ಕನ್ನಡಿಗರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್‌ ಇದೆಯೇ? ನಳಿನ್‌ಗೆ ಸಿದ್ದರಾಮಯ್ಯ ಸವಾಲು

ಮುಂದಿನ ವಾರದಿಂದ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಬಿಹಾರದ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಬರೆದುಕೊಂಡಿದೆ. ಇದಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸುತ್ತಿವೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇಲ್ಲವೆಂದ ಮಾತ್ರಕ್ಕೆ ಕನ್ನಡಿಗರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡದಿರಲು ಸಾಧ್ಯವೇ? ನಮ್ಮ ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರಲ್ಲ ಅವರು ಉಚಿತ ಕೊರೊನಾ ಲಸಿಕೆಗೆ ಬೇಡಿಕೆ ಇಡಲಿ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾಣರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಅವರ ಈ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಳಿನ್ ಕುಮಾರ್ ಕಟೀಲ್ ಅವರೇ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರದಲ್ಲಿ ಪ್ರಚಾರದ ವೇಳೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅವರು ಕೊರೊನಾವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಡೀ ದೇಶದ ಜನರು ಕೊರೊನಾದಿಂದ ನಲುಗುತ್ತಿರುವಾಗ ಕೇಂದ್ರ ಸರ್ಕಾರ ಈ ರೀತಿ ಚುನಾವಣೆಗಾಗಿ ತಾರತಮ್ಯ ಮಾಡುವುದು ಸರಿಯೇ? ಈ ರೀತಿಯ ಘೋಷಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಏನು ಹೇಳಲು ಹೊರಟಿದ್ದಾರೆ? ಜನರ ಆರೋಗ್ಯ, ಜೀವಕ್ಕಿಂತಲೂ ಬಿಜೆಪಿಗೆ ಮತವೇ ಹೆಚ್ಚಾಯಿತೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಆ ಸಂಸದರು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರ್ನಾಟಕಕ್ಕೂ ಉಚಿತ ಕೊರೊನಾ ಲಸಿಕೆ ವಿತರಿಸಲು ಬೇಡಿಕೆ ಇಡಬೇಕು. ಸರ್ಕಾರದಿಂದ ಕರ್ನಾಟಕಕ್ಕೆ ಕೂಡ ಉಚಿತ ಕೊರೊನಾ ಲಸಿಕೆ ಘೋಷಿಸುವುದಕ್ಕೆ ಕನ್ನಡಿಗರು ಕಾಯುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಾಗಿ ರಾಜ್ಯ ಸರ್ಕಾರ ಈ ಬಗ್ಗೆ ಭರವಸೆ ನೀಡುತ್ತದಾ? ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಪ್ರಶ್ನೆಸಿದ್ದಾರೆ.

ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕೊರೊನಾದಿಂದ ಭೀತಿಗೊಳಗಾಗಿರುವ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ಧಮ್ ನಿಮಗೆ ಇದೆಯೇ? ಎಂದು ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ: ನಳಿನ್‌ ಒಬ್ಬ ಪೋಕರಿ, ಯಾರದ್ದೋ ಸಂತೋಷಕ್ಕೆ BJP ಅಧ್ಯಕ್ಷನಾಗಿದ್ದಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights