ಪೌರಕಾರ್ಮಿಕ ಆತ್ಮಹತ್ಯೆ: ಅಧಿಕಾರಿಗಳ ಕಿರುಕುಳವೇ ಕಾರಣ ಎಂದ ಡೆತ್‌ನೋಟ್‌!

ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ತನ್ನ ಸಾವಿಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿರುವ ಪೌರಕಾರ್ಮಿಕ, ತನಗೆ ಪುರಸಭೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವವರು ಮದ್ದೂರು ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕ ನಾರಾಯಣ ಎಂದು ತಿಳಿದು ಬಂದಿದೆ. ತನ್ನ ಸಾವಿಗೆ ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ಮತ್ತು ಜಾಸ್ಮಿನ್ ಖಾನ್ ಅವರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

ಪೌರಕಾರ್ಮಿಕ ನಾರಾಯಣ ಅವರಿಗೆ ಮೂವರು ಮಕ್ಕಳಿದ್ದು, ಹೆಂಡತಿ ಕಳೆದ 5 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.

ಘಟನೆಯ ವಿವರ:

ಪೌರಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿಯಕೂಡದು ಎಂಬ ನಿಯಮವಿದೆ. ಆದರೆ ಅದನ್ನು ಮೀರಿದ ಅಧಿಕಾರಿಗಳು ನಾರಾಯಣ ಅವರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ್ದರು. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನಾರಾಯಣ ಅವರನ್ನು ಕರೆದು ಬೆದರಿಕೆ ಹಾಕಿದ್ದಾರೆ. “ತಾನು ಮ್ಯಾನ್‌ಹೋಲ್‌ಗೆ ಇಳಿಯಲು ಅಧಿಕಾರಿಗಳು ಕಾರಣವಲ್ಲ; ನಾನೇ ಸ್ವಯಿಚ್ಚೆಯಿಂದ ಇಳಿದಿದ್ದೇನೆ” ಎಂದು ಆತನಿಂದ ಹೇಳಿಕೆ ಕೊಡಿಸಿದ್ದಾರೆ.

ನಂತರ 2018 ರಲ್ಲಿ ಒಮ್ಮೆ ಆರೋಗ್ಯ ಅಧಿಕಾರಿ ಹೇಳಿದ ಕೆಲಸವನ್ನು ಮಾಡಲು ನಿರಾಕರಿಸಿದ ನಾರಾಯಣ ಅವರನ್ನು ಅಧಿಕಾರಿ ಹೊಡೆದಿದ್ದರು. ಈ ಘಟನೆಯಿಂದ ನೊಂದ ನಾರಾಯಣ ದೂರು ನೀಡುವುದಾಗಿ ತಿಳಿಸಿದ್ದಾರೆ. ಆದರೆ ಕೌನ್ಸಿಲರ್ ಸೇರಿದಂತೆ ಕೆಲವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ. ಜೊತೆಗೆ ಆರೋಗ್ಯ ಆಧಿಕಾರಿ ನಾರಾಯಣ ಅವರ ಬಳಿ ಕ್ಷಮೆ ಕೇಳುವಂತೆ ಆದೇಶಿಸಿದ್ದಾರೆ. ಹಾಗಾಗಿ ಅಧಿಕಾರಿ ಕ್ಷಮೆ ಕೂಡ ಕೇಳಿದ್ದರು. ಆದರೆ ಇದನ್ನೇ ಗುರಿಯಾಗಿಸಿಕೊಂಡು ಅಂದಿನಿಂದ ಆ ಅಧಿಕಾರಿ ನಾರಾಯಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಫೆ.22 ರಂದು ನಾರಾಯಣ ಅವರಿಗೆ ಕೋವಾಕ್ಸಿನ್ ಲಸಿಕೆ ನೀಡಲಾಗಿತ್ತು. ನಂತರ ಸ್ವಲ್ಪ ಚಳಿ-ಜ್ವರ ಕಾಣಿಸಿಕೊಂಡಿದ್ದರಿಂದ ಅವರು ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಮರುದಿನ ಕೆಲಸಕ್ಕೆ ಹೋದಾಗ ಮುಖ್ಯ ಅಧಿಕಾರಗಳಿಂದ ಅನುಮತಿ ಪಡೆದು ಕೆಲಸಕ್ಕೆ ಬರಬೇಕು ಎಂದು ಮೇಸ್ತ್ರಿಗಳು ಹೇಳಿಕಳುಹಿಸಿದ್ದಾರೆ. ಆಗ ನಾರಾಯಣ ಆರೋಗ್ಯ ಅಧಿಕಾರಿಗಳ ಬಳಿ ಹೋದಾಗ, ಅಲ್ಲಿ ಅವರು “ನೀನು ಟ್ರ್ಯಾಕ್ಟರ್ ಕೆಲಸಕ್ಕೆ ಹೋಗು” ಎಂದು ಹೇಳಿದ್ದಾರೆ. ಇದು ತುಂಬಾ ಕಷ್ಟದ ಕೆಲಸವಾಗಿರುವುದರಿಂದ, ಜೊತೆಗೆ ತನಗೆ ಆರೋಗ್ಯ ಸರಿಯಿಲ್ಲದಿರುವುದರಿಂದ ಬೇರೆ ಕೆಲಸ ಕೊಡಿ ಎಂದು ನಾರಾಯಣ ಕೇಳಿದ್ದಾರೆ. ಈ ಹಿಂದೆಯೂ ನಾರಾಯಣ ಇದೇ ಕೆಲಸವನ್ನು ಮಾಡಿದ್ದಾರೆ. ಆದರೆ ಅಂದು ಆರೋಗ್ಯ ಸರಿಯಿಲ್ಲದಿದ್ದುದರಿಂದ ಈ ಕೆಲಸ ಮಾಡಲು ನಿರಾಕರಿಸಿದ್ದಾರೆ. ಆದರೆ ಕಿರುಕುಳ ನೀಡುತ್ತಿದ್ದ ಅಧಿಕಾರಿ ಈ ಅವಕಾಶವನ್ನು ಬಳಸಿಕೊಂಡು, “ಮಾಡಿದರೆ ಈ ಕೆಲಸ ಮಾಡು; ಇಲ್ಲದಿದ್ದರೆ ಮನೆಗೆ ಹೋಗು” ಎಂದು ನಿಂದಿಸಿ ಕಳುಹಿಸಿದ್ದಾರೆ.

ಇದರಿಂದ ಮನನೊಂದ ನಾರಾಯಣ, ತನ್ನ ಮನೆಗೆ ಬಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ, “ಪುರಸಭೆಯ ಮುಖ್ಯ ಅಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳೇ ನನ್ನ ಸಾವಿಗೆ ಕಾರಣ. ಅವರು ನನಗೆ ಕಿರುಕುಳ ನೀಡಿದ್ದಾರೆ” ಎಂದು ಬರೆದಿದ್ದಾರೆ.

ಈ ವಿಷಯ ತಿಳಿದ ಅಧಿಕಾರಿಗಳು ಇತರ ಪೌರ ಕಾರ್ಮಿಕರಿಗೂ ಬೆದರಿಕೆ ಹಾಕಿದ್ದು, ಯಾರೂ ಕೂಡ ಅಲ್ಲಿಗೆ ಹೋಗಕೂಡದು ಎಂದು ಒತ್ತಾಯಿಸಿದ್ದಾರೆ. ನಂತರ ಈ ಪ್ರಕರಣವನ್ನು ಮುಚ್ಚಿಹಾಕಲು ಪುರಸಭೆಯ ಇತರ ಅಧಿಕಾರಿಗಳು ಮತ್ತು ಕೌನ್ಸಿಲರ್‌ಗಳು ಸೇರಿ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ವಿಷಯ ಸಮಾಜ ಕಲ್ಯಾಣ ಇಲಾಖೆಯ ಮಟ್ಟದಲ್ಲಿ ಚರ್ಚೆಗೆ ಬಂದು ಪುರಸಭೆಯ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಈ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Read Also: ನಾನು ಎಲ್ಲರಿಗೂ ನೋವುಕೊಟ್ಟಿದ್ದೇನೆ; ಅಂತ್ಯಕ್ರಿಯೆಗೆ ಸಿದ್ದರಾಮಯ್ಯ, ಯಶ್‌ ಬರಬೇಕೆಂದು ಬರೆದಿಟ್ಟು ಯುವಕ ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights