ದುಡಿಮೆಯ ಬಾಗಿಲು ಮುಚ್ಚಿ ಪ್ರಚಾರದ ಬಾಗಿಲು ಮಾತ್ರ ತೆರೆದ ಜನನಾಯಕರು..!

ನೀವೇನಾದ್ರು ಮಾಸ್ಕ್ ಹಾಕದೇ ರಸ್ತೆಗಿಳಿದಿರುವುದುಂಟಾ..? ಹಾಗಾನೇದ್ರು ಹೊರಬಂದ್ರೆ ನಿಮಗೆ ಕೊರೊನಾ ವಾರಿಯರ್ಸ್ ಹಾಗೂ ಬಿಬಿಎಂಪಿ ಜೊತೆಗೆ ಪೊಲೀಸರು ಪ್ರಶ್ನೆ ಮಾಡ್ತಾರೆ ತಾನೆ. ಅಯ್ಯೋ ಸಿಕ್ಕಿಬಿದ್ದೆ ಅಂದುಕೊಂಡೋ ಅಥವಾ ನಾನು ಹೀಗೆ ಮಾಸ್ಕ್ ಹಾಕುವುದನ್ನ ಮರೆಯಬಾರದಿತ್ತು ಅಂದುಕೊಂಡೋ ನೀವು ದಂಡ ಕಟ್ಟಿರುತ್ತೀರಿ. ಆದರೆ ಇಂಥಹ ಪಾಪಪ್ರಜ್ಞೆ ನಮ್ಮ ಜನನಾಯಕರಿಗೆ ಯಾಕೆ ಇಲ್ಲ? ಜನಾಶೀರ್ವಾದ ಹೆಸರಿನಲ್ಲಿ ನೂರಾರು ಜನರನ್ನು ಸೇರಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಜನನಾಯಕರಿಗೆ ಯಾಕೆ ಕೊರೊನಾ ಹರಡುವ ಭೀತಿ ಇಲ್ಲ? ಮೆರವಣಿಗೆಯಲ್ಲಿ ಸೇರುವ ಜನರಿಗೆ ಕೊರೊನಾ ಹರಡೋದಿಲ್ವೇ? ಇದೆಂಥ ನ್ಯಾಯ..?

ಅಂಗಡಿಗಳಲ್ಲಿ ಜನ ಗುಂಪು ಗುಂಪಾಗಿ ಆಗಮಿಸಿದರೆ ಅಂಗಡಿ ಮಾಲೀಕ ದಂಡ ಕಟ್ಟಬೇಕು.ಅಂಗಡಿ ಮುಂದೆ ಹಾಕಿದ ಅಂತರದ ಬಾಕ್ಸ್ ಗಳಲ್ಲಿ ನಿಂತು ಗಂಟೆಗಟ್ಟಲೆ ಕಾದು ವಸ್ತುಗಳನ್ನ ಖರೀದಿ ಮಾಡ್ಬೇಕು. ರಾತ್ರಿ 9 ಗಂಟೆ ಮೇಲೆ ಅಂಗಡಿಗಳು ಓಪನ್ ಮಾಡುವಂತಿಲ್ಲ. ಹಾಗೊಂದು ವೇಳೆ ಮಾಡಿದ್ರೆ ದಂಡ ಕಟ್ಟಬೇಕು. ಹೀಗೆ ಜನಸಾಮಾನ್ಯರಿಂದ ಹಣ ಸುಲಿಯುತ್ತಿರುವ ರಾಜ್ಯ ಸರ್ಕಾರ ಜನ ನಾಯಕರಿಗ್ಯಾಕೆ ಅದ್ದೂರಿ ಸ್ವಾಗತ, ಮೆರವಣಿಗೆಗೆ ಅವಕಾಶ ಕಲ್ಪಿಸಿಕೊಟ್ಟಿದೆ?

ಇನ್ನೂ ರಾತ್ರಿ ಹೊತ್ತು ಕೆಸಲಕ್ಕೆ ಹೋಗಬೇಕು ಅಂದ್ರೆ ನೂರೆಂಟು ಕೊರೊನಾ ನಿಯಮ ಪಾಲಿಸಬೇಕು. ಕೆಲಸ ಮಾಡುವ ಆಫೀಸ್ ನಿಂದ ಐಡಿ ಕಾರ್ಡ್ ಹೊಂದಿರಬೇಕು. ಮಾಸ್ಕ್ ಕಡ್ಡಾಯವಾಗಿರಬೇಕು. ಹೀಗೆ ದುಡಿದು ತಿನ್ನುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ನೂರಾರು ಕೊರೊನಾ ನಿಯಮಗಳನ್ನು ಜಾರಿ ಮಾಡಿದೆ. ಆದರೆ ಇದೇ ನಿಯಮಗಳು ಜನನಾಯಕರು ಅನುಸರಿಸುತ್ತಾರಾ? ಈ ನಿಯಮಗಳು ಯಾಕೆ ಅವರಿಗೆ ಅನ್ವಯವಾಗುವುದಿಲ್ಲ ಎನ್ನುವುದೇ ಉತ್ತರ ಸಿಗದ ಪ್ರಶ್ನೆ. ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಬಿಜೆಪಿ ಜನಪ್ರತಿನಿಧಿಗಳು ಅದ್ದೂರಿ ಸ್ವಾಗತ,  ಮೆರವಣಿಯಲ್ಲಿ ಗುಂಡು ಹಾರಿಸಿ ಸಂತಸಪಡುತ್ತಿದ್ದಾರೆ.

ಹೊಟ್ಟೆಪಾಡಿಗೆ ದುಡಿಯುವ ಜನರಿಗೆ ಮಾತ್ರ ನೂರೆಂಟು ಕೊರೊನಾ ನಿಯಮಗಳು. ಆದ್ರೆ ಅದ್ದೂರಿ ರಾಜಕಾರಣಕ್ಕೆ ಮಾತ್ರ ಕೊರೊನಾ ನಿಯಮ ಅನ್ವಯವಾಗುತ್ತಲೇ ಇಲ್ಲ.

ಇದಕ್ಕೆ ನಿನ್ನೆ ಮೊನ್ನೆ ನಡೆದ ಜನಾಶೀರ್ವಾದ ಯಾತ್ರೆಯ ಕೆಲ ವಿಡಿಯೋ ಮತ್ತು ಪೋಟೋಗಳೇ ಸಾಕ್ಷಿ..

ಮೊನ್ನೆಯಷ್ಟೇ (17-8-2021) ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಡ್ಯ ಜಿಲ್ಲೆಯ ಹೊನಗನಹಳ್ಳಿಯಲ್ಲಿ ನಾಟಿ ಮಾಡಿದ ವೇಳೆ ಊರ ಜನರೇ ಸೇರಿರುವ ವಿಡಿಯೋವಿದು.

17-8-2021ರಂದು ಹುಬ್ಬಳ್ಳಿ ಜನಾಶೀರ್ವಾದ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಇಲ್ಲಿನ ಸಿದ್ಧಾರೂಢ  ಮಠಕ್ಕೆ ಭೇಟಿ ನೀಡಿದ ವೇಳೆ.

rajeev chandrasekhar

ದಿನಾಂಕ 18-8-2021ರಂದು ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯರಗೋಳ ಗ್ರಾಮಕ್ಕೆ ಕೇಂದ್ರ ಸಚಿವ ಖೂಬಾ ಆಗಮಿಸಿ ನೂರಾರು ಜನರ ಮಧ್ಯೆ ಬಂದೂಕು ಹಿಡಿದಿರುವ ದೃಶ್ಯ.

ಹಾಡಹಗಲೇ ಗುಂಡಿನ ಸದ್ದು; ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಿಜೆಪಿ ನಾಯಕರ ಕೈಯಲ್ಲಿ ಬಂದೂಕು

ಕೇಂದ್ರ ಸಚಿವ ಎ ನಾರಾಯಣಸ್ವಾಮಿಗೆ ಚಳ್ಳಿಕೆರೆಯಲ್ಲಿ ಅದ್ದೂರಿ ಸ್ವಾಗತದ ದೃಶ್ಯ…

 

Union Minister A Narayanaswamy Gets Grand Welcome At Bengaluru Intl Airport From His Supporters - YouTube

ಜನಾಶೀರ್ವಾದ ಯಾತ್ರೆಗೆ ಮಾತ್ರ ಯಾವ ಕೊರೊನಾ ನಿಯಮನೂ ಕೂಡ ಅನ್ವಯವಾಗುತ್ತಿಲ್ಲ. ಇಲ್ಲಿ ಅದೆಷ್ಟು ಜನ ಸೇರ್ತಾರೋ..? ಎಷ್ಟು ಜನ ಮಾಸ್ಕ್ ಹಾಕ್ತಾರೋ..? ಎಷ್ಟು ಜನ ಅಂತರ ಕಾಯ್ದುಕೊಳ್ಳುತ್ತಾರೋ ಆ ದೇವರೇ ಬಲ್ಲ. ಅಪ್ಪಿ ತಪ್ಪಿನೂ ಇಂಥಹ ಮೆರವಣಿಗೆಗೆ ಜಿಲ್ಲಾಡಳಿತ ಕಣ್ಣಾಯಿಸಿ ಕೂಡ ನೋಡುವುದಿಲ್ಲ. ಪೊಲೀಸರಂತೋ ಸಾಮಾನ್ಯ ದಿನಗಳಂತೆ ಜನ ಪ್ರತಿನಿಧಿಗಳ ರಕ್ಷಣೆಗೆ ನೆರೆದಿರುತ್ತಾರೇ ಹೊರತು ಅಲ್ಲಿ ಯಾರು ಕೊರೊನಾ ನಿಯಮ ಪಾಲಿಸಿರುತ್ತಾರೆನ್ನುವುದನ್ನ ನೋಡುವುದಿಲ್ಲ. ಯಾರನ್ನೂ ಪ್ರಶ್ನೆ ಮಾಡುವುದಿಲ್ಲ. ಯಾರಿಗೂ ದಂಡ ಹಾಕುವುದಿಲ್ಲ. ಜನ ಸಮಾನ್ಯರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯಾನಾ..?

ರಾಜ್ಯ ಸರ್ಕಾರ ಯಾಕೆ ಇಂಥಹ ಅದ್ದೂರಿ ಸ್ವಾಗತಗಳನ್ನು ನೋಡುತ್ತಾ ಕುಳಿತಿದೆ. ಯಾಕೆ ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿಲ್ಲ. ಇದೇ ಜಾಗದಲ್ಲಿ ಯಾವುದಾದರು ಒಂದು ಪ್ರತಿಭಟನೆ ನಡೆದರೆ ಪೊಲೀಸರು ಸುಮ್ಮನೆ ಬಿಡ್ತಾರಾ? ಯಾವೆಲ್ಲಾ ಕೇಸ್ ಹಾಕಬೇಕೋ ಅದೆಲ್ಲವನ್ನೂ ಹಾಕಿ ಕಸ್ಟಡಿಗೆ ತಳ್ಳಿಬಿಡ್ತಾರೆ. ಇಂಥ ವ್ಯವಸ್ಥೆಯನ್ನ ಯಾಕೆ ಬುದ್ಧಿ ಜೀವಿಗಳು ಪ್ರಶ್ನಿಸುತ್ತಿಲ್ಲ? ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವ ಜನಪ್ರತಿನಿಧಿಗಳ ಕಳ್ಳಾಟವನ್ನು ಯಾಕೆ ಯಾರು ಪ್ರಶ್ನೆ ಮಾಡಲು ಮುಂದೆ ಬರುತ್ತಿಲ್ಲ.

ಇಂಥಹ ತಾರತಮ್ಯ ಹೋಗಬೇಕು. ಜನ ಆರ್ಥಿಕವಾಗಿ ಸದೃಢವಾಗುವವರೆಗೂ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜನಸಾಮಾನ್ಯರನ್ನು ಕೊರೊನಾ ಎನ್ನುವ ಭಯದಲ್ಲಿ ಕಟ್ಟಿಹಾಕಿ ತಾವು ಮಾತ್ರ ನಿರ್ಭಯವಾಗಿ ಓಡಾಡುವ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕಾಗಿದೆ. ರಾಜ್ಯದ ಜನ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಚುನಾವಣೆ ವೇಳೆ ದುಡ್ಡಿಗಾಗಿ ಜನರನ್ನು ಕೊಂಡು ಮತಗಿಟ್ಟಿಸಿಕೊಳ್ಳುವ ಅಧಿಕಾರ ಪಡೆಯುವ ಜನನಾಯಕರು ಜನರಿಗಾಗಿ ಸೇವೆ ಮಾಡುತ್ತಾರಾ? ಮಾಡುತ್ತಿದ್ದಾರಾ? ಎನ್ನುವ ಬಗ್ಗೆ ಯೋಚಿಸಬೇಕಿದೆ. ಇಲ್ಲವಾದ್ರೆ ಇಂಥಹ ವ್ಯವಸ್ಥೆ ಬದಲಾಗಲೂ ಸಾಧ್ಯವಿಲ್ಲ. ದುಡಿಮೆ ಎನ್ನುವ ಬಾಗಿಲು ಮುಚ್ಚಿ ಪ್ರಚಾರದ ಬಾಗಿಲು ತೆರೆದ ಜನನಾಯಕರಿಗೆ ಜೈಕಾರ ಹಾಕಿಕೊಂಡು ಬದುಕುವ ಸ್ಥಿತಿ ಇನ್ಮುಂದೆ ಕಡ್ಡಾಯವಾದ್ರೂ ಆಶ್ಚರ್ಯವಿಲ್ಲ.

 

Published by: Sunita Bhandari

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights