ಅಸ್ಸಾಂನಲ್ಲಿ ಗೆದ್ದರೂ ಬಿಜೆಪಿಗೆ ಬಿಕ್ಕಟ್ಟು; ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಗ್ಗ ಜಗ್ಗಾಟ!

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಭಾರೀ ಕಸರತ್ತು ನಡೆಸಿದ್ದ ಬಿಜೆಪಿ, ಅಗತ್ಯ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೆ, ಇದೀಗ ಅಸ್ಸಾಂನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಬಿಜೆಪಿಯಲ್ಲಿ ಗೊಂದಲ ಮತ್ತು ಹಗ್ಗ ಜಗ್ಗಾಟವನ್ನು ಸೃಷ್ಟಿಸಿದೆ.

ಬಿಜೆಪಿ ನಾಯಕ ಸರ್ಬಾನಂದ ಸೋನೊವಾಲ್‌ ಅವರು ಹಾಲಿ ಮುಖ್ಯಮಂತ್ರಿ ಯಾಗಿದ್ದರೂ, ಅವರನ್ನು ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರಲಿಲ್ಲ. ಅಲ್ಲದೆ, ಪಕ್ಷದ ಹಿರಿಯ ನಾಯಕ ಹಿಮಂತ ಬಿಸ್ವ ಶರ್ಮಾ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಗೂ ಮುನ್ನವೇ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಿದರೆ, ಅದು ಮತದಾನದಲ್ಲಿ ಹೊಡೆತ ಕೊಡಬಹುದು ಎಂದು ಬಿಜೆಪಿ ಹೈಕಮಾಂಡ್‌ ಭಾವಿಸಿತ್ತು ಎಂದು ಹೇಳಲಾಗಿತ್ತು.

ಇದೀಗ ಚುನಾವಣೆ ಮುಗಿದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 78 ಸ್ಥಾನಗಳನ್ನು ಗೆದ್ದು ಜಯ ಸಾಧಿಸಿದೆ. ಅಸ್ಸಾಂ ಅಧಿಕಾರ ಬಿಜೆಪಿಗೆ ಉಳಿದಿದ್ದು, ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮತದಾರರಲ್ಲಿ ಮನೆ ಮಾಡಿದೆ.

ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಪಕ್ಷದ ರಾಜ್ಯ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟಿದ್ದಾರೆ. ಪಕ್ಷವು ರಾಜ್ಯಕ್ಕೆ ವೀಕ್ಷಕರೊಬ್ಬರನ್ನು ಕಳುಹಿಸಲಿದೆ. ಅವರು ಬಿಜೆಪಿ ಮುಖಂಡರು ಮತ್ತು ಮುಂಚೂಣಿ ಕಾರ್ಯಕರ್ತರ ಅಭಿಪ್ರಾಯವನ್ನು ಕಲೆಹಾಕಿ, ಅದರಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಬಿಜೆಪಿಯ ಅಸ್ಸಾಂ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ದಾಸ್ ಹೇಳಿದ್ದಾರೆ.

ಸೊನೊವಾಲ್ ಮತ್ತು ಹಿಮಂತ ಬಿಸ್ವ ಶರ್ಮಾ
ಸೊನೊವಾಲ್ ಮತ್ತು ಹಿಮಂತ ಬಿಸ್ವ ಶರ್ಮಾ

ಸದ್ಯ, ಹಾಲಿ ಸಿಎಂ ಸರ್ಬಾನಂದ ಸೊನೊವಾಲ್ ಮತ್ತು ಹಿರಿಯ ನಾಯಕ ಹಿಮಂತ ಬಿಸ್ವ ಶರ್ಮಾ ಅವರ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇದೆ. ಹಿಮಂತ ಬಿಸ್ವ ಶರ್ಮಾ ಅವರು 2015ರಲ್ಲಿ ಕಾಂಗ್ರೆಸ್ ತೊರೆದಿದ್ದರು. ನಂತರ, 2016ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರ ಸೇರ್ಪಡೆಯಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ದೊರೆತಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ನೆರವಾಗಿತ್ತು.

ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ರಾಜ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಿದ್ದು, ಅವರ ಬೆಂಬಲಿಗರು ಈ ಚುನಾವಣೆಯಲ್ಲಿ ಶರ್ಮಾ ಅವರನ್ನೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ, ಸಿಎಂ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಹಿಂದೆಸರಿದ ಬಿಜೆಪಿ ಹೈಕಮಾಂಡ್‌, ಚುನಾವಣೆಯ ನಂತರ ಮುಖ್ಯಮಂತ್ರಿ ಯಾರು ಎಂದು ಆಯ್ಕೆ ಮಾಡುವುದಾಗಿ ಹೇಳಿತ್ತು.

ಮತ್ತೊಂದೆಡೆ, 2014ರಿಂದ 2016ರವರೆಗೆ ಕೇಂದ್ರ ಸಚಿವರಾಗಿದ್ದ ಸೊನೊವಾಲ್ 2016ರಲ್ಲಿ ಮುಖ್ಯಮಂತ್ರಿಯಾದರು. ರಾಜ್ಯದಲ್ಲಿ ಅವರದ್ದೇ ಆದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ಅವರನ್ನೇ ಮುಂದುವರಿಸುವ ಬಗ್ಗೆ ಪ್ರಧಾನಿ ಮೋದಿ ಒಲವು ತೋರಿದ್ದಾರೆ ಎಂದು ಬಿಜೆಪಿಯ ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಅಸ್ಸಾಂ ವಿಶ್ವಾಸಗಳಿಸಲು ವಿಫಲವಾದ ಕಾಂಗ್ರೆಸ್‌; ವಿಫಲತೆಗೆ ಇವೆ ಸಾಕಷ್ಟು ಕಾರಣಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights