ಸೌಹಾರ್ದತೆಯ ಗ್ರಾಮ ಧರ್ಮದಂಗ: ಹಿಂದೂ-ಮುಸ್ಲಿಮರಿಂದ ಪ್ರತಿ ವರ್ಷ ಲಕ್ಷ್ಮಿ ಪೂಜೆ!

ಕೋಮುಗಲಬೆಗಳು, ಧರ್ಮಾಧಾರಿತ ಹತ್ಯೆಗಳು, ಮತೀಯ ಹಿಂಸಾಚಾರಗಳು ಹೆಚ್ಚುತ್ತಿರುವ ಸಮಯದಲ್ಲೇ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಗ್ರಾಮವೊಂದು ಕೋಮು ಸೌಹಾರ್ದತೆಯ ಮೆರುಗನ್ನು ಸಾರುತ್ತಿದೆ.

ಜಿಲ್ಲೆಯ ಧರ್ಮದಂಗ ಗ್ರಾಮದಲ್ಲಿ ನಡೆಯುವ ಲಕ್ಷ್ಮಿ ಪೂಜೆಯು ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಗ್ರಾಮದ ನಿವಾಸಿಗಳು ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ಸಮೃದ್ಧಿ (ಲಕ್ಷ್ಮೀ) ದೇವತೆಯ ಹಬ್ಬವನ್ನು ಆಚರಿಸಲು ಪರಸ್ಪರ ಕೈ ಜೋಡಿಸಿದ್ದಾರೆ.

ಈ ಹಬ್ಬವನ್ನು ಅಚರಿಸುವಾಗ ಪ್ರತಿ ವರ್ಷವೂ ಹಳ್ಳಿಯ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟುಗೂಡಿ ಪೂಜೆಯ ಸ್ಥಳವನ್ನು ಸ್ವಚ್ಛಗೊಳಿಸುವ ಮತ್ತು ಪ್ರಸಾದವನ್ನು ವಿತರಿಸುವ ಕೆಲಸಗಳಲ್ಲಿ ನಿರತರಾಗುತ್ತಾರೆ.

ಇತ್ತೀಚೆಗೆ ರಾಜ್ಯದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ರಾಜ್ಯವು ತೀವ್ರ ಮತೀಯ ಧ್ರುವೀಕರಣವನ್ನು ಕಂಡಿತು. ಆದರೂ, ಹಳ್ಳಿಯ ಹಿಂದೂ ನಿವಾಸಿಗಳು ತಮ್ಮ ಮುಸ್ಲಿಂ ನೆರೆಹೊರೆಯವರನ್ನು ಬಕ್ರಿ ಈದ್ ಮತ್ತು ಈದ್-ಉಲ್-ಫಿತರ್‌ನಲ್ಲಿ ಭೇಟಿ ಮಾಡುವುದನ್ನು ಮುಂದುವರಿಸಿದ್ದಾರೆ.

ಅಂತೆಯೇ, ಲಕ್ಷ್ಮಿ ಹಬ್ಬ ನಡೆಯುವ ನಾಲ್ಕು ದಿನಗಳ ಕಾಲ ಮುಸ್ಲಿಂ ಸಮುದಾಯವು ಹಳ್ಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಭಾಗಿಯಾಗುತ್ತದೆ ಹಾಗೂ ಊಟ ಮತ್ತು ಭೋಜನವನ್ನು ಒಟ್ಟಿಗೆ ಕುಳಿತು ಸವಿಯುತ್ತಾರೆ.

ಇದನ್ನೂ ಓದಿ: ಸೌಹಾರ್ದತೆಯ ಕರ್ನೂಲ್: ಪ್ರತಿ ಯುಗಾದಿಯಲ್ಲೂ ದೇವಸ್ಥಾನದಲ್ಲಿ ಮುಸ್ಲಿಮರ ಪ್ರಾರ್ಥನೆ!

ಹಳ್ಳಿಯಲ್ಲಿ ನಾವು ಹಿಂದೂ-ಮುಸ್ಲಿಮರು ಹಬ್ಬ ಆಚರಣೆಗಳ ಸಂದರ್ಭದಲ್ಲಿ ಒಟ್ಟಿಗೆ ಸೇರುತ್ತೇವೆ. ಒಬ್ಬರಿಗೊಬ್ಬರು ಸಹಾಯ  ಮಾಡುತ್ತೇವೆ. ಒಟ್ಟಿಗೆ ಊಟ ಮಾಡುತ್ತೇವೆ. ಸಂಭ್ರಮಿಸುತ್ತೇವೆ. ಇದು ನಮ್ಮ ಹಳ್ಳಿಯ ಸಂಪ್ರದಾಯವಾಗಿದೆ. ಇಲ್ಲಿ ನಮ್ಮ ನಡುವಿನ ಬಾಂಧವ್ಯಕ್ಕೆ ಆದ್ಯತೆ ನೀಡಲಾಗುತ್ತದೆ, ವ್ಯಕ್ತಿಯ ಧಾರ್ಮಿಕ ನಂಬಿಕೆಗಲ್ಲ” ಎಂದು ಧರ್ಮದಂಗದ ಅಸ್ಮತ್ ಅಲಿ ಹೇಳಿದ್ದಾರೆ.

“ಲಕ್ಷ್ಮಿ ಪೂಜೆಯು ನಮ್ಮ ಹಳ್ಳಿಯ ಪ್ರಮುಖ ಹಬ್ಬವಾಗಿದೆ. ಮುಖ್ಯವಾಗಿ ರೈತರು ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬವನ್ನು ಆಚರಿಸುವ ಮುಸ್ಲಿಂ ಸೋದರರು ಜೊತೆಗೂಡುತ್ತಾರೆ. ಹಬ್ಬದ ಈ ನಾಲ್ಕು ದಿನಗಳಲ್ಲಿ ಒಟ್ಟಿಗೆ ಸಮಯ ಕಳೆಯುತ್ತೇವೆ. ನಾವು ಪರಸ್ಪರರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ’’ ಎಂದು ಎಂದು ಗ್ರಾಮದ ವಿದ್ಯುತ್ ದಾಸ್ ತಿಳಿಸಿದ್ದಾರೆ.

“ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ, ನಾವು ಪರಸ್ಪರ ಸಹಾಯ ಮಾಡುತ್ತೇವೆ. ರಾಜಕೀಯ ಪಕ್ಷಗಳು ಮಾಡುವ ಕುತಂತ್ರಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ನಮಗೆ ತಿಳಿದಿರುವುದೇನೆಂದರೆ, ಜನರ ನಡುವಿನ ಬಾಂಧವ್ಯವು ಅತ್ಯಂತ ಸಂಕಷ್ಟದ ಸಮಯದಲ್ಲಿ ಪರಸ್ಪರ ನೆರವಾಗಲು ಸಹಾಯ ಮಾಡುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಸೌಕತ್ ಮೊಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಹೋಂವರ್ಕ್‌ ಮಾಡದ ಕಾರಣಕ್ಕೆ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights