ಚುನಾವಣಾ ಲೆಕ್ಕಾಚಾರ: ತಾಲಿಬಾನ್‌ ವಿರುದ್ದ ಯುದ್ದಕ್ಕೆ ಕರೆಕೊಟ್ಟ ಆದಿತ್ಯಾನಾಥ್‌!

ತಾಲಿಬಾನ್‌ನಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು “ವಿಚಲಿತವಾಗಿದೆ”. ಇದೇ ಸಂದರ್ಭದಲ್ಲಿ ಆ ಬಂಡುಕೋರರ ಗುಂಪು ಭಾರತದತ್ತ ಸಾಗುವ ಸಾಧ್ಯತೆ ಇದ್ದು, ಅವರ ವಿರುದ್ದ “ವೈಮಾನಿಕ ದಾಳಿಗೆ ಭಾರತ ಸಿದ್ದವಾಗಿದೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 2022ರ ಆರಂಭದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ಭಾರೀ ಸಿದ್ದತೆಯಲ್ಲಿ ತೊಡಗಿವೆ. ಪ್ರಿಯಾಂಕಾಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ವಿವಿಧ ಭರವಸೆಗಳನ್ನು ಘೋಷಿಸುತ್ತಿದೆ. ಅಲ್ಲದೆ, ಮಹಿಳೆಯರನ್ನು ಸೆಳೆಯಲು ಹೆಚ್ಚಿನ ಒತ್ತು ಕೊಡುತ್ತಿದೆ. ಅಂತೆಯೇ, ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಇದೇ ವೇಳೆ, ಬಿಜೆಪಿ ತನ್ನ ಹಿಂದೂತ್ವದ ಅಜೆಂಡಾವನ್ನೇ ಮುಂದಿಟ್ಟುಕೊಂಡು, ಪಾಕಿಸ್ತಾನ, ತಾಲಿಬಾನ್‌ಗಳತ್ತ ಬೆಟ್ಟುಮಾಡಿ ಯುದ್ದ, ದಾಳಿಗಳ ಹೆಸರಲ್ಲಿ ಮತದಾರರನ್ನು ಸೆಳೆಯುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾನುವಾರು ನಡೆದ ಸಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯಾನಾಥ್‌, “ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಶಕ್ತಿಯುತವಾಗಿದೆ. ಯಾವುದೇ ದೇಶವು ಭಾರತದತ್ತ ಕಣ್ಣು ಹಾಕಲು ಧೈರ್ಯ ಮಾಡುತ್ತಿಲ್ಲ. ಇಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್‌ನಿಂದ ತೊಂದರೆಗೀಡಾಗಿವೆ. ಆದರೆ, ಅದು ಮುಂದುವರೆದು ಭಾರತದತ್ತ ಬಂದರೆ, ದೇಶವು ವೈಮಾನಿಕ ದಾಳಿ ಸಿದ್ಧವಾಗಿದೆ” ”ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧವೂ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರನ್ನು ಉಲ್ಲೇಖಿಸಿ ಮಾತನಾಡಿದ ಅವರು, “ಅವರ (ರಾಜ್‌ಭರ್) ಯೋಜನೆಯ ಪ್ರಕ್ರಿಯೆಯು ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ” ಎಂದು ಆರೋಪಿಸಿದ್ದಾರೆ.

“ತಂದೆ ಮಂತ್ರಿಯಾಗಬೇಕೆಂದು ಬಯಸಿದ್ದರೆ, ಒಬ್ಬ ಮಗ ಸಂಸದನಾಗಲು ಮತ್ತು ಇನ್ನೊಬ್ಬರು ಎಂಎಲ್‌ಸಿಯಾಗಲು ಬಯಸಿದ್ದರು. ಅಂತಹ ಬ್ಲ್ಯಾಕ್‌ಮೇಲಿಂಗ್‌ನಲ್ಲಿ ತೊಡಗಿರುವವರ ಅಂಗಡಿಗಳನ್ನು ಮುಚ್ಚಬೇಕು” ಎಂದು ಆದಿತ್ಯನಾಥ್ ಹೇಳಿದ್ದಾರೆ.

“ಇಂದು, ಬಹ್ರೈಚ್‌ನಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ಸರ್ಕಾರವು ಬಹ್ರೈಚ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಸುಹೇಲ್‌ದೇವ್ ಹೆಸರಿಟ್ಟಿದೆ. ವಿರೋಧ ಪಕ್ಷಗಳು ಮಹಾರಾಜ ಸುಹೇಲ್‌ದೇವ್‌ಗಾಗಿ ಏನು ಮಾಡಿವೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಸುಹೇಲ್‌ದೇವ್ ಸ್ಮಾರಕವನ್ನು ನಿರ್ಮಿಸಿದರೆ, ಜನರು ಘಾಜಿಯನ್ನು ಮರೆತುಬಿಡುತ್ತಾರೆ ಮತ್ತು ರಾಜಕೀಯ ಬ್ಲ್ಯಾಕ್‌ಮೇಲಿಂಗ್‌ನಲ್ಲಿ ತೊಡಗಿರುವವರನ್ನು ಕಸದ ಬುಟ್ಟಿಗೆ ಹಾಕುತ್ತಾರೆ ಎಂದು ಮುಹಮ್ಮದ್ ಘೋರಿ ಮತ್ತು ಆಕ್ರಮಣಕಾರ ಘಾಜಿಯ ಅನುಯಾಯಿಗಳು ಭಯಪಡುತ್ತಾರೆ. ಅದಕ್ಕಾಗಿಯೇ ಅವರು ಸುಹೇಲ್‌ದೇವ್‌ನ ಸ್ಮಾರಕವನ್ನು ಪರೋಕ್ಷವಾಗಿ ವಿರೋಧಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಇತರ ಪಕ್ಷಗಳ ಮೇಲೂ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷಗಳಿಗೂ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷವನ್ನು ಹೆಸರಿಸದೆ ಮಾತನಾಡಿದ ಆದಿತ್ಯನಾಥ್, “ರಾಮ ಭಕ್ತರನ್ನು ಹತ್ಯೆ ಮಾಡಿದವರಿಗೆ ದೇಶದ ಜನರಲ್ಲಿ ಕ್ಷಮೆ ಕೇಳುವ ಧೈರ್ಯವಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಓಟಿಗಾಗಿ ನೋಟು: ಹುಜೂರಾಬಾದ್ ಉಪಚುನಾವಣೆ ರದ್ದುಗೊಳಿಸಲು ಕಾಂಗ್ರೆಸ್‌ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights