು ಮಾತ್ರ ಬದಲಾಗಲಿವೆ. ಕಂಪನಿಗಳು ವಾರಕ್ಕೆ 4 ದಿನ, 5 ದಿನ ಅಥವಾ 6 ದಿನ ಕೆಲಸ ಮಾಡಿಸಿಕೊಳ್ಳಬಹುದು. ಇದು ಕಂಪನಿಗಳು ಮತ್ತು ಕಾರ್ಮಿಕರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಲಾಗಿದೆ ಎಂದು ಲೈವ್‌ ಮಿಂಟ್‌ ವರದಿ ಮಾಡಿದೆ.

ವಾರದಲ್ಲಿ ಕಾರ್ಮಿಕರು 48 ಗಂಟೆಗಳು ದುಡಿಯಲೇಬೇಕು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ದುಡಿಯುವ ದಿನಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಈಗ ಕಾರ್ಮಿಕರು ವಾರದಲ್ಲಿ 06 ದಿನ ಕೆಲಸ ಮಾಡುತ್ತಿದ್ದು, ದಿನಕ್ಕೆ 08 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಹೊಸ ನೀತಿಯ ಪ್ರಕಾರ, ಒಂದು ವೇಳೆ ಕಂಪನಿಯು 04 ದಿನವಷ್ಟೇ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದು ನಿರ್ಧರಿಸಿದರೆ, ಕಾರ್ಮಿಕರು ದಿನಕ್ಕೆ 08 ಗಂಟೆಯ ಬದಲಾಗಿ 12 ಗಂಟೆ ಕೆಲಸ ಮಾಡಬೇಕಾಗುತ್ತದೆ. ಅಂತೆಯೇ, 05 ದಿನದ ಕೆಲಸ ಮಾಡುವುದಾದರೆ, ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇದರ ನಿರ್ಧಾರ ಕಂಪನಿ-ಕಾರ್ಮಿಕರಿಗೆ ಬಿಟ್ಟಿದ್ದು ಎಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವಾ ಚಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ನಾಯಕರ ಕಾರ್ಯವೈಕರಿಗೆ ಶ್ಲಾಘನೆ; ರಾಜ್ಯಸಭೆಯಲ್ಲಿ ಕಣ್ಣೀರು ಹಾಕಿದ ಪ್ರಧಾನಿ ಮೋದಿ!

ಈ ನಿಬಂಧನೆಯು ಕಾರ್ಮಿಕ ಕಾನೂನಿನ ಭಾಗವಾಗುತ್ತದೆ. ಅದರೆ, ಈ ನೀತಿಯನ್ನು ಅನುಸರಿಸಲೇಬೇಕು ಎಂದು ನಾವು ನೌಕರರನ್ನು ಅಥವಾ ಉದ್ಯೋಗದಾತರನ್ನು ಒತ್ತಾಯಿಸುವುದಿಲ್ಲ. ಉದ್ಯೋಗದಾತರು ತಮ್ಮ ನೌಕರರು ಈ ವ್ಯವಸ್ಥೆಯನ್ನು ಅನುಮೋದಿಸಿದರೆ ನಾಲ್ಕು ಅಥವಾ ಐದು ದಿನಗಳ ಕೆಲಸದ ನಿಯಮವನ್ನು ಅವರು ಅನುಸರಿಸಬಹುದು. ಕಂಪನಿಗಳು ವಾರಕ್ಕೆ 04 ದಿನದ ಕೆಲಸದ ಅವಧಿಯನ್ನು ಆಯ್ಕೆ ಮಾಡಿದರೆ 03 ದಿನ ರಜೆ ಇರುತ್ತದೆ. 05 ದಿನದ ಅವಧಿ ಆಯ್ಕೆ ಮಾಡಿದರೆ 02 ದಿನ ರಜೆ ನೀಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದು ಕಾರ್ಮಿಕರಿಗೆ 03 ಅಥವಾ 02 ದಿನದ ರಜೆ-ವಿರಾಮ ನೀಡುತ್ತದೆ ಎಂದು ಕಾಣಿಸಿದರೂ ಸಹ, ಉಳಿದ ಕೆಲಸದ ದಿನಗಳಲ್ಲಿ ಅವರು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇದರಿಂದಾಗಿ ಕಂಪನಿಗಳಿಗೆ ಹೆಚ್ಚು ಉಪಯೋಗವೇ ಹೊರತು ಕಾರ್ಮಿಕರಿಗಲ್ಲ. ಕಂಪನಿಗಳು ಕಡಿಮೆ ದಿನಗಳಲ್ಲಿ ಹೆಚ್ಚು ದುಡಿಕೊಳ್ಳುತ್ತವೆ. ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಯನ್ನು ಆಯ್ಕೆ ಮಾಡಿಕೊಂಡರೆ ದಿನಕ್ಕೆ 12 ಗಂಟೆಗಳ ಕಾರ್ಮಿಕರು ಕೆಲಸ ಮಾಡಬೇಕು. ಇದರಿಂದಾಗಿ ದಿನದ ಕೆಲಸವು ಮೂರು ಪಾಳಿಯ ಬದಲು ಎರಡು ಪಾಳಿಗೆ ಬದಲಾಗುತ್ತವೆ. ಇದು ಉದ್ಯೋಗ ನಷ್ಟವನ್ನು ಮಾಡುತ್ತದೆ. ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ಅಲ್ಲದೆ, ಕಾರ್ಮಿಕರಿಗೆ ದುಡಿಮೆಯ ದಿನಗಳಲ್ಲಿ ದೌಹಿಕ-ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದು ಉದ್ಯೋಗಕ್ಕಾಗಿ ಯುವಜನರು ಆಂದೋಲನದ ಸರೋವರ್‌ ಬೆಂಕಿಕೆರೆ ಹೇಳಿದ್ದಾರೆ.

“ನಾಲ್ಕು ಅಥವಾ ಐದು ದಿನಗಳವರೆಗೆ 12 ಗಂಟೆಗಳ ಕೆಲಸ ಮತ್ತು ಪ್ರಯಾಣದ ಸಮಯವು ಕಾರ್ಮಿಕರಿಗೆ ಹೊರೆಯಾಗುತ್ತದೆ. ವಿಶೇಷವಾಗಿ ಕಾರ್ಖಾನೆಗಳಲ್ಲಿ ಕೆಲಸ-ಜೀವನ ಸಮತೋಲನವು ಪರಿಣಾಮ ಬೀರಬಹುದು” ಎಂದು ಕಾರ್ಮಿಕ ಅರ್ಥಶಾಸ್ತ್ರಜ್ಞ ಕೆ.ಆರ್. ಶ್ಯಾಮ್ ಸುಂದರ್ ಹೇಳಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ-ಗಾಸಿಪ್: ಟ್ರಂಪ್-ಮೋದಿಯಂತಹ ಜನರು ಪ್ರಚಾರ ಪಡೆದುಕೊಂಡಿದ್ದು ಹೇಗೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights