ಮೋದಿ ಸರ್ಕಾರದ ವರ್ಚಸ್ಸು ಕುಸಿತ; ಪ್ರಾಬಲ್ಯವನ್ನು ಹೆಚ್ಚಿಸಲು BJPಯ 5 ತಂತ್ರಗಳು ಹೀಗಿವೆ!

ಕೊರೊನಾ ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಿಸದೇ ಟೀಕೆಗಳಿಗೆ ಗುರಿಯಾಗಿರುವ ನರೇಂದ್ರ ಮೋದಿ ಸರ್ಕಾರ ಈಗ ತನ್ನ ಇಮೇಜ್ ಅನ್ನು ಹೆಚ್ಚಿಸಿಕೊಳ್ಳಲು ಭಾರೀ ಪ್ರಯತ್ನ ನಡೆಸುತ್ತಿದೆ. ತನ್ನ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್‌ನಿಂದ ಕೆಲವು ಸಹಾಯಗಳನ್ನು ಪಡೆದು ಬಿಜೆಪಿ ತನಗಾಗಿರುವ ಹಿನ್ನಡೆಯನ್ನು ಮರೆಮಾಚಿಕೊಳ್ಳಲು ಕಾರ್ಯತಂತ್ರವನ್ನು ರೂಪಿಸುತ್ತಿದೆ.

ಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಏಜೆನ್ಸಿಗಳಿಗೆ ತಾವು ಮಾಡುತ್ತಿರುವ ಸಕಾರಾತ್ಮಕ ಕಾರ್ಯಗಳನ್ನು ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡಲು ಸಂದೇಶವನ್ನು ಕಳಿಸಿದೆ. ಪಕ್ಷ ಮತ್ತು ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳಲು ಕೆಲಸ ಮಾಡುತ್ತಿರುವ 5 ದೊಡ್ಡ ವಿಷಯಗಳು ಇಲ್ಲಿವೆ.

1) ಪರಾರಿಯಾದವರನ್ನು ಭಾರತಕ್ಕೆ ಮರಳಿ ತರುವುದು:

ವಂಚಿಸಿ ದೇಶದಿಂದ ಪರಾರಿಯಾದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಹಸ್ತಾಂತರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಡಯಾಮಂಟೈರ್ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಗಿದ್ದು, ಅಲ್ಲಿಂದ ನೇರವಾಗಿ ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್‌ನ ಆಧಾರದ ಮೇಲೆ ಅವರನ್ನು ಭಾರತಕ್ಕೆ ಕರೆತರಲು ಯತ್ನಿಸಲಾಗುತ್ತಿದೆ.

ಚೋಕ್ಸಿಯ ಸೋದರಳಿಯ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಯುಕೆಗೆ ವಿನಂತಿಸಿದೆ ಎಂದು ಹೇಳಲಾಗಿದೆ. ನೀರವ್ ಮೋದಿಯವರ ಮೇಲ್ಮನವಿಯನ್ನು ನವೆಂಬರ್‌ನಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗುವುದು ಮತ್ತು ಮಲ್ಯ ಅವರ ಆಶ್ರಯ ಪ್ರಕರಣದ ವಿಚಾರಣೆಯು ಉನ್ನತ ನ್ಯಾಯಾಧಿಕರಣದಲ್ಲಿ ಉಳಿದಿದೆ.

ಪರಾರಿಯಾದವರಲ್ಲಿ ಯಾರನ್ನಾದರೂ ಶೀಘ್ರದಲ್ಲೇ ಮರಳಿ ಕರೆತರಲು ಸಾಧ್ಯವಾದರೆ. ಅದು ತಮ್ಮ ಪಕ್ಷದ ಚಿತ್ರಣ ಮತ್ತು ವರ್ಚಸ್ಸನ್ನು ದೇಶಾದ್ಯಂತ ಬಲಪಡಿಸಿಕೊಳ್ಳಬಹುದು ಎಂದು ಬಿಜೆಪಿ ಭಾವಿಸಿದೆ.

2) ಸಚಿವಾಲಯಗಳ ವಿಮರ್ಶೆ ಮತ್ತು ಕ್ಯಾಬಿನೆಟ್ ಪುನರ್ರಚನೆ:

ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ತಮ್ಮ ಕಾರ್ಯಗಳನ್ನು ಪರಿಶೀಲಿಸಲು ವಿವಿಧ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ. ಕ್ಯಾಬಿನೆಟ್‌ನ ಪುನರ್ರಚನೆ ಮತ್ತು ವಿಸ್ತರಣೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾದ ಒಂದು ಕಾರ್ಯಾಚರಣೆಯಾಗಿ ಈ ಪ್ರಕ್ರಿಯೆಯನ್ನು ನೋಡಲಾಗಿದೆ.  ಅಲ್ಲಿ ಕಾರ್ಯನಿರ್ವಹಿಸದ ಮಂತ್ರಿಗಳಿಗೆ ಗೇಟ್‌ಪಾಸ್‌ ಕೊಡುವುದು.ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಶಿವಸೇನೆ ಎನ್‌ಡಿಎಯಿಂದ ನಿರ್ಗಮಿಸಿದ ನಂತರ ಮತ್ತು ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಕಾರಣದಿಂದಾಗಿ ಸಂಪುಟದಲ್ಲಿ ಖಾಲಿ ಹುದ್ದೆಗಳಿವೆ. ಅನೇಕ ಮಂತ್ರಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

ಜ್ಯೋತಿರಡಿತ್ಯ ಸಿಂಧಿಯಾ, ಸುಶೀಲ್ ಮೋದಿ ಮತ್ತು ಸರ್ಬಾನಂದ ಸೋನೊವಾಲ್ ಅವರಂತಹ ನಾಯಕರು ಸಂಪುಟದೊಳಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಮುಂದಿನ ಸುತ್ತಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಯುಪಿ ಮತ್ತು ಪಂಜಾಬ್‌ನ ಕೆಲವು ನಾಯಕರು ಕ್ಯಾಬಿನೆಟ್‌ಗೆ ಕಾಲಿಡಬಹುದು ಎಂದು ಮೂಲಗಳು ಹೇಳುತ್ತಿವೆ.

3) ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಾಯಕತ್ವದ ವಿಮರ್ಶೆ:

ಯುಪಿ ಯಲ್ಲಿ ಮುಂದಿನ ವರ್ಷದಲ್ಲಿ  ನಡೆಯಲಿರುವ ನಿರ್ಣಾಯಕ ಚುನಾವಣೆಗಳು ಮತ್ತು ರಾಜ್ಯ ನಾಯಕತ್ವದಿಂದ ಕೊರೊನಾ ವೈರಸ್ ಅನ್ನು ನಿರ್ವಹಿಸುವ ಬಗ್ಗೆ ವಿಮರ್ಶಾತ್ಮಕ ವರದಿಗಳು ಬಂದಿರುವುದರಿಂದ, ಯುಪಿ ಕ್ಯಾಬಿನೆಟ್‌ನ ಪುನರ್ರಚನೆಯ ಸಾಧ್ಯತೆಯನ್ನು ನೋಡುತ್ತಿವೆ. ಇದು ಚುನಾವಣೆಗೆ ಮುಂಚಿತವಾಗಿ ವಿವಿಧ ಜಾತಿ ಮತ್ತು ಸಮುದಾಯಗಳಿಗೆ ಉತ್ತಮ ಪ್ರಾತಿನಿಧ್ಯವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳ ಬಗ್ಗೆ ಕೇಂದ್ರ ನಾಯಕತ್ವವು ಕಾಳಜಿಯನ್ನು ಹೊಂದಿದೆ ಎಂದು ಕಾಣಿಸುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ನಾಯಕತ್ವದ ಬದಲಾವಣೆಯ ಬಗ್ಗೆಯೂ ಊಹಾಪೋಹಗಳಿದ್ದವು. ಕೇಂದ್ರ ನಾಯಕತ್ವವು ಸದ್ಯಕ್ಕೆ ಮಧ್ಯಪ್ರದೇಶ ಮತ್ತು ಹಿಮಾಚಲದಲ್ಲಿ ಶಾಂತಿಯನ್ನು ಖಾತ್ರಿಪಡಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಲಿಂಗಾಯತ ಪ್ರಬಲ ವ್ಯಕ್ತಿಯ ವಿರುದ್ಧ ಭಿನ್ನಾಭಿಪ್ರಾಯದ ಆಂತರಿಕ ಅಸಮಾಧಾನ ಪ್ರಬಲವಾಗುತ್ತಿದೆ.

ಕೇಂದ್ರ ನಾಯಕತ್ವವು ಈ ಹಿಂದೆ ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ವಿರುದ್ಧದ ಪ್ರತಿಭಟನೆಯನ್ನು ತಗ್ಗಿಸಿತು. ಆದರೆ ಉತ್ತರಾಖಂಡದಲ್ಲಿ ಶಾಸಕರು ಸಿಎಂ ವಿರುದ್ಧ ದಂಗೆ ಎದ್ದ ನಂತರ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಿಸಬೇಕಾಯಿತು.

ಪಕ್ಷದೊಳಗಿನ ಗಲಾಟೆಗಳ ಬಗ್ಗೆ ಆರ್‌ಎಸ್‌ಎಸ್ ಚಿಂತಿಸುತ್ತಿದೆ ಮತ್ತು “ತನ್ನ ರಾಜ್ಯ ನಾಯಕರನ್ನು ನಿಯಂತ್ರಿಸಲು” ಬಿಜೆಪಿಯನ್ನು ಕೇಳಿದೆ ಎಂದು ಮೂಲಗಳು ಹೇಳುತ್ತವೆ.

4) ವಲಸೆ ಬಂದ ನಾಯಕರು:

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಿಂದ ಬಿಜೆಪಿ ಬಂದ ಕೆಲವು ನಾಯಕರ ಬಗ್ಗೆ ಬಿಜೆಪಿ ತನ್ನ ಆಮಿಷವನ್ನು ಪೂರೈಸದೇ ಇರಬಹುದು. ಆದರೆ, ಪಕ್ಷವು ಜಿತಿನ್ ಪ್ರಸಾದ ಅವರಂತಹ ಕಾಂಗ್ರೆಸ್ಸಿಗರನ್ನು ಆಕರ್ಷಿಸುತ್ತಲೇ ಇದೆ. ಈ ಹಿಂದೆ ಸಿಂಧಿಯಾ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಳೆದ ವರ್ಷ ಬಿಜೆಪಿಗೆ ಸೇರಲು ಕಾಂಗ್ರೆಸ್ ತೊರೆದಿದ್ದರು. ಈ ಬಿಕ್ಕಟ್ಟು ಕಮಲ್ ನಾಥ್ ಸರ್ಕಾರವು ಮಧ್ಯಪ್ರದೇಶದಲ್ಲಿ ಬಹುಮತವನ್ನು ಕಳೆದುಕೊಳ್ಳಲು ಕಾರಣವಾಯಿತು. ಅಲ್ಲದೆ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ಕರೆತಂದಿತು.

ಸಚಿನ್ ಪೈಲಟ್ ಮತ್ತು ಆರ್.ಪಿ.ಎನ್ ಸಿಂಗ್‌ ಸೇರಿದಂತೆ ಕಾಂಗ್ರೆಸ್ ನ ಇತರ ಯುವ ನಾಯಕರನ್ನು ಬಿಜೆಪಿ ಸಕ್ರಿಯವಾಗಿ ಆಕರ್ಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅದು ಯಶಸ್ವಿಯಾದರೆ, ಅಳಿವಿನ ಅಂಚಿನಲ್ಲಿ ಹರಿಯುತ್ತಿರುವ ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಲಿದೆ. ಇತ್ತೀಚೆಗೆ ಟಿಆರ್‌ಎಸ್ ಮುಖಂಡ ಎಟೆಲಾ ರಾಜೇಂದರ್ ಕೂಡ ಬಿಜೆಪಿಗೆ ಸೇರಿದ್ದಾರೆ.

5) ಕೋರ್ಸ್ ತಿದ್ದುಪಡಿ

ಉನ್ನತ ಬಿಜೆಪಿ ನಾಯಕತ್ವ ಮತ್ತು ಆರ್‌ಎಸ್‌ಎಸ್ ನಡುವಿನ ಸರಣಿ ಸಭೆಗಳಲ್ಲಿ, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ನಿರ್ಧರಿಸಲಾಗಿದೆ. ಮೋದಿ ಸರ್ಕಾರದ ಲಸಿಕೆ ಖರೀದಿ ನೀತಿಯನ್ನು ಹಿಮ್ಮೆಟ್ಟಿಸುವುದು ಸಹ ತಂತ್ರದ ಒಂದು ಭಾಗವೆಂದು ಹೇಳಲಾಗಿದೆ. ಲಸಿಕೆ ವಿತರಣೆಯ ವಿಚಾರದಲ್ಲಿ ಒಕ್ಕೂಟ ಸರ್ಕಾರದ ಧೋರಣೆಯ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದ ನಂತರ, ಪ್ರಧಾನಿ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವಾಗ ಲಸಿಕೆ ವಿತರಣಾ ನೀತಿಯ ಬದಲಾವಣೆಯನ್ನು ಘೋಷಿಸಿದ್ದರು.

ಇನ್ನೂ ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ಪ್ರತಿಭಟನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಕೇಂದ್ರವು ಭತ್ತ ಮತ್ತು ಇತರ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಹೆಚ್ಚಿಸಿದೆ. ಈ ನಿರ್ಧಾರವು ಪ್ರತಿಭಟನಾ ನಿರತ ರೈತರನ್ನು ಆಕರ್ಷಿಸಿಲ್ಲವಾದರೂ, ಇದು ವಿಶ್ವಾಸಾರ್ಹತೆಯಾಗಿದೆ ಎಂದು ಸರ್ಕಾರ ಹೇಳುತ್ತದೆ.

ಬಿಜೆಪಿ ಅಧ್ಯಕ್ಷ ನಡ್ಡಾ ಅವರು ದೇಶಾದ್ಯಂತದ ‘ಸೇವಾ ಹಿ ಸಂಘಟನ್’ ಪ್ರೋಗ್ರಾಮ್ ಅಡಿಯಲ್ಲಿ ಪಕ್ಷದ ಕಾರ್ಯಕರ್ತರು ಕೈಗೊಂಡ ಕೋವಿಡ್ ಪರಿಹಾರ ಕಾರ್ಯಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನ ಕೆಲವು ನಾಯಕರು “ಬಿಜೆಪಿ ಕಾರ್ಯಕರ್ತರ ಗೈರುಹಾಜರಿ” ಬಗ್ಗೆ ಟೀಕೆಗೆ ಗುರಿಯಾಗಿದ್ದರಿಂದ ಇದನ್ನು ಮಾಡಲಾಗಿದೆ.

ಮೂಲ: ಔಟ್‌ಲುಕ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಆಂಧ್ರ ರಾಜ್ಯಪಾಲರಾಗಿ ಯಡಿಯೂರಪ್ಪ? ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights