ಮುರಿದ ಹಾಕಿ ಸ್ಟಿಕ್‌ನಿಂದ ಒಲಿಂಪಿಕ್ಸ್‌ವರೆಗೆ; ಹಸಿವಿನಲ್ಲೂ ಕನಸು ಕಂಡ ಹಾಕಿ ತಂಡದ ನಾಯಕಿ ರಾಣಿ ರಂಪಾಲ್‌!

ರಾಣಿ ರಂಪಾಲ್‌ ನಾಯಕತ್ವದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 2020ರ ಟೋಕಿಯೋ ಒಲಂಪಿಕ್ಸ್‌ನಲ್ಲಿ ಅತ್ಯುತ್ತಮ ಆಟವಾಡುತ್ತಿದ್ದು, ಸೆಮಿ ಫೈನಲ್ಸ್‌ ಪ್ರವೇಶಿಸಿದೆ. ಹರಿಯಾಣದ ಪುಟ್ಟ ಹಳ್ಳಿಯಿಂದ ಬಂದ ರಾಣಿ ರಂಪಾಲ್‌ ಹಾಕಿ ಕ್ರೀಡೆಯತ್ತ ಗಮನ ಸೆಳೆದಿದ್ದು ಹೇಗೆ? ಕುಟುಂಬದ ಬೆಂಬಲ ಹೇಗಿತ್ತು ಎಂಬುದರ ಬಗ್ಗೆ ಅವರೇ ಹೇಳಿರುವ ಮಾತುಗಳು ಇಲ್ಲಿವೆ.

ಮಳೆ ಹೆಚ್ಚಾಗಿ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮನೆ, ಅರೆ ಹೊಟ್ಟೆ, ಮಲಗಲು ಬಿಡದೇ ಕಿವಿಯಲ್ಲಿ ಗುಯ್‌ ಗುಟ್ಟುತ್ತಿದ್ದ ಸೊಳ್ಳೆ…. ಇದು ನನ್ನ ಕುಟುಂಬದ ಪ್ರತಿನಿತ್ಯದ ಬದುಕಾಗಿತ್ತು. ಅಪ್ಪ ತಳ್ಳುಗಾಡಿಯಲ್ಲಿ ಸಾಮಾನು ಸಾಗಿಸುವ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಮನೆಕೆಲಸ ಮಾಡುತ್ತಿದ್ದರು. ನನ್ನ ಹೆತ್ತವರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಜೀವನ ನಡೆಸುತ್ತಿದ್ದರು. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ನಾನು ಬಯಸುತ್ತಿದ್ದೆ.

ನನ್ನ ಮನೆಯ ಹತ್ತಿರ ಹಾಕಿ ಅಕಾಡೆಮಿ ಇತ್ತು. ಅಲ್ಲಿ ನಡೆಯುತ್ತಿದ್ದ ಹಾಕಿ ಆಟಗಾರರ ಅಭ್ಯಾಸವನ್ನು ಪ್ರತಿನಿತ್ಯ ಗಂಟೆಗಟ್ಟಲೆ ನೋಡುತ್ತಿದ್ದೆ. ಅಷ್ಟೆ ಅಲ್ಲ. ನಾನು ಕೂಡ ಆಡಬೇಕೆಂದು ಬಯಸುತ್ತಿದ್ದೆ. ಹಾಕಿ ಅಭ್ಯಾಸ ಮಾಡಲು ಹಾಕಿ ಸ್ಟಿಕ್‌ ಅಗತ್ಯವಿತ್ತು. ನನ್ನ ಅಪ್ಪನಿಗೆ ದಿನಕ್ಕೆ ದೊರೆಯುತ್ತಿದ್ದ 80 ರೂ ಕೂಲಿಯಲ್ಲಿ ಇಡೀ ಸಂಸಾರವನ್ನು ನಡೆಸುತ್ತಿದ್ದರು. ಆದ್ದರಿಂದ ನಾನು ಹಾಕಿ ಸ್ಟಿಕ್‌ ಖರೀದಿಸುವುದು ಕನಸಾಗಿತ್ತು.

ಆದರೆ ನಾನು ಮಾತ್ರ ಪ್ರತಿದಿನ ಆ ಅಕಾಡೆಮಿಯಲ್ಲಿ ಆಟ ಅಭ್ಯಾಸ ಮಾಡಿಸುತ್ತಿದ್ದ ತರಬೇತುದಾರರ (ಕೋಚ್‌) ಹತ್ತಿರ ಹೋಗಿ ನನಗೂ ಆಟ ಹೇಳಿಕೊಡಿ ಎಂದು ದುಂಬಾಲು ಬೀಳುತ್ತಿದ್ದೆ. ಆದರೆ ಕೋಚ್‌, ’ಪ್ರಾಕ್ಟೀಸ್‌ ಸಮಯದಲ್ಲಿ ಓಡಲು, ಆಡುವಷ್ಟು ಶಕ್ತಿ ನಿನ್ನಲ್ಲಿಲ್ಲ’ ಎನ್ನುತ್ತಿದ್ದ ಅವರು ನಾನು ಅಪೌಷ್ಟಿಕತೆಯಿಂದ ಬಳಲುತ್ತಿದ್ದದ್ದರಿಂದ ನನಗೆ ತರಬೇತಿ ನೀಡಲು ತಿರಸ್ಕರಿಸುತ್ತಿದ್ದರು.

ಒಂದು ದಿನ ಆಟದ ಮೈದಾನದಲ್ಲಿ ನನಗೊಂದು ಮುರಿದ ಹಾಕಿ ಸ್ಟಿಕ್‌ ಸಿಕ್ಕಿತು. ಅದನ್ನೇ ಹಿಡಿದುಕೊಂಡು ಆಟವಾಡಲು ಆರಂಭಿಸಿದೆ. ನನ್ನ ಹತ್ತಿರ ಟ್ರೈನಿಂಗ್‌ಗೆ ಅಗತ್ಯವಿರುವ ಬಟ್ಟೆ ಇರಲ್ಲಿಲ್ಲ. ನಾನು ಹಾಕಿಕೊಳ್ಳುತ್ತಿದ್ದ ಸೆಲ್ವಾರ್‌ ಕಮೀಜ್‌ನಲ್ಲಿಯೇ ನಾನು ಓಡುತ್ತಿದ್ದೆ. ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ನಿರ್ಧರಿಸಿದ್ದೆ. ಅವಕಾಶಕ್ಕಾಗಿ ಕೋಚ್‌ನನ್ನು ವಿನಂತಿಸಿಕೊಂಡೆ. ಕೊನೆಗೂ ಕಷ್ಟಪಟ್ಟು ಅವರನ್ನು ಒಪ್ಪಿಸಿದೆ.

Japan will stage Tokyo Olympics safely: India hockey captain Rani Rampal

ಈ ಬಗ್ಗೆ ಕುಟುಂಬದವರಿಗೆ ತಿಳಿಸಿದಾಗ, ‘ಹೆಣ್ಣುಮಕ್ಕಳು ಮನೆಯಲ್ಲಿ ಕೆಲಸ ಮಾಡುತ್ತಾರೆ. ನಾವು ನಿನ್ನನ್ನು ಸ್ಕರ್ಟ್‌‌ನಲ್ಲಿ ಆಡಲು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ನಾನು ಅವರನ್ನು ವಿನಂತಿಸಿಕೊಂಡೆ. ‘ದಯವಿಟ್ಟು ನನಗೆ ಹೋಗಲು ಬಿಡಿ, ನಾನು ಸೋತಿದ್ದೇ ಆದರೆ ನೀವೇಳಿದಂತೆ ಕೇಳುವೆ’ ಎಂದು ಕೇಳಿಕೊಂಡೆ. ಕೊನೆಗೆ ನನ್ನ ಕುಟುಂಬ ಒಲ್ಲದ ಮನಸ್ಸಿನಿಂದಲೇ ನನಗೆ ಆಟವಾಡಲು ಸಮ್ಮತಿ ನೀಡಿತ್ತು.

ಹಾಕಿ ಕೋಚಿಂಗ್‌ ಸೂರ್ಯ ಉದಯಿಸುವ ಮುನ್ನವೇ ಆರಂಭವಾಗುತ್ತಿತ್ತು. ನಾನು ಕೂಡ ಬೆಳಗ್ಗೆ ಬೇಗ ಎದ್ದು ಮೈದಾನಕ್ಕೆ ಹೋಗಬೇಕಾಗುತ್ತಿತ್ತು. ನಮ್ಮ ಮನೆಯಲ್ಲಿ ಗಡಿಯಾರ ಇರಲಿಲ್ಲ. ಹಾಗಾಗಿ ಅಮ್ಮ ಎದ್ದು ಆಕಾಶವನ್ನು ನೋಡಿ ನನ್ನನ್ನು ಎಚ್ಚರಿಸುತ್ತಿದ್ದರು.

ಅಕಾಡೆಮಿಯಲ್ಲಿ ‌ಪ್ರತಿಯೊಬ್ಬ ಆಟಗಾರನು ಅರ್ಧ ಲೀಟರ್‌ ಹಾಲು ತರಬೇಕು ಎಂಬುದು ಕಡ್ಡಾಯವಾಗಿತ್ತು. ನಮ್ಮ ಕುಟುಂಬದಲ್ಲಿ ಕಾಲು ಲೀಟರ್‌ ಹಾಲು ಸಿಗುವುದು ಕಷ್ಟವಾಗಿತ್ತು. ಹಾಗಾಗಿ ನಾನು ಯಾರಿಗೂ ತಿಳಿಯದ ಹಾಗೆ ಸ್ವಲ್ಪ ಹಾಲಿಗೆ ಹೆಚ್ಚು ನೀರನ್ನು ಮಿಶ್ರಣ ಮಾಡಿ ಕುಡಿಯುತ್ತಿದ್ದೆ. ಏಕೆಂದರೆ ನಾನು ಆಟವಾಡಲು ಬಯಸುತ್ತಿದ್ದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಓಟದಲ್ಲಿ ಮುಗ್ಗರಿಸಿದ ದ್ಯುತಿ ಚಾಂದ್‌; ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ!

ನನ್ನ ಕೋಚ್‌ ನನಗೆ ಬೆನ್ನೆಲುಬಾಗಿ ನಿಂತಿದ್ದರು. ನನಗಾಗಿ ಅವರು ಹಾಕಿ ಕಿಟ್‌ ಮತ್ತು ಶೂಗಳನ್ನು ಕೊಡಿಸಿದರು. ಅವರ ಕುಟುಂಬದೊಂದಿಗೆ ಬೆರೆಯಲು ಅವಕಾಶ ನೀಡಿದರು. ನನ್ನ ಊಟದ ಅಗತ್ಯಗಳನ್ನು ಅವರೇ ನೋಡಿಕೊಂಡರು. ಕಷ್ಟಪಟ್ಟು ನಾನು ತರಬೇತಿ ಪಡೆಯುತ್ತಿದ್ದೆ. ಒಂದು ದಿನವೂ ತರಬೇತಿಯನ್ನು ತಪ್ಪಿಸುತ್ತಿರಲಿಲ್ಲ.

ನನ್ನ ಮೊದಲ ಸಂಬಳ ಈಗಲೂ ನೆನಪಿದೆ. ಟೂರ್ನಮೆಂಟ್‌ ಒಂದರಲ್ಲಿ ನಾನು 500ರೂ ಗೆದ್ದಿದ್ದೆ. ಆ ಹಣವನ್ನು ಅಪ್ಪನಿಗೆ ಕೊಟ್ಟಿದ್ದೆ. ಅಲ್ಲಿಯವರೆಗೂ ಎಂದೂ ಅಪ್ಪ ಅಷ್ಟೊಂದು ಹಣವನ್ನು ತನ್ನ ಕೈನಲ್ಲಿ ಹಿಡಿದಿರಲಿಲ್ಲ. ‘ಒಂದಲ್ಲಾ ಒಂದು ದಿನ ನಾವು ನಮ್ಮ ಸ್ವಂತ ಮನೆಯನ್ನು ಕಟ್ಟಿಸುತ್ತೇನೆ’ ಎಂದು ಹೇಳಿ ನಾನು ನನ್ನ ಕುಟುಂಬದವರಿಗೆ ಪ್ರಮಾಣ ಮಾಡಿದೆ. ಆ ನಿಟ್ಟಿನಲ್ಲಿ ನನ್ನೆಲ್ಲಾ ಶಕ್ತಿಯನ್ನು ಬಳಸಿ ಎಲ್ಲವನ್ನು ಮಾಡಿದ್ದೇನೆ.

ನನ್ನ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಚಾಂಪಿಯನ್‌ಶಿಪ್‌ಗಳಲ್ಲಿ ಆಡಿದ್ದ ನನಗೆ, ನನ್ನ 15ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಸೇರುವಂತೆ ಕರೆ ಬಂದಿತು. ಇಷ್ಟೆಲ್ಲಾ ಅವಕಾಶಗಳು ನನಗೆ ದೊರೆತಿದ್ದರೂ ನನ್ನ ಸಂಬಂಧಿಕರು ಮಾತ್ರ ಯಾವಾಗ ಮದುವೆಯಾಗುತ್ತೀಯಾ? ಎಂದು ಕೇಳುತ್ತಿದ್ದರು. ಆದರೆ ಅಪ್ಪ, ‘ನಿನ್ನ ಮನಸ್ಸಿಗೆ ಇಷ್ಟವಾಗುವವರೆಗೂ ಆಟವಾಡು’ ಎಂದರು. ನನ್ನ ಕುಟುಂಬದ ಬೆಂಬಲದೊಂದಿಗೆ ನಾನು ಆಟದ ಕಡೆ ಗಮನ ಹರಿಸಿದೆ. ಅಂತಿಮವಾಗಿ ನಾನು ಭಾರತದ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದೆ.

ಇದಾದ ಸ್ವಲ್ಪ ಸಮಯದ ನಂತರ ಅಪ್ಪ ತನ್ನ ಸ್ನೇಹಿತರೊಬ್ಬರು ಮನೆಗೆ ಬಂದಿದ್ದರು. ಅವರು ತಮ್ಮ ಮೊಮ್ಮಗಳನ್ನು ಕರೆದು ನನಗೆ ‘ಅವಳು ನಿನ್ನಿಂದ ಸ್ಫೂರ್ತಿ ಪಡೆದಿದ್ದಾಳೆ. ಅವಳೂ ಹಾಕಿ ಆಡಲು ಬಯಸುತ್ತಾಳೆ’ ಎಂದರು. ನನಗೆ ತುಂಬಾ ಸಂತೋಷವಾಯಿತು. ದುಖಃ ಒತ್ತರಿಸಿ ಬಂತು. ಕಣ್ಣೀರು ತಡೆಯಲಾಗಲಿಲ್ಲ.

2017ರಲ್ಲಿ, ಅಂತಿಮವಾಗಿ ನಾನು ನನ್ನ ಕುಟುಂಬಕ್ಕೆ ನೀಡಿದ್ದ ಭರವಸೆ ಈಡೇರಿಸಿದೆ. ಅವರಿಗಾಗಿ ಸ್ವಂತ ಮನೆಯನ್ನು ಖರೀದಿಸಿದೆ. ಆ ದಿನ ನಾವು ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡು ಒಟ್ಟಿಗೆ ಅಳುತ್ತಿದ್ದೆವು.

Rani Rampal Bio, Career Achievements, Net Worth, Parents, and more » FirstSportz

ಇದು ಇಲ್ಲಿಗೆ ಮುಗಿದಿಲ್ಲ. ಟೊಕಿಯೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂದು ನನ್ನ ಕೋಚ್‌ ಕನಸು. ಈ ವರ್ಷ ನಾನು ಆ ಕನಸನ್ನು ನನಸು ಮಾಡಲು ತೀರ್ಮಾನಿಸಿದ್ದೇನೆ.

ರಾಣಿ ರಾಂಪಾಲ್‌ ಪರಿಚಯ:

2010ರ ವಿಶ್ವಕಪ್‌ನಲ್ಲಿ ಭಾಗವಹಿಸಿದ ರಾಷ್ಟ್ರೀಯ ತಂಡದ ಅತ್ಯಂತ ಕಿರಿಯ ಆಟಗಾರ್ತಿ, ಪ್ರಸ್ತುತ ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಜನಿಸಿದ್ದು 1994 ಡಿಸೆಂಬರ್‌ 4ರಂದು. ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆ, ಶಹಾಬಾದ್‌ ಮಾರ್ಕಂಡ ಇವರ ಹುಟ್ಟೂರು. ತನ್ನ 15ನೇ ವಯಸ್ಸಿಗೆ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪಾರ್ದಾಪಣೆ ಮಾಡಿದ ರಾಣಿ ಈವರೆಗೂ ಸುಮಾರು 212 ಪಂದ್ಯಗಳಲ್ಲಿ ಆಡಿದ್ದಾರೆ. ಸುಮಾರು 134ಗೋಲುಗಳನ್ನು ಗಳಿಸಿದ್ದಾರೆ. ಸ್ಟ್ರೈಕರ್‌ ಆಗಿಯೂ ಪ್ರಸಿದ್ಧರಾಗಿರುವ ಇವರಿಗೆ 2020ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.

2013ರಲ್ಲಿ ನಡೆದ ಜೂನಿಯರ್‌ ವರ್ಲ್ಡ್‌ ಕಪ್‌ನಲ್ಲಿ ಇವರಿದ್ದ ಮಹಿಳಾ ತಂಡವು ಕಂಚು, 2018ರಲ್ಲಿ ಜಕರ್ತಾದಲ್ಲಿ ನಡೆದ ಏಷ್ಯನ್‌ ಕಪ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ರಾಣಿ ನಾಯಕತ್ವದ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ತಲುಪಿ ಇತಿಹಾಸ ನಿರ್ಮಿಸಿದೆ.

ಕೃಪೆ: ಹ್ಯೂಮನ್ಸ್‌ ಆಫ್‌ ಬಾಂಬೆ (Humans of Bombay)

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಹಾಕಿ ಸೆಮಿಫೈನಲ್‌ನಲ್ಲಿ ಸೋಲುಂಡ ಭಾರತ; ಕಂಚು ಪಡೆಯುವ ನಿರೀಕ್ಷೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights