ಕೇಂದ್ರದ ಕಟ್ಟಪ್ಪಣೆಗೆ ತಲೆಬಾಗಿ ಆರೋಗ್ಯ ಖಾತೆ ಕಿತ್ತುಕೊಂಡ ಬಿಎಸ್‌ವೈ: ರಾಜೀನಾಮೆ ಕೊಡ್ತಾರಾ ಶ್ರೀರಾಮುಲು?

ದಿಢೀರೆಂದು ತಮ್ಮ ಖಾತೆ ಬದಲಾವಣೆ ಮಾಡಿರುವ ಸಿಎಂ ಕ್ರಮದ ಬಗ್ಗೆ ಹಾಲಿ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಕೇಂದ್ರದ ವರಿಷ್ಠರ ಸೂಚನೆ ಮೇರೆಗೆ ಖಾತೆ ಮರು ಹಂಚಿಕೆ ಮಾಡಬೇಕಾದ ಅನಿವಾರ್‍ಯತೆಯಲ್ಲಿದ್ದ ಸಿಎಂ ಯಡಿಯೂರಪ್ಪ ಅವರಿಗೆ ರಾಮುಲು ಮುನಿಸು ಮತ್ತೊಂದು ತಲೆನೊವಾಗಿ ಪರಿಣಮಿಸಿದೆ.

ಕೊರೊನಾ ಉಲ್ಬಣದ ಸಂದರ್ಭದಲ್ಲಿ ಖಾತೆ ಬದಲಾವಣೆ ತಮ್ಮ ಕಾರ್‍ಯ ನಿರ್ವಹಣೆಯ ಬಗ್ಗೆ ತಪ್ಪು ಸಂದೇಶ ರವಾನಿಸುತ್ತದೆ. ಬದಲಾವಣೆ ಮಾಡಲೇಬೇಕೆಂದಿದ್ದರೇ ಕೊರೊನಾ ಕಳೆದ ಮೇಲೆ ಮಾಡಿ ಎಂದು ಶ್ರೀರಾಮುಲು ಸಿಎಂಗೆ ಮನವಿ ಮಾಡಿದ್ದರು. ಆದರೆ ಕೇಂದ್ರ ಸೂಚನೆಯ ಮುಂದೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಸಿಎಂ ಖಾತೆ ಬದಲಾವಣೆ ಮಾಡಿದ್ದು ರಾಮುಲು ಅವರ ಬೇಸರವನ್ನು ಇಮ್ಮಡಿಗೊಳಿಸಿದೆ.

ತಮ್ಮ ಬೇಸರವನ್ನು ಜಾಹೀರು ಮಾಡುವ ಸಲುವಾಗಿಯೇ ಅವರು ಸರಕಾರಿ ವಾಹನವನ್ನು ಬಳಸದೇ ಖಾಸಗಿ ಕಾರನ್ನು ಬಳಸುವ ಮೂಲಕ ಮುಖ್ಯಮಂತ್ರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಖಾತೆ ಬದಲಾವಣೆಗೆ ಇದ್ದ ಪರಿಸ್ಥಿತಿಯ ಬಗ್ಗೆ ಸಿಎಂ ಅವರು ರಾಮುಲುಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದೂ ಮೂಲಗಳು ಹೇಳುತ್ತಿವೆ.

ಏನೇ ಆದರೂ ಸಿಎಂ ಅವರ ಈ ನಿರ್ಧಾರದಿಂದ ರಾಮುಲು ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದು, ರಾಜೀನಾಮೆಗೆ ಮುಂದಾದರೂ ಆಶ್ಚರ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಶ್ರೀರಾಮುಲು ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿ ಕಳಚಿ ಸಮಾಜ ಕಲ್ಯಾಣದ ನೊಗ ಹೊರಲು ಅಧೀಕೃತ ಸುಚನೆ ಹೊರಡಿಸಲಾಗಿದೆ. ಅಂತೆಯೇ ಸುಧಾಕರ್‍ ವೈದ್ಯಕೀಯ ಶಿಕ್ಷಣದ ಜೊತೆ ಆರೋಗ್ಯವನ್ನು ನೋಡಿಕೊಳ್ಳಲಿದ್ದಾರೆ.

ಆರೋಗ್ಯ ಖಾತೆಯ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವಂತೆ ಮುಖ್ಯಮಂತ್ರಿಗೆ ಕೇಂದ್ರದಿಂದ ಸ್ಪಷ್ಟವಾದ ಸಂದೇಶ ರವಾನೆಯಾಗಿದೆ ಎಂಬ ಮಾತು ಹರಿದಾಡುತ್ತಿದೆ. ಅಲ್ಲದೇ ಪ್ರಧಾನಿ ಕರೆದ ವಿಡಿಯೋ ಸಭೆಗಳಲ್ಲಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸುತ್ತಿದ್ದ, ಸ್ವತಃ ವೈದ್ಯರೂ ಆಗಿರುವ ಸುಧಾಕರ ಅವರಿಗೇ ಹೊಣೆಗಾರಿಕೆ ನೀಡುವಂತೆಯೂ ಕೇಂದ್ರದ ನಾಯಕರು ಸೂಚಿಸಿದ್ದರು ಎನ್ನಲಾಗಿದೆ.

ಕೇಂದ್ರದ ಈ ಕಟ್ಟಪ್ಪಣೆಯ ನಂತರವೇ ಮುಖ್ಯಮಂತ್ರಿ ಯಡಿಯೂರಪ್ಪನವರು ಶ್ರೀರಾಮುಲು ಬದಲಿಗೆ ಸುಧಾಕರಗೆ ಆರೋಗ್ಯ ಖಾತೆ ನೀಡಲು ಮುಂದಾದರು ಎಂದು ಬಲ್ಲ ಮೂಲಗಳು ಹೇಳಿವೆ. ಈ ಮಧ್ಯೆ ಖಾತೆ ಬದಲಾವಣೆ ಬಗ್ಗೆ ಅಧಿಕೃತ ಆದೇಶ ಹೊರಬಿದ್ದ ತಕ್ಷಣವೇ ಅಧಿಕಾರ ವಹಿಸಿಕೊಂಡು ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಉಪಕ್ರಮಗಳನ್ನು ಆರಂಭಿಸುವುದಾಗಿ ಸಚಿವ ಸುಧಾಕರ್‌ ಅವರು ಹೇಳಿದ್ದಾರೆ.


Read Also: ಸಚಿವ ಶ್ರೀ ರಾಮುಲು ಇಂದ ಆರೋಗ್ಯ ಇಲಾಖೆ ಕಸಿದುಕೊಂಡ ಬಿಎಸ್‌ವೈ! ಸಂಪುಟದಲ್ಲಿ ನಡೀತ್ತಿದ್ಯಾ ಸರ್ಜರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights