ಬಂಗಾಳದಲ್ಲಿ ಹೆಚ್ಚಿದ್ಯಾ BJP ಪ್ರಾಬಲ್ಯ; ಲಾಭ ಗಳಿಸುತ್ತಾ ‘ನೌ ಆರ್ ನೆವರ್’ ಘೋಷಣೆ!

ಪಶ್ಚಿಮ ಬಂಗಾಳ ಚುನಾವಣಾ ಕಣವು ಟಿಎಂಸಿ ವರ್ಸಸ್‌ ಬಿಜೆಪಿ ಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದರೂ, ಅಲ್ಲಿ, ತ್ರಿಕೋನ ಸ್ಪರ್ಧೆ ಏರ್ಪಡುತ್ತಿದೆ. ಕೊಲ್ಕತ್ತಾದಲ್ಲಿ ಭಾನುವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಮಮತಾ ಅವರು, ಕೇಂದ್ರ ಸರ್ಕಾರದ ಖಾಸಗೀಕರಣದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಗ್ದಾಳಿಯ ನಡುವೆ, ಎಡಪಂಥೀಯ, ಕಾಂಗ್ರೆಸ್ ಮತ್ತು ಮುಸ್ಲಿಂ ಧರ್ಮಗುರು ಅಬ್ಬಾಸ್ ಸಿದ್ದಿಕಿ ಅವರ ನೇತೃತ್ವದಲ್ಲಿ ಹೊಸದಾಗಿ ರೂಪುಗೊಂಡ ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಎಂಬ ಮೈತ್ರಿಕೂಟವು ಅದೇ ಕೊಲ್ಕತ್ತಾದಲ್ಲಿ ಬೃಹತ್‌ ಸಮಾವೇಶವನ್ನು ನಡೆಸಿದೆ. ಈ ಮೈತ್ರಿಕೂಟವು ರಾಜ್ಯದಲ್ಲಿ ಟಿಎಂಸಿಯ ಆಡಳಿತ ದುರುಪಯೋಗ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಾತ್ಯಾತೀತತೆಯ ಪ್ರತೀಕವಾಗಿ ಬೃಹತ್‌ ಜನಸಂಖ್ಯೆ ಈ ರ್ಯಾಲಿಯಲ್ಲಿ ಸೇರಿದೆ ಎಂದು ಹೇಳಿವೆ.

ಇದು ಬಂಗಾಳದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ತೋರಿಸುತ್ತಿದೆ. ಅದರೆ, ಮೂರನೇ ರಂಗವು(ಎಡರಂಗ) ಅಂತಹ ಪ್ರಭಾವವನ್ನು ಉಳಿಸಿಕೊಂಡಿಲ್ಲ ಎಂಬುದೂ ಸ್ಪಷ್ಟವಾಗಿದೆ. 2014 ರಲ್ಲಿ ದೇಶವನ್ನು ಸುತ್ತುವರಿದ ಮೋದಿ ಎಂಬ ಸುನಾಮಿಯು ಬಂಗಾಳವನ್ನು ಅವರಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಬಿಜೆಪಿ 42 ಸ್ಥಾನಗಳ ಪೈಕಿ ಎರಡನ್ನು ಮಾತ್ರ ಗೆದ್ದಿದೆ. ಆದರೆ, ಅದೇ ಚುನಾವಣೆಯಲ್ಲಿ ಅದು 16% ಮತಪಾಲನ್ನು ಪಡೆದುಕೊಂಡಿದೆ (2011 ವಿಧಾನಸಭಾ ಚುನಾವಣೆಯಲ್ಲಿ ಕೇವಲ 4.1% ಓಟ್‌ಶೇರ್‌ ಹೊಂದಿತ್ತು). ಆದರೆ, 2014ರಲ್ಲಿ ಪಡೆದುಕೊಂಡಿದ್ದ ಮತಗಳ ಪಾಲನ್ನು ಅದು ಹಾಗೆಯೇ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪಾಲು 10.1%ಗೆ ಕುಸಿದಿತ್ತು.

ಬ್ಯಾನರ್ಜಿ ಅವರು ತಮ್ಮ ಹೋರಾಟದ ಹಾದಿಯಲ್ಲಿ ಮುಂದುವರೆದಿದ್ದಾರೆ. ಮೋದಿಯವರನ್ನು ಮೊದಲ ಅವಧಿಯಲ್ಲಿ ತಿರಸ್ಕರಿಸಿದ್ದ ಬಂಗಾಳ, ಎರಡನೇ ಅವಧಿಯಲ್ಲಿ ಅವರತ್ತ ವಾಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ ಫಲಿತಾಂಶವು ಬೆರಗಾಗುವಂತೆ ಮಾಡಿತ್ತು. ಬಿಜೆಪಿಯ ಮತ ಪಾಲು 41% ಕ್ಕೆ ಏರಿತು ಮತ್ತು ಅದು 18 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ರಾಜ್ಯವನ್ನು ಪ್ರತಿನಿಧಿಸುವ ಸಂಸತ್ತಿನ ಬಲದ ಅರ್ಧದಷ್ಟು ಪಾಲಿಗೆ ಹತ್ತಿರದಲ್ಲಿದೆ. ಆದರೂ, ಟಿಎಂಸಿ ತನ್ನದೇ ಆದ ಮತ ಪಾಲನ್ನು ಹೆಚ್ಚಿಸಿಕೊಂಡಿದೆ. 2014ರಲ್ಲಿ 40% ಓಟ್‌ಶೇರ್‌ ಪಡೆದಿದ್ದ ಟಿಎಂಸಿ, 2019ರಲ್ಲಿ 43% ಶೇರ್‌ ಪಡೆದುಕೊಂಡಿದೆ. ಹೀಗಾಗಿ ಬಂಗಾಳದಲ್ಲಿ ಬಿಜೆಪಿ ಲಾಭ ಪಡೆದದ್ದು, ಎಡ ಮತ್ತು ಕಾಂಗ್ರೆಸ್ಸಿನ ಕುಸಿತದಿಂದ ಎಂದು ತರ್ಕಮಾಡಲಾಗಿದೆ.

Read Also: ಬಂಗಾಳ ಚುನಾವಣೆ: ಕಾಂಗ್ರೆಸ್‌-ಸಿಪಿಎಂ ಮೈತ್ರಿ; BJP-TMCಗಳನ್ನು ಮೀರಿಸಿ ಅಧಿಕಾರ ಹಿಡಿಯುತ್ತಾ ಎಡರಂಗ!

ಈ ಹಿಂದೆ, ಟಿಎಂಸಿ ವಿರೋಧಿ ಮತಗಳ ಬಹುಪಾಲು ಎಡರಂಗ ಮತ್ತು ಕಾಂಗ್ರೆಸ್‌ಗೆ ಹೋಗಿತ್ತು. ನಂತರದಲ್ಲಿ ‌ಅವರ ಮತಬ್ಯಾಂಕು ಸಾಮೂಹಿಕವಾಗಿ ಬಿಜೆಪಿಗೆ ಬದಲಾಗಿದೆ ಎಂಬುದು ನಿಜ. ಆದರೆ, ಮುಸ್ಲಿಮೇತರ ಸಬಾಲ್ಟರ್ನ್ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು, ವಿಶೇಷವಾಗಿ ನೈರುತ್ಯ ಬಂಗಾಳದವರು ಬಿಜೆಪಿ ಎಡೆಗೆ ಹೋಗಿದ್ದಾರೆ ಎಂಬುದೂ ಒಂದು ಹಂತಕ್ಕೆ ಸ್ಪಷ್ಟವಾಗಿತ್ತು. ಈ ಬದಲಾವಣೆಗೆ ಎರಡು ಅಂಶಗಳು ಕಾರಣವಾಗಿವೆ. ಮೊದಲನೆಯದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮಾಡಿದ ಭಾರೀ ಪ್ರಮಾಣದ ಗ್ರೌಂಡ್‌ವರ್ಕ್‌. ಎರಡನೆಯದು, ಆ ಪ್ರದೇಶಗಳಲ್ಲಿ ಟಿಎಂಸಿ ಮೇಲಿನ ಅಸಮಾಧಾನ.

ಇದೆಲ್ಲದರ ನಡುವೆ, ಬಂಗಾಳದ ಉಸ್ತುವಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಟಿಎಂಸಿ ಒಳಗಿನ ಭಿನ್ನಾಭಿಪ್ರಾಯಗಳ ಲಾಭವನ್ನು ಪಡೆಯಲು ಮುಂದಾದರು. ಅವರು ಸುವೆಂಧು ಅಧಿಕಾರಿ ಮತ್ತು ಹಲವರನ್ನು ಪಕ್ಷಕ್ಕೆ ಸೆಳೆದುಕೊಂಡರು. ಜೊತೆಗೆ ರಾಜೀಬ್ ಬ್ಯಾನರ್ಜಿಯಂತಹ ಇತರ ನಾಯಕರು ಪೂರ್ವ ಮಿಡ್ನಾಪೋರ್ ಮತ್ತು ಹೌರಾದಲ್ಲಿ ಬಿಜೆಪಿಯ ನೆಲೆಯನ್ನು ಬಲಪಡಿಸಿದ್ದಾರೆ. ಆದರೆ ಜನಸಂಖ್ಯಾ ಸಂಯೋಜನೆಯಿಂದಾಗಿ ದಕ್ಷಿಣ ಬಂಗಾಳವು ಬಿಜೆಪಿಗೆ ಇನ್ನೂ ಸವಾಲಾಗಿ ಉಳಿದಿದೆ.

24 ಪರಗಣಗಳ (ಉತ್ತರ ಮತ್ತು ದಕ್ಷಿಣ) ಜಿಲ್ಲೆಗಳು, ಮತ್ತು ಬಾಂಗ್ಲಾದೇಶದ ಗಡಿ ಪ್ರದೇಶಗಳು, ಮಾಲ್ಡಾ ಮತ್ತು ದಕ್ಷಿಣ ದಿನಾಜ್‌ಪುರಕ್ಕೆ ಹೋಗುವ ಪ್ರದೇಶಗಳು ಟಿಎಂಸಿಯ ಹಿಡಿತದಲ್ಲಿವೆ.

Read Also: ಬಂಗಾಳ ಚುನಾವಣಾ ಸಮೀಕ್ಷೆ: BJP-TMC-ಎಡರಂಗ ತ್ರಿಕೋನ ಸ್ಪರ್ಧೆಯಲ್ಲಿ BJPಗಿಲ್ಲ ಅಧಿಕಾರ!

ತೃಣಮೂಲ ಕಾಂಗ್ರೆಸ್‌ ವಿರುದ್ಧ ಹೊಸ ಜಾತ್ಯತೀತ ಮುಂಭಾಗ (ಎಡ-ಕಾಂಗ್ರೆಸ್-ಐಎಸ್‌ಎಫ್) ಸ್ಕೋರ್ ಮಾಡಲು ಆಶಿಸುತ್ತಿರುವ ಭೌಗೋಳಿ ಪ್ರದೇಶವೂ ಸಹ ಇವು. ಆದರೆ ಆಂತರಿಕ ವಿರೋಧಾಭಾಸಗಳಲ್ಲಿ ಸಿಲುಕಿರುವ ಇದು ಯಾವುದೇ ಮಹತ್ವದ ಪ್ರಭಾವ ಬೀರಲು ಅಸಂಭವವಾಗಿದೆ. ಈ ಭಾಗಗಳಲ್ಲಿ ಟಿಎಂಸಿಯ ಭೌತಿಕ ಹಿಡಿತವು ಪ್ರಬಲವಾಗಿದೆ. ಇದು ಪ್ರಬಲ ಸಮುದಾಯದಲ್ಲಿ ದೃಢವಾದ ನೆಲೆಯನ್ನು ಹೊಂದಿದೆ. ಇಲ್ಲಿ ಎಡರಂಗ ಅಥವಾ ಬಿಜೆಪಿ ತನ್ನ ಆಟವನ್ನು ಆಡಲು ಸಾಧ್ಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬಂಗಾಳದಲ್ಲಿ ಬ್ಯಾನರ್ಜಿ ಅವರು ತನ್ನದೇ ನೆಲೆಯ ಪ್ರಾಬಲ್ಯವನ್ನು ಹೊಂದಿದ್ದಾರೆ. ಇದು ಭಾರತದ ಇತರ ಭಾಗಗಳಲ್ಲಿ ಮೋದಿ ಅವರು ತಮ್ಮ ಅಲೆ ಸೃಷ್ಟಿಸಿಕೊಂಡಂತೆ ಆನಂದಿಸಲು ಸಾಧ್ಯವಿಲ್ಲ. ಆಕೆಗೆ “ಬಾಂಗ್ಲರ್ ಮೇಯ್” (ಹೊರಗಿನವರು)ರ ಅಗತ್ಯವಿಲ್ಲ. ಆದರೆ, ಹಲವಾರು ಟಿಎಂಸಿ ನಾಯಕರ ಪಕ್ಷಾಂತರವು ಅವರನ್ನು ಕಾಡಬಹುದು.

ರಾಜ್ಯ ಸರ್ಕಾರಗಳು ದೆಹಲಿಯೊಂದಿಗೆ ಸತತ 50 ವರ್ಷಗಳಿಂದ ನಿರಂತರವಾಗಿ ಜಗಳವಾಡುತ್ತಿವೆ. ಇದರಿಂದಾಗಿ, ಬಂಗಾಳವು ಅಭಿವೃದ್ಧಿಯ ಹಳಿ ತಪ್ಪಿಸಿಕೊಂಡಿದೆ ಎಂಬ ವ್ಯಾಪಕ ಭಾವನೆ ಇದೆ. ಆದ್ದರಿಂದ, ಬಂಗಾಳದ ಮತದಾರರು ಬಿಜೆಪಿಯ “ಡಬಲ್ ಎಂಜಿನ್ ಸರ್ಕಾರ್”ದ ಭರವಸೆಯನ್ನು ಇಷ್ಟಪಡಬಹುದು. ಇದನ್ನು ಅಲೆಯ ಚುನಾವಣೆಯನ್ನಾಗಿ ಪರಿವರ್ತಿಸಬಹುದು. 2000 ರ ದಶಕದಲ್ಲಿ ಬ್ಯಾನರ್ಜಿ ಅವರ “ಇಬರ್ ಅಥವಾ ನೆವರ್” ಕರೆಯಂತೆ, ಬಿಜೆಪಿ ಈ ಚುನಾವಣೆಯಲ್ಲಿ  “ಈಗ ಅಥವಾ ಎಂದಿಗೂ ಇಲ್ಲ” (now or never) ಘೋಷಣೆಯನ್ನು ಆಧರಿಸಿದೆ. ಆದಾಗ್ಯೂ, ಎಡ ಮತ್ತು ಕಾಂಗ್ರೆಸ್‌ಗೆ ಎಂದಿಗೂ-ಎಂದೆಂದಿಗೂ ಘೋಷಣೆಗಳು ಕಾಣಿಸುತ್ತಿಲ್ಲ.

ಮೂಲ: ಹಿಂದೂಸ್ಥಾನ್ ಟೈಮ್ಸ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ


Read Also: ಭಾರತದ ಹೆಸರು ಬದಲಿಸಿ; ದೇಶಕ್ಕೆ ಮೋದಿ ಹೆಸರಿಡುವ ದಿನ ದೂರವಿಲ್ಲ: ಮಮತಾ ಬ್ಯಾನರ್ಜಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights