ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿಯನ್ನು ಮೀರಿಸಲು ಸಾಧ್ಯವಿಲ್ಲ: ರಾಹುಲ್‌ಗಾಂಧಿ

ಬಿಹಾರದಲ್ಲಿ ಇಂದು ಮೊದಲ ಹಂತ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ತಯಾರಿ ಸಾಗಿದೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರದಲ್ಲಿ ಪ್ರಚಾರ ನಡೆಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ,  ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರದ ವಾಲ್ಮೀಕಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನೋಟು ಅಮಾನ್ಯೀಕರಣ ಮತ್ತು ಯೋಜನೆಯಿಲ್ಲದ ಲಾಕ್‌ಡೌನ್ ಸಣ್ಣ ವ್ಯಾಪಾರಿಗಳು, ಕಾರ್ಮಿಕರು ಮತ್ತು ರೈತರನ್ನು ಬೀದಿಗೆ ತಳ್ಳಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

’ಪ್ರಧಾನಿ ಮೋದಿ ಈಗ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭಾಷಣಗಳಲ್ಲಿ ಹೇಳುತ್ತಿಲ್ಲ. ಅವರು ಸುಳ್ಳು ಹೇಳಿದ್ದಾರೆಂದು ಜನರಿಗೆ ತಿಳಿದಿದೆ. ಈಗ ಪ್ರಧಾನಿ ಇಲ್ಲಿಗೆ ಬಂದು ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಹೇಳಿದರೆ, ಜನರೇ ಅವರನ್ನು ಓಡಿಸುತ್ತಾರೆ’ ಎಂದಿದ್ದಾರೆ.

‘ಕಾಂಗ್ರೆಸ್ ಪಕ್ಷವು ಈವರೆಗೂ ದೇಶಕ್ಕೆ ನಿರ್ದೇಶನ ನೀಡುತ್ತ ಬಂದಿದೆ. ನಾವು ನರೇಗಾ ಯೋಜನೆ ತಂದಿದ್ದೇವೆ. ಸಾಲ ಮನ್ನಾ ಮಾಡಿದ್ದೇವೆ. ದೇಶ ನಡೆಸುವುದು, ರೈತರೊಂದಿಗೆ ನಿಲ್ಲುವುದು ಮತ್ತು ಉದ್ಯೋಗ ಸೃಷ್ಟಿಸುವುದು ನಮಗೆ ತಿಳಿದಿದೆ. ಆದರೆ, ಸುಳ್ಳು ಹೇಳುವ ಒಂದು ವಿಷಯ ನಮಗೆ ತಿಳಿದಿಲ್ಲ. ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ’ ಎಂದು ರಾಹುಲ್ ಗಾಂಧಿ‌ ವಾಗ್ದಾಳಿ ನಡೆಸಿದ್ದಾರೆ.

‘ಸರ್ಕಾರವು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಪರವಾಗಿದೆ. ನೋಟು ಅಮಾನ್ಯೀಕರಣ ಮತ್ತು ಲಾಕ್‌ಡೌನ್‌ಗಳ ಉದ್ದೇಶ ಎರಡು ಒಂದೇ ಆಗಿತ್ತು. ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರನ್ನು ನಾಶಪಡಿಸುವ ಗುರಿಯನ್ನು ಹೊಂದಿದ್ದವು’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ ನಂತರ ನಿತೀಶ್‌ ಕುಮಾರ್ ಬಿಜೆಪಿ ಸಖ್ಯ ತೊರೆಯಲಿದ್ದಾರೆ: ಚಿರಾಗ್‌ ಪಾಸ್ವಾನ್‌

“ಅವರಿಗೆ ಬಿಹಾರದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಇದು ವಾಸ್ತವ. ರಾಜ್ಯದ ರೈತರು ಮತ್ತು ಯುವಕರೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಸಮಸ್ಯೆ ಇರುವುದು ನಿಮ್ಮ ಸಿಎಂ ನಿತೀಶ್ ಕುಮಾರ್ ಮತ್ತು ಪಿಎಂ ಅವರೊಂದಿಗೆ. ಅವರುಗಳು ನಿಮಗೆ ಸತ್ಯವನ್ನು ಹೇಳುವುದಿಲ್ಲ. ಪ್ರಧಾನಿ ಮೋದಿ ಪ್ರತಿ ವರ್ಷ 2 ಕೋಟಿ ಉದ್ಯೋಗಗಳು ನೀಡುವ ಭರವಸೆ ನೀಡಿದರು” ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಲಕ್ಷಾಂತರ ಬಿಹಾರ ಕಾರ್ಮಿಕರು ರಾಜ್ಯಕ್ಕೆ ಮರಳಿದ್ದನ್ನು ನೀವು ನೋಡಿದ್ದೀರಿ. ಇದು ಚುನಾವಣಾ ಸಮಯ, ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ ನೀವು ಅದನ್ನು ಮರೆಯಬಾರದು. ದಸರಾದಲ್ಲಿ ರೈತರು ಮತ್ತು ಕಾರ್ಮಿಕರು ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸಿ ಕೋಪ ಹೊರಹಾಕಿದ್ದಾರೆ. ದೇಶದ ರೈತರು ಮತ್ತು ಯುವಕರು ಪ್ರಧಾನಿಯವರ ವಿರುದ್ಧ ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ “ಮೋದಿಯವರೇ, ಬಿಹಾರದ ಜನರಿಗೆ ಸುಳ್ಳು ಹೇಳಬೇಡಿ. ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ? ಕಳೆದ ಚುನಾವಣೆಯಲ್ಲಿ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದೀರಿ. ಆದರೆ ಯಾರಿಗೂ ಉದ್ಯೋಗ ಸಿಗಲಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.


ಇದನ್ನೂ ಓದಿ: ಭ್ರಷ್ಟಾಚಾರ: ಉತ್ತರಾಖಂಡ್‌ ಬಿಜೆಪಿ ಸಿಎಂ ತ್ರಿವೇಂದ್ರ ಸಿಂಗ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights