ಪರಿಷತ್‌ ಚುನಾವಣೆ; ಕೆಲವೆಡೆ ಬಿಜೆಪಿಗೆ, ಕೆಲವೆಡೆ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ!

ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ ಸದ್ದು ಹೆಚ್ಚಾಗಿದೆ. 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ ಆರು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್‌ ಸ್ಪರ್ಧಿಸಿದೆ. ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ನೀಡಲಿದೆ ಎಂಬ ಚರ್ಚೆ ಹೆಚ್ಚಾಗಿತ್ತು. ಇದೀಗ, ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಕೆಲವೆಡೆ ಬಿಜೆಪಿ ಮತ್ತು ಕೆಲವೆಡೆ ಕಾಂಗ್ರೆಸ್‌ಗೆ ಪಕ್ಷ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ನಿರ್ಧರಿಸಲು ಸ್ಥಳೀಯ ನಾಯಕರಿಗೆ ಬಿಡಲಾಗಿದೆ. ಅವರು ಕೆಲವೆಡೆ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕೆಲವೆಡೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ಹೆಚ್‌ಡಿಕೆ ತಿಳಿಸಿದ್ದಾರೆ.

ಹಾಸನ, ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಆರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ಪೈಪೋಟಿ ಇದ್ದು, ಇಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ರೀತಿಯ ಒಳ-ಹೊರ ಒಪ್ಪಂದವಿಲ್ಲ. ನಮ್ಮ ಪಕ್ಷದ ಭವಿಷ್ಯದ ದೃಷ್ಟಿಯನ್ನಿಟ್ಟಿಕೊಂಡು ಯಾವ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂಬುದನ್ನು ಜಿಲ್ಲಾ ಘಟಕದ ಮುಖಂಡರ ಅಭಿಪ್ರಾಯ ಕ್ರೋಧೀಕರಿಸಿ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಪಕ್ಷ ಆಯ ಕ್ಷೇತ್ರದ ಸ್ಥಿತಿ-ಗತಿಯನ್ನು ಆಧರಿಸಿ ಕೆಲವು ಕಡೆ ಬಿಜೆಪಿ, ಮತ್ತೆ ಕೆಲವು ಕಡೆ ಕಾಂಗ್ರೆಸ್ ಗೆ ಬೆಂಬಲ ಕೊಡಲಿದೆ ಎಂದಿದ್ದಾರೆ.

ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ ಎಂಬ ಕಪೋಲಕಲ್ಪಿತ ಸುದ್ದಿಗಳು ವರದಿಯಾಗಿದ್ದವು. ಅಲ್ಲದೆ, ಕಾಂಗ್ರೆಸ್‌ ನಾಯಕರು ಜಿಡಿಎಸ್‌ಅನ್ನು ಬಿಜೆಪಿ ಬಿ-ಟೀಮ್‌ ಎಂದು ಕರೆದಿದ್ದರು. ಅವರು, 2018ರ ಚುನಾವಣೆಯಿಂದಲೂ ಅದೇ ಮಾತನ್ನು ಹೇಳುತ್ತಾ ಬಂದಿದ್ದಾರೆ. ಈಗ ನಮ್ಮದು ಕುಟುಂಬ ಪಕ್ಷ ಎಂದು ದೂರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಆರ್ಥಿಕ ಕಾರಣದಿಂದಾಗಿ ನಾವು 6 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದ್ದೇವೆ. ನಮ್ಮ ಶಕ್ತಿ ಕಡಿಮೆ ಇಲ್ಲ. ಯಾದಗಿರಿ, ಕಲಬುರಗಿಯಲ್ಲಿ ನಮ್ಮ ಮತದಾರರು ಹೆಚ್ಚಿದ್ದಾರೆ. ಇಲ್ಲಿ ಬಿಜೆಪಿ ನಾಯಕರು ನಮ್ಮ ಬೆಂಬಲ ಕೋರಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ತಿಹಾರ್‌ ಜೈಲಿಗೆ ಕಳಿಸಿದ್ದರು: ಡಿಕೆಶಿ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights