ದನ ಕಳ್ಳತನ: ಭಜರಂಗ ದಳದ ಮಾಜಿ ನಾಯಕನ ಬಂಧನ!

ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗ ದಳದ ಮಾಜಿ ಮುಖಂಡನೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಆರೋಪಿಯನ್ನು ಕಾರ್ಕಾಳದ ತೆಳ್ಳಾರು ನಿವಾಸಿ ಅನಿಲ್ ಪ್ರಭು(45) ಎಂದು ಗುರುತಿಸಲಾಗಿದ್ದು, ಈತ ಬಜರಂಗ ದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಆಗಿದ್ದ ಎಂದು ಪೊಲೀಸ್‌ ಹೇಳಿಕೆಯನ್ನು ಉಲ್ಲೇಖಿಸಿ ವಾರ್ತಾಭಾರತಿ ವರದಿ ಮಾಡಿದೆ.

ದನಗಳನ್ನು ಕಳ್ಳತನ ಮಾಡುವರಿಗೆ ಅಭಯ ನೀಡುತ್ತಿದ್ದ ಎಂಬ ಆರೋಪದಲ್ಲಿ ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕೆಲ ದಿನಗಳ ಹಿಂದೆ ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ವಾಹನ ಸವಾರನು ವಾಹನವನ್ನು ತೊರೆದು ಪರಾರಿಯಾಗಿದ್ದನು.

ಈ ವೇಳೆ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ದನದ ಮಾಂಸ ಪತ್ತೆಯಾಗಿತ್ತೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಾರ್ಕಾಳದ ಹುಡ್ಕೋ ಕಾಲನಿ ನಿವಾಸಿ ಮುಹಮ್ಮದ್ ಯಾಸೀನ್ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪೊಲೀಸ್ ವಿಚಾರಣೆಯ ವೇಳೆ ಯಾಸೀನ್, ದನಗಳನ್ನು ಕಳವುಗೈದು ಮಾಂಸ ಮಾಡಿ ಮಾರಾಟ ಮಾಡಲು ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಅನಿಲ್ ಪ್ರಭು ಆಶ್ವಾಸನೆ ನೀಡುತ್ತಿದ್ದ. ಅದಕ್ಕಾಗಿ ಹಣ ಪಡೆಯುತ್ತಿದ್ದ ಎಂದು ಒಪ್ಪಿಕೊಂಡಿದ್ದ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅನಿಲ್ ಪ್ರಭುವನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಇದನ್ನೂ ಓದಿ: ಕೊರೊನಾದಿಂದ ದೇಶದ ಆರ್ಥಿಕತೆಯೇ ಹಳ್ಳ ಹಿಡಿದರೂ ಅದಾನಿ ಆಸ್ತಿ ಹೆಚ್ಚಾಗಿದ್ದು ಹೇಗೆ ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights