7 ಕಿ.ಮೀ ಹೊತ್ತು ತಂದರೂ ವೈದ್ಯರಿಲ್ಲದೆ ಬದುಕುಳಿಯಲಿಲ್ಲ ತಾಯಿ, ಮಗು..!

ವೈದ್ಯರಿಲ್ಲದೇ ಚಿಕಿತ್ಸೆಗಾಗಿ ಏಳು ಕಿ.ಮೀ ಹೊತ್ತುಕೊಂಡು ಹೋದರೂ ತಾಯಿಯೊಂದಿಗೆ ನವಜಾತ ಶಿಶು ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನ ಗಿರಿಡಿಹ್ ಜಿಲ್ಲೆಯಲ್ಲಿ ನಡೆದಿದೆ.

ಹೌದು… ಸರಿಯಾಗಿ ರಸ್ತೆ ಇಲ್ಲದೆ, ವಾಹನ ಸಂಚಾರವಿಲ್ಲದೇ, ಜೋಳಿಗೆಯಲ್ಲಿ ಗರ್ಭಿಣಿ ಮಹಿಳೆಯನ್ನು ಹೊತ್ತು ಸುಮಾರು 7 ಕೀ.ಮೀ ದೂರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ 20 ವರ್ಷದ ಗರ್ಭಿಣಿ ಮಹಿಳೆ ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿದ್ದಾರೆ.

ಟಿಸ್ರಿಯ ಬರ್ದೌನಿ ಗ್ರಾಮದ ಲಕ್ಷ್ಮಿಬಥನ್ ಕಾಲೋನಿಯಲ್ಲಿ ಪತಿ ಸುನಿಲ್ ತುಡು ಅವರೊಂದಿಗೆ ವಾಸಿಸುತ್ತಿದ್ದ ಸುರ್ಜಾ ಮರಂಡಿ ಗುರುವಾರ ಬೆಳಿಗ್ಗೆ ಮಗುವಿಗೆ ಜನ್ಮ ನೀಡಿದರು. “ಸೂಲಗಿತ್ತಿ ಗುರುವಾರ ಬೆಳಿಗ್ಗೆ ಮಗುವನ್ನು ಹೆರಿಗೆ ಮಾಡಿಸಿದ್ದಳು, ಆದರೆ ಅವಳಿಗೆ ರಕ್ತಸ್ರಾವ ಮುಂದುವರೆದಿದೆ. ನಂತರ ಸಂಬಂಧಿಕರೆಲ್ಲಾ ಸೇರಿ ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ತಾಯಿ ಮಗು ಇಬ್ಬರು ಹಸುನೀಗಿದ್ದಾರೆ” ಎಂದು ಗವಾನ್ ಬಿಡಿಒ ಮಧು ಕುಮಾರಿ ಹೇಳಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ಮಹಿಳೆ ಆಸ್ಪತ್ರೆ ತಲುಪಿದಾಗ, ವೈದ್ಯರು ಆಕೆ ತೀರಿ ಹೋದ ಬಗ್ಗೆ ದೃಢಪಡಿಸಿದ್ದಾರೆ.

ಆದರೆ ಕುಟುಂಬಸ್ಥರ ಪ್ರಕಾರ ವೈದ್ಯರಿಲ್ಲದೇ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಆಸ್ಪತ್ರೆಗೆ ಆಕೆಯನ್ನು ಕರೆತಂದಾಗ ಯಾವುದೇ ವೈದ್ಯರಿರಲಿಲ್ಲ. ಇರೋ ಇಬ್ಬರು ವೈದ್ಯರಲ್ಲಿ ಒಬ್ಬರು ತರಬೇತಿಯಲ್ಲಿದ್ದರೆ ಇನ್ನೊಬ್ಬರು ಆಸ್ಪತ್ರೆಯಲ್ಲಿ ಇರಲೇ ಇಲ್ಲ ಎಂದು ದೂರಿದ್ದಾರೆ. ಮಹಿಳೆ ಮುಂಚಿತವಾಗಿಯೇ ಸಾವನ್ನಪ್ಪಿದ್ದಾಳೆಂದು ಜವಬ್ದಾರಿ ತೆಗೆದುಕೊಳ್ಳದೇ ಹೊರಟು ಹೋಗಿದ್ದಾರೆಂದು ಆರೋಪಿಸಿದ್ದಾರೆ.

ಟಿಸ್ರಿ ಬಿಡಿಒ ಸುನಿಲ್ ಪ್ರಕಾಶ್ ಅವರು ಸುರ್ಜಾ ಅವರ ಗ್ರಾಮದಲ್ಲಿ ಪಿಎಚ್‌ಸಿಯಂತಹ ಮೂಲಭೂತ ಸೌಲಭ್ಯಗಳಿಲ್ಲ ಆದರೆ “ನಾನು ಒಂದು ವರ್ಷದ ಹಿಂದೆಯೇ ರಸ್ತೆಯನ್ನು ಮಂಜೂರು ಮಾಡಿದ್ದೇನೆ” ಎಂದು ಹೇಳಿ ಜಾರಿಕೊಂಡಿದ್ದಾರೆ.

ಒಟ್ಟಿನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಯಾರೋ ಮಾಡುವ ತಪ್ಪಿಗೆ ಮಹಿಳೆ ಮತ್ತು ಇನ್ನೂ ಜಗತ್ತನ್ನೇ ನೋಡದ ಮಗು ಸಾವನ್ನಪ್ಪಿದ್ದು ದುರಾದೃಷ್ಟಕರ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights