ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ಧ ದೂರು: ತನಿಖೆಗೆ JSP ಆಗ್ರಹ!

ಸಿಎಂ ಬಿಎಸ್‌ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಸಾಂವಿಧಾನಿಕವಾಗಿ ರಾಜ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿ ‘ಜನ ಸಾಮಾನ್ಯರ ಪಕ್ಷ’ವು ರಾಜ್ಯಪಾಲರಿಗೆ ದೂರು ನೀಡಿದೆ.

ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಪಕ್ಷದ ಮುಖಂಡರಾದ ಯಲ್ಲಪ್ಪ ಹೆಗಡೆ ರಾಜ್ಯಪಾಲರಾದ ವಾಜುಭಾಯ್ ವಾಲಾ ಅವರಿಗೆ ಪತ್ರ ಬರೆದಿದ್ದು, ವಿಜಯೇಂದ್ರ ಅವರು ಅಕ್ಷರಶಹ ‘ಪರ್ಯಾಯ ಮುಖ್ಯಮಂತ್ರಿ’ಯಂತೆ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಪತ್ರದಲ್ಲಿ, “ಪ್ರಸ್ತುತ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಸಚಿವ ಸಂಪುಟವು ರಾಜ್ಯದ ಆಡಳಿತ ಮತ್ತು ನಿರ್ಧಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ರಾಜ್ಯ ಸರ್ಕಾರದ ಪ್ರತೀ ಇಲಾಖೆಗಳಲ್ಲೂ ವಿಜಯೇಂದ್ರ ಮಧ್ಯಪ್ರವೇಶಿಸಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇವರು ಏನನ್ನು ಬಯಸುತ್ತಾರೋ ಅದೇ ರೀತಿ ಆಡಳಿತ ನಡೆಯುತ್ತಿದ್ದು, ಇವರು ಅಕ್ಷರಶಹ ‘ಪರ್ಯಾಯ ಮುಖ್ಯಮಂತ್ರಿ’ಯಂತೆ ವರ್ತಿಸುತ್ತಿದ್ದಾರೆ” ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌!

“ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ನೀಡಿದ್ದ ಭರವಸೆಯಂತೆ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗಿದೆ. ಈಗ ಮರಾಠರ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮಗಳ ಸ್ಥಾಪನೆಯ ನಿರ್ಧಾರವೂ ಬಿ.ವೈ.ವಿಜಯೇಂದ್ರ ಅವರ ಕನಸಿನ ಯೋಜನೆಯಾಗಿದೆ. ಇದು ಅವರು ರಾಜ್ಯ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಪ್ರಮುಖ ಸಾಕ್ಷಿಗಳು” ಎಂದು ಹೇಳಿದ್ದಾರೆ.

“ಯಡಿಯೂರಪ್ಪ ಸಂಪುಟದ ಸಚಿವರೆಲ್ಲರೂ ಬಿ.ವೈ.ವಿಜಯೇಂದ್ರ ಅವರ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ತಕ್ಷಣವೇ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿರುವ ಕುರಿತು ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ದೂರಿನ ಪ್ರತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಕಳುಹಿಸಲಾಗಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ? ಬಿಎಸ್‌ವೈಗೆ ತಿಳಿದಿಲ್ಲ ಹೈಕಮಾಂಡ್‌ ಗುಟ್ಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights