2000 ನೋಟಿನಲ್ಲಿ ಚಿಪ್ಪು; ವರದಿಗೆ ಮಾಹಿತಿ ಸಿಕ್ಕಿದ್ದು ಹೇಗೆ? ಮೂಲ ಬಿಚ್ಚಿಟ್ಟ ಪಬ್ಲಿಕ್‌ ಟಿವಿ ನಿರೂಪಕ?

ಬಿಜೆಪಿಯ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು, 500 ಮತ್ತು 1000 ರೂ. ಮುಖಬೆಲೆ ನೋಟ್‌ ಬ್ಯಾನ್ ಮಾಡಿ ಐದು ವರ್ಷ ತುಂಬಿದೆ. ಈ ವೇಳೆ ಬಿಡುಗಡೆಯಾದ 2000 ರೂ. ಮುಖಬೆಲೆ ನೋಟಿನಲ್ಲಿ ‘ಮೈಕ್ರೋ ನ್ಯಾನೋ’ ಚಿಪ್ ಇದ್ದು, ಅದನ್ನು ಎಲ್ಲಿ ಬಚ್ಚಿಟ್ಟರೂ ಉಪಗ್ರಹದ ಮೂಲಕ ಕಂಡು ಹಿಡಿಯಬಹುದು ಎಂಬ ಸುಳ್ಳು ಸುದ್ದಿಯನ್ನು ಕೆಲವು ರಾಷ್ಟ್ರೀಯ ವಾಹಿನಿ ಸಹಿತ ರಾಜ್ಯದ ‘ಪಬ್ಲಿಕ್ ಟಿವಿ’ ಕೂಡಾ ವರದಿ ಮಾಡಿತ್ತು.

2000 ರೂ. ನೋಟಿನಲ್ಲಿ ಚಿಪ್ ಇರುವ ವರದಿಯ ಬಗ್ಗೆ ಸ್ವತಃ ಆರ್‌ಬಿಐ ಸ್ಪಷ್ಟನೆ ನೀಡಿ ಈ ರೀತಿ ಯಾವುದೆ ಚಿಪ್‌ 2000 ರೂ ನೋಟಿನಲ್ಲಿ ಇಲ್ಲ ಎಂದು ಹೇಳಿತ್ತು. ಇದರ ನಂತರವು ಮಾಧ್ಯಮಗಳು ಚಿಪ್ ಇರುವುನ್ನೇ ವರದಿ ಮಾಡಿ ಜನರ ದಿಕ್ಕು ತಪ್ಪಿಸಿದ್ದವು.

ಕನ್ನಡದ ಸುದ್ದಿ ವಾಹಿನಿಯಾದ ‘ಪಬ್ಲಿಕ್ ಟಿವಿ’ ಕೂಡಾ ಈ ಸುಳ್ಳು ಸುದ್ದಿಯನ್ನು ವರದಿ ಮಾಡಿತ್ತು. ಅದರಲ್ಲೂ ಈ ಸುದ್ದಿಯನ್ನು ವಾಹಿನಿಯ ಮುಖ್ಯಸ್ಥ ಎಚ್‌.ಆರ್‌. ರಂಗನಾಥ್‌ ಅವರೇ ಮಾಡಿದ್ದರು. ಈ ವರದಿಯ ನಂತರ ಪ್ರತಿ ವರ್ಷ ನವೆಂಬರ್‌ ಎರಡನೆ ವಾರ ಈ ವಿಡಿಯೊ ಸಾಮಾಜಿಕ ಜಾಲತಾಣದಗಳಲ್ಲಿ ಹರಿದಾಡಿ ಪಬ್ಲಿಕ್ ಟಿವಿ ಮತ್ತು ಅದರ ಮುಖ್ಯಸ್ಥ ರಂಗನಾಥ್‌ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಆದರೆ ಈ ಬಾರಿ ಪಬ್ಲಿಕ್ ಟಿವಿಯ ನಿರೂಪಕ ‘ಅರುಣ್ ಸಿ ಬಡಿಗೇರ್‌’ ಅವರ ಹೆಸರಿನ ಟ್ವಿಟರ್‌ ಖಾತೆಯೊಂದರ ಟ್ವೀಟ್‌ ಭಾರಿ ಸದ್ದು ಮಾಡಿದೆ. ಅದರಲ್ಲಿ, ಐದು ವರ್ಷಗಳ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ 2000 ರೂ ಮುಖಬೆಲೆ ನೋಟಿನಲ್ಲಿನ ‘ಚಿಪ್‌’ ವಿಚಾರಗಳನ್ನು ಬರೆಯಲಾಗಿದೆ.

ಇದನ್ನೂ ಓದಿ: ತಬ್ಲೀಘಿ ವಿರುದ್ದ ದ್ವೇಷದ ಸುದ್ದಿ ಪ್ರಸಾರ; ಸುವರ್ಣ ನ್ಯೂಸ್‌ ಮತ್ತು ನ್ಯೂಸ್‌ 18 ಕನ್ನಡ ಚಾನೆಲ್‌ಗಳಿಗೆ 1.5 ಲಕ್ಷ ದಂಡ!

ನವೆಂಬರ್‌ 8 ರಂದು ಮಾಡಲಾಗಿರುವ ಟ್ವೀಟ್‌ನಲ್ಲಿ, “ಇಂದು ಡಿಮಾನಟೈಜ್ ದಿನ ನನ್ನ ಹಿರಿಯ ಸಹೋದ್ಯೋಗಿ ರಂಗಣ್ಣನವರ ಚಿಪ್ ವೀಡಿಯೋ ಬಗ್ಗೆ ವಿವರಣೆ ನೀಡಲು ಬಯಸುತ್ತೇನೆ. ವಾಸ್ತವವಾಗಿ ಚಿಪ್ ಹುಟ್ಟುಕೊಂಡಿದ್ದು ಒಂದು ರಾಜಕೀಯ ಪಕ್ಷದ ವಾಟ್ಸಪ್ ಗ್ರೂಪಲ್ಲಿ. ಅದರಲ್ಲಿ ಸಂಸದರು, ಹಿರಿಯ ಪತ್ರಕರ್ತ ಮಿತ್ರರು ಎಲ್ಲರೂ ಇದ್ದರು. ರಾಜೀವ್ ಚಂದ್ರಶೇಖರ್ ಮೊದಲು ಈ ವಿಷಯ ಪ್ರಸ್ತಾಪ ಮಾಡಿದರು ತದನಂತರ ವಿಶ್ವೇಶ್ವರಭಟ್‌ ಇದನ್ನು ಪುಷ್ಟಿಕರಿಸಿ ನ್ಯಾಷನಲ್ ಮೀಡಿಯಾ ಬಿತ್ತರಿಸಲಾಗಿದೆ ಎಂದರು.”

“ಮೊದಲು ಇದನ್ನು ಅಜಿತ್‌ ಹನುಮಕ್ಕನವರ್‌‌ ಹೇಳಲಿ ಎಂದು ಚರ್ಚೆ ಆಯಿತು. ಆದರೆ ಅವರ ಕಾರ್ಯಕ್ರಮ ಎಡಿಟಿಂಗ್ ಮುಗಿದಿತ್ತು. ಹಾಗಾಗಿ ರಂಗಣ್ಣನವರ ಹೆಗಲಿಗೆ ಈ ಜವಾಬ್ದಾರಿ ಕೊಡಲಾಯಿತು. ಆಡಳಿತ ಪಕ್ಷದ ನಂಬಲಾರ್ಹ ಮೂಲಗಳಿಂದ ಬಂದಿದ್ದರಿಂದ ರಂಗಣ್ಣ ಸುದ್ದಿ ಆಳಕ್ಕೆ ಹೋಗದೆ ಎಡವಟ್ಟು ಮಾಡಿಕೊಂಡರು!!” ಎಂದು ಟ್ವೀ‌ಟ್‌ ಮಾಡಲಾಗಿದೆ.

https://twitter.com/badiger_aruna/status/1457706538450235395?s=20

ಈ ಟ್ವೀಟ್‌ ಆಗುತ್ತಿದ್ದಂತೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ವೈರಲ್‌ ಆಗಿದೆ. ಹಲವಾರು ಜನರು ಪಬ್ಲಿಕ್‌ ಟಿವಿ ಮತ್ತು ಅರುಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿರುವ ಪಬ್ಲಿಕ್ ಟಿವಿ ನಿರೂಪಕ ಅರಣ್‌ ಸಿ ಬಡಿಗೇರ್‌, “ಪ್ರಸ್ತುತ ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಟ್ವೀಟ್‌ ನನ್ನದಲ್ಲ. ಅದರ ಬಗ್ಗೆ ದೂರು ನೀಡಿದ್ದೇನೆ. ಬೇರೆ ಯಾರೋ ನಕಲಿ ಖಾತೆಯಲ್ಲಿ ಇದನ್ನು ಮಾಡಿದ್ದಾರೆ” ಎಂದು ಹೇಳಿದ್ದಾರೆ.

‘Arun C badiger’ ಎಂಬ ಹೆಸರಿನಲ್ಲಿ ಒಟ್ಟು ಮೂರು ಟ್ವಿಟರ್‌ ಖಾತೆಗಳಿವೆ. ಅವುಗಳಲ್ಲಿ ‘@BadigerArun’ ಎಂಬ ಹೆಸರಿನ ಪ್ರೋಫಲ್ ಇರುವ, ‘‘ಧಾರವಾಡ ಹುಡ್ಗ.. ಅನ್ಸಿದ್ದನ್ನ ನೇರವಾಗಿ ಹೇಳೋನು” ಎಂಬ ಬಯೋ ಇರುವ ಖಾತೆ ತನ್ನದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅವರ ಅಸಲಿ ಟ್ವಿಟರ್‌ ಖಾತೆಯಲ್ಲೂ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: ಜೈಭೀಮ್ ಸಿನಿಮಾದಿಂದ ಮನೆಮಾತಾದ ನಿವೃತ್ತ ಹೈ. ನ್ಯಾಯಮೂರ್ತಿ ಚಂದ್ರು ಸಂದರ್ಶನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights