ಹಣದಾಸೆಯಿಂದ ಸ್ನೇಹಿತನನ್ನೇ ಕಿಡ್ನಾಪ್‌ ಮಾಡಿದ ಸಹಪಾಠಿಗಳು; ಐವರ ಬಂಧನ

ಹಣದಾಸೆಯಿಂದ ತಮ್ಮ ಸ್ಮೇಹಿತನನ್ನೇ ಅಪಹರಿಸಿದ್ದ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದ ಅಭಿಷೇಕ್‌ ಎಂಬಾತನನ್ನು ಆತನ ಸಹಪಾಠಿಗಳೇ ಆದ ಭುವನ್‌, ಪ್ರಜ್ವಲ್‌ ಮತ್ತು ಅವರ ಸ್ನೇಹಿತರಾದ ಅನಿಲ್, ದೀಪು, ನಿಶ್ಚಯ್ ಎಂಬುವವರು ಸೇರಿ ಅಪಹರಿಸಿದ್ದರು. ಈ ಐವರು ಅರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ವಿದ್ಯಾಭ್ಯಾಸ ಮಾಡುತ್ತಲೇ ರಿಯಲ್ ಎಸ್ಟೇಟ್ ಕಚೇರಿಯೊಂದರಲ್ಲಿ ಪಾರ್ಟ್‌ ಟೈಮ್‌ ಉದ್ಯೋಗ ಮಾಡುತ್ತಿದ್ದ. ಅದರಿಂದ ಬರುವ ಹಣದಿಂದ ತನ್ನ ಓದಿನ ಖರ್ಚನ್ನು ಭರಿಸುತ್ತಿದ್ದ ಮತ್ತು ಕುಟುಂಬ ನಿರ್ವಹಣೆಗೂ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್‌ ತಂದೆ ಆಟೋ ಚಾಲಕರಾಗಿದ್ದರು. ಹೀಗಾಗಿ, ತಂದೆ-ಮಗನ ಬಳಿ ಹೆಚ್ಚು ಹಣ ಇರುತ್ತದೆ. ಆತನನ್ನು ಅಪಹರಿಸಿದರೆ ದುಡ್ಡು ಪಡೆಯಬಹುದು ಎಂದು ಯೋಜಿಸಿದ ಈ ಐವರು, ನ. 18ರಂದು ಅಭಿಷೇಕ್‌ನನ್ನು ಅಪಹರಿಸಿದ್ದರು. ಅಲ್ಲದೆ, ಆತನನ್ನು ಕಾರಿನಲ್ಲಿ ನೆಲಮಂಗಲ, ದಾಬಸ್ ಪೇಟೆ, ದೇವನಹಳ್ಳಿಯಲ್ಲಿ ಸುತ್ತಾಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

10 ಲಕ್ಷ ಕೊಡಬೇಕು ಎಂದು ಅಭಿಷೇಕ್‌ನಿಂದ ಛಾಪಾ ಕಾಗದದ ಮೇಲೆ ಬಲವಂತವಾಗಿ ಸಹಿ ಹಾಕಿಸಿಕೊಂಡ ಆರೋಪಿಗಳು, ಆತನ ತಂದೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಗ ಕಾಣದಿದ್ದರಿಂದ ಕಂಗಾಲಾದ ತಂದೆ, ತಮ್ಮ ಮನೆಯಲ್ಲಿದ್ದ ಚಿನ್ನವನ್ನು ಗಿರವಿ ಇಟ್ಟು ಆರೋಪಿಗಳ ಖಾತೆಗೆ 45,000 ರೂ ಹಾಕಿದ್ದಾರೆ. ನಂತರ, ಆರೋಪಿಗಳು ಅಭಿಷೇಕ್‌ನನ್ನು ಬಿಟ್ಟು ಹೋಗಿದ್ದಾರೆ.

ನಂತರ, ಅಭಿಷೇಕ್‌ ಮತ್ತು ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಗಳಿಂದ 1 ಮೊಬೈಲ್ ಫೋನ್, ಇ- ಸ್ಟಾಂಪ್ ಪೇಪರ್, ಚಿನ್ನದ ಸರ ಮತ್ತು 80,000 ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಎರಡು ತಿಂಗಳಿಂದ ನಿರಂತರ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights