ಸಾಲದ ಮೇಲಿನ ಬಡ್ಡಿ ನಿಷೇಧ: ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್‌

ಸಾಲದ ಮೇಲಿನ ಬಡ್ಡಿ ನಿಷೇಧವನ್ನು ಸೆಪ್ಟೆಂಬರ್ 28 ರವರೆಗೆ ವಿಸ್ತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಆ ವೇಳೆಗೆ ಹೊತ್ತಿಗೆ ಬಡ್ಡಿ ಮನ್ನಾ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಸಾಲಗಾರರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಮೊರಟೋರಿಯಂ  ಹೆಸರಿನಲ್ಲಿ ಇಎಂಐ ಪಾವತಿಯನ್ನು ಮೂರು ತಿಂಗಳ ಅವಧಿಗೆ ಮುಂದೂಡಲಾಗಿತ್ತು. ಆದರೆ, ಮುಂದೂಡಲ್ಪಟ್ಟ ಇಎಂಐ ದರದ ಮೇಲೆ ಬಡ್ಡಿವಿಧಿಸುವುದಾಗಿ ಹೇಳಿತ್ತು.

ಹಾಗಾಗಿ, ಇಎಂಐ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ಬಾರಿಗೆ ವಿಚಾರಣೆಯನ್ನು ಮುಂದೂಡಿದ್ದು, ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದೆ.

ಮುಂದಿನ ನಿರ್ದೇಶನಗಳವರೆಗೆ ಯಾವುದೇ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಈ ಕುರಿತಂತೆ ಇಂದು ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಕುರಿತಂತೆ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಸಾಲ ಮರುಪಾವತಿಸಲಾಗದ ಗ್ರಾಹಕರ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಕ್ಕೆ ಬರಬೇಕು. ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಮತ್ತು ಇಎಂಐ ಕುರಿತ ಸಮಸ್ಯೆ ನಿವಾರಿಸಿ ಎಂದು ಹೇಳಿದೆ.

ನಾವು ಕೇಂದ್ರ ಸರ್ಕಾರಕ್ಕೆ ಮತ್ತೆ ಸಮಯ ನೀಡುತ್ತಿದ್ದೇವೆ, ಇದು ಕೇಂದ್ರ ಸರ್ಕಾರ ಮತ್ತು ಆರ್ ಬಿಐಗೆ ಕೊನೆಯ ಅವಕಾಶವಾಗಿದ್ದು, ಮತ್ತೆ ಪ್ರಕರಣವನ್ನು ಮುಂದೂಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಹಿಂದಿನ ವಿಚಾರಣೆಯಲ್ಲಿ ಸಾಲ ಮರುಪಾವತಿಸಲಾಗದ ಗ್ರಾಹಕರಿಗೆ ಬ್ಯಾಂಕುಗಳು ದಂಡ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಈ ಕುರಿತಂತೆ ಸ್ಪಷ್ಟ ನಿಲುವು ತಳೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.


ಇದನ್ನೂ ಓದಿ: ಕಂಗನಾ, ಮಹಾ ಸರ್ಕಾರದ ಕಿತ್ತಾಟದಲ್ಲಿ ಮರ್ಯಾದೆ ಕಳೆದುಕೊಂಡ ಮಾಧ್ಯಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights