ಡಿಎಂಕೆ ನಾಯಕ, ಮಾಜಿ ಸಂಸದ ರಾಮಲಿಂಗಂ ಬಿಜೆಪಿ ಸೇರ್ಪಡೆ!

ಪಕ್ಷದ ನಿರ್ಧಾರದ ವಿರುದ್ಧ ಮಾತನಾಡಿ ಡಿಎಂಕೆ ಪಕ್ಷದಿಂದ ಅಮಾನತಾಗಿದ್ದ ತಮಿಳುನಾಡಿನಮಾಜಿ ಸಂಸದ ಕೆಪಿ ರಾಮಲಿಂಗಂ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಳೆದ ಮಾರ್ಜ್‌ ತಿಂಗಳಿನಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್‌ ಅವರು ಪಕ್ಷದ ಮುಂದಿಟ್ಟಿದ್ದ ಪ್ರಸ್ತಾಪವನ್ನು ವಿರೋಧಿಸಿದ್ದಕ್ಕಾಗಿ ಕೆಪಿ ರಾಮಲಿಂಗಂ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು.

30 ವರ್ಷಗಳಿಂದ ಡಿಎಂಕೆ ಪಕ್ಷದಲ್ಲಿದ್ದ ಕೆಪಿ ರಾಮಲಿಂಗಂ ಇಂದು(ಶನಿವಾರ) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾತನಾಡಿರುವ ರಾಮಲಿಂಗಂ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರ ಎಂಕೆ ಅಳಗಿರಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.

ಡಿಎಂಕೆಯಲ್ಲಿದ್ದ ರಾಮಲಿಂಗಂ 1996ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2020ರಲ್ಲಿ ಡಿಎಂಕೆ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು. ಡಿಎಂಕೆಗೆ ಬರುವ ಮೊದಲು 1980 ಹಾಗೂ 84ರ ನಡುವೆ ಎಐಎಡಿಎಂಕೆ ಶಾಸಕನಾಗಿದ್ದರು.

ಆರು ತಿಂಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ತಮಿಳುನಾಡಿನಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಯತ್ನಿಸಿರುವ ಬಿಜೆಪಿ ವಿವಿಧ ರಾಜಕೀಯ ಮುಖಂಡರನ್ನು ಪಕ್ಷಕ್ಕೆ ಸೆಳೆಯುತ್ತಿದೆ.

ಈಗಾಗಲೇ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ, ನಟಿ ಮತ್ತು ಕಾಂಗ್ರೆಸ್‌ ವಕ್ತಾರರಾಗಿದ್ದ ಖುಷ್ಬೂ ಸುಂದರ್‌ ಅವರನ್ನು ಪಕ್ಷಕ್ಕೆ ಕರೆತಂದಿರುವ ಬಿಜೆಪಿ ಇತರ ಪಕ್ಷಗಳ ರಾಜಕೀಯ ಕಟ್ಟಾಳುಗಳನ್ನು ಪಕ್ಷಕ್ಕೆ ತರುವ ಕಸರತ್ತು ನಡೆಸುತ್ತಿದೆ.


ಇದನ್ನೂ ಓದಿ: ಪ. ಬಂಗಾಳದಲ್ಲಿ ವೈರಿ ಯಾರು? BJPಯೋ-TMCಯೋ? ಗೊಂದಲದಲ್ಲಿ ಎಡರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights