Cabinet : ಯಡಿಯೂರಪ್ಪ ಸಂಪುಟ ಸೇರಲು ತೀವ್ರವಾಯ್ತು ಲಾಬಿ, ರೇಸ್‌ನಲ್ಲಿ ಕತ್ತಿ, ಲಿಂಬಾವಳಿ

ಸಚಿವ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿರುವ ಬೆನ್ನಲ್ಲಿಯೇ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಬಿಜೆಪಿಯಲ್ಲಿ ಲಾಬಿ ಜೋರಾಗಿದೆ. ಇದೇ ವೇಳೆ ಸಂಪುಟ ರಚನೆ ವೇಳೆ ಮಂತ್ರಿ ಸ್ಥಾನ ವಂಚಿತರಾಗಿದ್ದ ಅರವಿಂದ ಲಿಂಬಾವಳಿ ಹಾಗೂ ಉಮೇಶ್ ಕತ್ತಿ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.

ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಅನರ್ಹ ಶಾಸಕರಿಗೆ ಮಂತ್ರಿಭಾಗ್ಯ ಕರುಣಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಅಲ್ಲದೇ ರಾಣೆಬೆನ್ನೂರು ಕ್ಷೇತ್ರ ತ್ಯಾಗ ಮಾಡಿದ ಶಂಕರ್ ಅವರನ್ನೂ ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸದ್ಯ ಸಂಪುಟದಲ್ಲಿ 16 ಸ್ಥಾನ ಖಾಲಿ ಇದ್ದು ಎಲ್ಲವನ್ನೂ ಏಕಕಾಲಕ್ಕೆ ತುಂಬುವ ಸಾಧ್ಯತೆ ಇಲ್ಲ. ಕೇವಲ ಅನರ್ಹರಿಗಷ್ಟೇ ಮಣೆ ಹಾಕಿದರೆ ಪಕ್ಷನಿಷ್ಠ ನಾಯಕರಲ್ಲಿ ಅಸಮಾಧಾನ ಭುಗಿಲೇಳುವುದು ಸಹಜ. ಈ ಹಿನ್ನೆಲೆಯಲ್ಲಿ ಕೆಲವು ಹಿರಿಯ ನಾಯಕರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಉಪಚುನಾವಣೆಯ ಉಸ್ತುವಾರಿ ವಹಿಸಿದ್ದ ಅರವಿಂದ ಲಿಂಬಾವಳಿ ಹಾಗೂ ಉಮೇಶ್ ಕತ್ತಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು ಇವರ ಜೊತೆಗೆ ಬಸನಗೌಡ ಯತ್ನಾಳ್ ಸಹ ಟವೆಲ್ ಹಾಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಅಂತಿಮವಾಗಿ ಹೈಕಮಾಂಡ್ ಯಾರಿಗೆ ಓಕೆ ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಮಧ್ಯೆ ಸೋಮವಾರ ಸಂಪುಟ ವಿಸ್ತರಣೆ ಆಗುವುದು ಕಷ್ಟ. ಅಮಿತ್ ಶಾ ಜಾರ್ಖಂಡ್‍ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುವ ಕಾರಣ ಸ್ವಲ್ಪ ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಖುದ್ದು ಯಡಿಯೂರಪ್ಪನವರೇ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights