ಬಾಡಿಗೆ ಸಿಗದೆ ಖಿನ್ನತೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಕ್ಯಾಬ್‌ ಚಾಲಕ ಸಾವು!

ಬಾಡಿಗೆ ಸಿಗದ ಕಾರಣ ಕಿನ್ನತೆಗೆ ಒಳಗಾಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಟ್ಯಾಕ್ಸಿ ಚಾಲಕ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನಗೆ ತಾನೇ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ಸಾವನ್ನಪ್ಪಿದ್ದ ಟ್ಯಾಕ್ಸಿ ಚಾಲಕನನ್ನು ಚನ್ನಪಟ್ಟಣ ಮೂಲದ ಪ್ರತಾಪ್‌ಕುಮಾರ್ ಎಂದು ಗುರುತಿಸಲಾಗಿತ್ತು. ಆತ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯನೂ ಆಗಿದ್ದ ಎಂದು ತಿಳಿದು ಬಂದಿದೆ.

ಕೊರೊನಾ ಸಂಕಷ್ಟ ಆರಂಭವಾದ ನಂತರ ಹೆಚ್ಚು ಬಾಡಿಗೆಗಳು ಸಿಗುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಕಿನ್ನತೆಗೆ ಒಳಗಾಗಿದ್ದ ಆತ, ಏರ್‌ಪೋರ್ಟ್‌ ಬಳಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆತ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ.

ಲಾಕ್‌ಡೌನ್‌ ನಂತರ ಬಾಡಿಗೆ ದರ ಕಡಿಮೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲಕರಿಗೆ ಸಂಪಾದನೆ ಕಡಿಮೆಯಾಗಿತ್ತು. ಹೀಗಾಗಿ, ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿಗೆ ಒಂದು ಕಿ.ಮೀ.ಗೆ 24 ರೂ. ದರ ನಿಗದಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.

ಫೆ.1 ರಂದು ಕ್ಯಾಬ್‌, ಟ್ಯಾಕ್ಸಿ, ಓಲಾ, ಊಬರ್‌ಗಳಿಗೂ ಅನ್ವಯವಾಗುವಂತೆ 1 ಕಿ.ಮೀ.ಗೆ 24 ರೂ.ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು . ಸರ್ಕಾರ ನಿಗದಿ ಮಾಡಿದ ದರವನ್ನು ಕೆಎಸ್‌ಟಿಡಿಸಿ, ಮೆರು ಮತ್ತು ಮೇಘ ಕಂಪನಿಯ ಕ್ಯಾಬ್‌ ಚಾಲಕರು ಅಳವಡಿಸಿಕೊಂಡಿದ್ದರು. ಜತೆಗೆ ಮೀಟರ್‌ ಹಾಕುವ ಮೂಲಕ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿತ್ತು.

ಆದರೆ, ಓಲಾ ಮತ್ತು ಉಬರ್‌ನ ವಾಹನಗಳು ವಿಮಾನ ನಿಲ್ದಾಣದಿಂದ ನಗರಕ್ಕೆ ಒಂದು ಕಿ.ಮೀ.ಗೆ ಕೇವಲ 9 ರೂ. ನಂತೆ ಓಡಿಸುತ್ತಿದ್ದವು. ನಗರದಿಂದ ವಾಪಸ್‌ ವಿಮಾನ ನಿಲ್ದಾಣಕ್ಕೆ ಬರುವಾಗ ಪ್ರತಿ ಕಿ.ಮೀ.ಗೆ 35ರೂ. ನಿಗದಿ ಮಾಡಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದರು.

ಹೀಗಾಗಿ ಸುಮಾರು 18 ಗಂಟೆ ಕಳೆದರೂ ಟ್ಯಾಕ್ಸಿ ಮತ್ತು ಕ್ಯಾಬ್‌ ಚಾಲಕರಿಗೆ ಒಂದು ಬಾಡಿಗೆಯೂ ದೊರೆಯುತ್ತಿರಲಿಲ್ಲ. ಓಲಾ ಮತ್ತು ಊಬರ್‌ ದರ ಕಡಿಮೆ ಎಂದು ಪ್ರಯಾಣಿಕರು ಅತ್ತ ಹೋಗುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಅತ್ತ ಸಿಡಿ ಸಂತ್ರಸ್ತ ಯುವತಿ ಕೋರ್ಟ್‌ ಮುಂದೆ ಹಾಜರ್; ಇತ್ತ ಸಿಎಂ ಬಿಎಸ್‌ವೈ ಕಾರ್ಯಕ್ರಮ ರದ್ದುಮಾಡಿ ಬೆಂಗಳೂರಿಗೆ ವಾಪಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights