ನಶೆಯಲ್ಲಿರುವ ಚಂದನವನದ ಕಲಾವಿದರ ಮತ್ತಿಳಿಸಲು ಪೊಲೀಸರು ಸಜ್ಜು…!

ನಶೆಯಲ್ಲಿರುವ ಚಂದನವನದ ಕಲಾವಿದರ ಮತ್ತಿಳಿಸಲು ಪೊಲೀಸರು ಅಗತ್ಯ ತಯಾರಿ ಮಾಡಿಕೊಳ್ಳುತ್ತಿರುವ ಅಂಶ ಬಯಲಾಗಿದೆ.

ರಾಷ್ಟ್ರೀಯ ಮಾದಕ ತನಿಖಾ ಸಂಸ್ಥೆ ನಡೆಸುತ್ತಿರುವ ವಿಚಾರಣಾ ಪ್ರಕ್ರಿಯೆ ಮುಗಿದ ಬಳಿಕ ತನ್ನ ವರಸಿ ಆರಂಭಿಸಲು ರಾಜ್ಯದ ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಮಾದಕ ವ್ಯಸನದ ಸುಳಿಯಲ್ಲಿ ಕನ್ನಡದ ಕೆಲ ಕಲಾವಿದರು ಇರುವ ಬಗ್ಗೆ ಪೊಲೀಸರಿಗೆ ಈ ಮುಂಚಿನಿಂದಲೂ ಗುಮಾನಿ ಇದ್ದೇ ಇತ್ತು. ಆದರೆ ಸೂಕ್ತ ಪುರಾವೆಗಳಿಗಾಗಿ ಕಾಯುತ್ತಿದ್ದರು.

ಈಗ ಎನ್ಸಿಬಿ ಮೂಲಕ ಕನ್ನಡ ಚಿತ್ರರಂಗದ ಮಾದಕ ಚಟದ ಪ್ರವರ ಅನಾವರಣಗೊಂಡಿದ್ದು, ತಮ್ಮ ಬಳಿ ಇರುವ ಮಾಹಿತಿ ಮತ್ತು ಈ ಹಿಂದಿನ ತನಿಖೆಯ ಜಾಡನ್ನು ಹಿಡಿದು ಮುಂದುವರಿಯಲು ಪೊಲಿಸರು ನಿರ್ಧರಿಸಿದ್ದಾರೆ.

ಈ ಬಾರಿ ತಾವು ಬೀಸುವ ಬಲೆಯಿಂದ ಮಾದಕ ಕಲಾವಿದರು ತಪ್ಪಿಸಿಕೊಳ್ಳದಂತೆ ಮಾಡಲು ಪೊಲೀಸರು ಪಣ ತೊಟ್ಟಿದ್ದು, ಚಿತ್ರರಂಗವನ್ನು ಈ ವ್ಯಸನದಿಂದ ಮುಕ್ತಗೊಳಿಸವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದಕ್ಕಾಗಿ ಪೊಲೀಸರು ವ್ಯಾಪಕವಾಗಿ ಬಲೆ ಬೀಸಿದ್ದು ರಾಜ್ಯಾದ್ಯಂತ ಮಾದಕ ಜಾಲಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಮಾದಕ ವ್ಯಾಪಾರದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಕಲಾವಿದರ ಮಾದಕ ವ್ಯಸನದ ಬಗ್ಗೆ ಮಾಹಿತಿ ನೀಡಲು ಯಾರೇ ಮುಂದೆ ಬಂದರೂ ಅವರಿಗೆ ರಕ್ಷಣೆ ನೀಡುವ ಭರವಸೆಯನ್ನು ಪೊಲೀಸರು ಈಗಾಗಲೇ ನೀಡಿದ್ದು, ಸೂಕ್ಷ್ಮ ಮಾಹಿತಿ ಲಭಿಸುವ ನಿರೀಕ್ಷೆಯಲ್ಲಿ ಇದ್ದಾರೆ.

ಈ ವಿಚಾರವಾಗಿ ಹಲವಾರು ಕಲಾವಿದರನ್ನು ಸಹಾ ವಿಚಾರಣೆಗೆ ಗುರಿಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights