ಕೆನಡಾ ಸಂಸತ್ ಚುನಾವಣೆ: ಭಾರತೀಯ ಮೂಲದ 17 ಜನರಿಗೆ ಭರ್ಜರಿ ಗೆಲುವು!

ಕೆನಡಾದಲ್ಲಿ ಲಿಬರಲ್ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೇರಿದ್ದು, ಜೆಸ್ಟಿನ್ ಟ್ರುಡೇವ್ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಟ್ರುಡೇವ್ ನೇತೃತ್ವದ ಸಂಸತ್ತಿಗೆ ಎನ್‌ಡಿಪಿ ಮುಖಂಡ ಜಗ್ಮೀತ್ ಸಿಂಗ್ ಮತ್ತು ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಸೇರಿದಂತೆ 17 ಮಂದಿ ಇಂಡೊ-ಕೆನಡಿಯನ್ ಪ್ರಜೆಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ 45% ಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

ಲಿಬರಲ್ ಪಕ್ಷವು 156 ಸ್ಥಾನಗಳನ್ನು ಗೆದ್ದಿದೆ. ಆದರೆ, ಈ ಸಂಖ್ಯೆಯಿಂದಾಗಿ ಪಕ್ಷಕ್ಕೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಸಾಧಿಸಲು 14 ಸ್ಥಾನಗಳ ಕೊರತೆ ಎದುರಾಗಿದೆ. ಪ್ರಮುಖ ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಾರ್ಟಿ 122 ಸ್ಥಾನ ಗೆದ್ದಿದೆ.

ವಿಸರ್ಜಿತ ಸಂಪುಟದಲ್ಲಿದ್ದ ಹರ್ಜಿತ್ ಸಜ್ಜನ್, ಅನಿತಾ ಆನಂದ್ ಮತ್ತು ಬರ್ದೀಶ್ ಛಗ್ಗೇರ್ ಹೀಗೆ ಮೂವರು ಮುಖಂಡರೂ ಗೆಲುವು ಸಾಧಿಸಿದ್ದಾರೆ. ಅಂತೆಯೇ ನ್ಯೂ ಡೆಮಾಕ್ರಟಿಕ್ ಪಾರ್ಟಿ ಮುಖಂಡ ಜಗ್ಮೀತ್ ಸಿಂಗ್ ಬುರ್ನಾಬಿ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ರಕ್ಷಣಾ ಸಚಿವ ಹರ್ಜೀತ್ ಸಜ್ಜನ್ ವ್ಯಾಂಕೊವರ್ ದಕ್ಷಿಣ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಕೆನಡಾ ಪಡೆಗಳ ದುರ್ನಡತೆ ಮತ್ತು ಸರ್ಕಾರ ಅಫ್ಘಾನಿಸ್ತಾನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯ ಬಗ್ಗೆ ವ್ಯಾಪಕ ಟೀಕೆಗಳ ಹೊರತಾಗಿಯೂ ಸಜ್ಜನ್ ಕಳೆದ ಬಾರಿಗಿಂತ ಹೆಚ್ಚು ಮತ ಪಡೆದು ಮರು ಆಯ್ಕೆಯಾಗಿದ್ದಾರೆ.

ಲಿಬರಲ್ ಪಕ್ಷದ ಅನಿತಾ ಆನಂದ್ ಅವರು ಓಕ್‌ವಿಲ್ಲೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಲಿಬರಲ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಛಗ್ಗೇರ್ ಅವರೂ ಕೂಡ ವಾಟರ್‌ಲೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಬ್ರಾಂಪ್ಟನ್ ಪಶ್ಚಿಮ ಕ್ಷೇತ್ರದಿಂದ ಕಮಲ್ ಖೇರಾ, ಬ್ರಾಂಪ್ಟನ್ ಉತ್ತರ ಕ್ಷೇತ್ರದಿಂದ ರೂಬಿ ಸಹೋತಾ, ಬ್ರಾಂಪ್ಟನ್ ದಕ್ಷಿಣ ಕ್ಷೇತ್ರದಿಂದ ಸೋನಿಯಾ ಸಿಧು, ಬ್ರಾಂಪ್ಟನ್ ಪೂರ್ವ ಕ್ಷೇತ್ರದಿಂದ ಮಣೀಂದರ್ ಸಿಧು ಮತ್ತು ಸರ್ರೆ ನ್ಯೂಟನ್ ಕ್ಷೇತ್ರದಿಂದ ಸುಖ್ ಧಲಿವಾಲ್ ಲಿಬರಲ್ ಪಾರ್ಟಿಯಿಂದ ಸ್ಪರ್ಧಿಸಿ ಗೆದ್ದಿರುವ ಭಾರತೀಯ ಮೂಲದ ಅಭ್ಯರ್ಥಿಗಳಾಗಿದ್ದಾರೆ.

ಇವರು ಮಾತ್ರವಲ್ಲದೆ, ಭಾರತೀಯ ಮೂಲದವರೇ ಆದ ಜಾರ್ಜ್ ಚಹಾಲ್, ಅರೀಫ್ ವಿರಾನಿ, ರಣದೀಪ್ ಸರಾಯ್, ಅಂಜು ದಿಲ್ಲಾನ್, ಚಂದ್ರ ಆರ್ಯ ಮತ್ತು ಇಕ್ವೀಂದರ್ ಗಹೀರ್ ಅವರೂ ಕೂಡ ಕೆನಡಾ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ವಿರುದ್ದದ KCOCA ರದ್ದತಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights