ಸಿಎಂ ಆಗಿ 2 ತಿಂಗಳಾದರೂ ಸಂಪುಟ ರಚನೆಗೆ ಕೇಂದ್ರದವರು ಬಿಡಲಿಲ್ಲ; ಹುಚ್ಚನಂತೆ ತಿರುಗಿದೆ: ಯಡಿಯೂರಪ್ಪ

ನಾನು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು 2 ತಿಂಗಳುಗಳು ಕಳೆದರೂ ಸಚಿವ ಸಂಪುಟ ರಚನೆ ಮಾಡಲು ಕೇಂದ್ರದವರು ಬಿಡಲಿಲ್ಲ. ಅಂದು ರಾಜ್ಯದಲ್ಲಿ ಎದುರಾದ ಪ್ರವಾಹದ ಸಂದರ್ಭದಲ್ಲಿ ಹುಚ್ಚನಂತೆ ಸುತ್ತಬೇಕಾಯಿತು ಎಂಧು ಸೋಮವಾರ ರಾಜೀನಾಮೆ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

2019ರಲ್ಲಿ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ, ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಮಾಡಲು ಸತಾಯಿಸಿತ್ತು. ಆ ಸಂದರ್ಭವನ್ನು ಬಿಎಸ್‌ವೈ ರಾಜೀನಾಮೆ ನೀಡುವುದಾಗಿ ಘೋಷಿಸುವ ವೇಳೆ ನೆನಪಿಸಿಕೊಂಡರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌‌ ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಯಡಿಯೂರಪ್ಪ ಅಧಿಕಾರಕ್ಕೆ ಏರಿದ್ದರು. ಈ ಸಮಯದಲ್ಲಿ ಉತ್ತರ ಕರ್ನಾಟಕದಾದ್ಯಂತ ಭಾರಿ ಪ್ರವಾಹ ಉಂಟಾಗಿತ್ತು. ಆದರೂ ಯಡಿಯೂರಪ್ಪ ತಮ್ಮ ಮಂತ್ರಿ ಮಂಡಲವನ್ನು ರಚಿಸಿರಲಿಲ್ಲ. ಇದು ರಾಜ್ಯದಾದ್ಯಂತ ಭಾರಿ ಆಕ್ರೋಶವನ್ನೂ ಹುಟ್ಟುಹಾಕಿತ್ತು.

ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆಯಿಂದ ಮನನೊಂದ ಅಭಿಮಾನಿ ಆತ್ಮಹತ್ಯೆ!

ಸರ್ಕಾರದ ಎರಡು ವರ್ಷದ ಸಾಧನೆಯ ಸಮಾರಂಭದಲ್ಲಿ ರಾಜೀನಾಮೆ ಘೋಷಿಸುತ್ತಾ ಭಾವುಕರಾಗಿ ಮಾತನಾಡಿದ ಯಡಿಯೂರಪ್ಪ, ‘‘ಎಲ್ಲಾ ಸಂದರ್ಭದಲ್ಲೂ ಅಗ್ನಿ ಪರಿಕ್ಷೆ ಎದುರಾಗಿತ್ತು. ನಾನು ಅಧಿಕಾರ ವಹಿಸಿಕೊಂಡಾಗ ಕೇಂದ್ರದವರು ಎರಡು ತಿಂಗಳು ಮಂತ್ರಿ ಮಂಡಲ ಮಾಡಲೇ ಬಿಡಲಿಲ್ಲ. ಪ್ರವಾಹ ಶುರುವಾಯಿತು, ಎಲ್ಲಾ ಕಡೆ ಹುಚ್ಚನಂತೆ ಸುತ್ತಬೇಕಾಯಿತು. ಅದರ ನಂತರ ಸಚಿವ ಸಂಪುಟ ರಚನೆಯಾಗಿದ್ದು. ಒಂದು ರೀತಿಯಲ್ಲಿ ಎಲ್ಲಾ ಸಂದರ್ಭದಲ್ಲೂ ಅಗ್ನಿ ಪರೀಕ್ಷೆ” ಎಂದು ಹೇಳಿದ್ದಾರೆ.

ಭಾಷಣದ ನಂತರ ರಾಜಭವನಕ್ಕೆ ತೆರಳಿದ ಬಿಎಸ್‌ವೈ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾಗಿ ಘೋಷಿಸಿದ್ದಾರೆ.

ಈ ನಡುವೆ ಯಡಿಯೂರಪ್ಪ ಅವರ ರಾಜೀನಾಮೆ ನೀಡುವಂತೆ ಮಾಡಿದ ಬಿಜೆಪಿ ಹೈಕಮಾಂಡ್ ವಿರುದ್ದ ಅವರ ಸ್ವಕ್ಷೇತ್ರವಾದ ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪ್ರಧಾನಿ ಮೋದಿಗೆ ಧಿಕ್ಕಾರ ಕೂಗಿದ್ದಾರೆ. ಶಿಕಾರಿಪುರ ನಗರದ ಅಂಗಡಿ ಮುಗ್ಗಟ್ಟುಗಳು ಬಂದ್ ಆಚರಿಸಿದ್ದು ತಮ್ಮ ನಾಯಕನ ವಿದಾಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಲ್ಕು ಬಾರಿ ರಾಜೀನಾಮೆ: ಪ್ರತಿ ಬಾರಿಯೂ ಬಿಎಸ್‌ವೈ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಲಿಲ್ಲ!;

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights