ಮುಂಬೈ ಏರ್ಪೋರ್ಟ್ನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಂಧನ; ಕಾರಣವೇನು?
ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಲು ದುಬೈಗೆ ತೆರಳುತ್ತಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಡಿ (ಜಾರಿನಿರ್ದೇಶನಾಲಯ) ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ, ಅವರು ದೇಶ ಬಿಟ್ಟು ತೆರಳಂತೆ ಸೂಚನೆ ನೀಡಲಾಗಿದೆ.
ಸುಕೇಶ್ ಚಂದ್ರಶೇಖರ್ ಎಂಬಾತ ಮತ್ತು ಫರ್ನಾಂಡಿಸ್ ಅವರ ನಡುವೆ ಅಕ್ರಮ ಹಣ ವರ್ಗಾವಣೆ ಆಗಿದೆ. ಫರ್ನಾಂಡಿಸ್ ಅವರು ಸುಕೇಶ್ ಅವರಿಂದ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯಾ ದೇಶದ ಬೆಕ್ಕು ಸೇರಿದಂತೆ 10 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಆ ಹಿನ್ನೆಲೆಯಲ್ಲಿ ಜ್ಯಾಕ್ವೆಲಿನ್ರ ವಿರುದ್ಧ “ಲುಕ್ ಔಟ್ ಸರ್ಕ್ಯುಲರ್ ‘ ಜಾರಿ ಗೊಳಿಸಲಾಗಿದ್ದು, ಅವರನ್ನು ಈ ವಿಚಾರಕ್ಕಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರ ಬಗ್ಗೆ ಹಲವು ರೀತಿಯ ಅಪ್ಡೇಟ್ಗಳು ಹೊರಬೀಳುತ್ತಿವೆ. ಅವುಗಳನ್ನು ತಿಳಿಯುವುದಕ್ಕೂ ಮೊದಲ ಫರ್ನಾಂಡಿಸ್ ಬಗ್ಗೆ ಹಲವು ಮಾಹಿತಿಗಳು ಇಲ್ಲಿವೆ.
ಜಾಕ್ವೆಲಿನ್ ಫರ್ನಾಂಡಿಸ್ ಯಾರು?
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮೂಲತಃ ಶ್ರೀಲಂಕಾದವರು. ಅವರು ಅಲಾದಿನ್ (2009) ಚಿತ್ರದ ಮೂಲಕ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಕೆರಿಯರ್ ಆರಂಭಿಸಿದರು. ಅವರು ಇದಕ್ಕೂ ಮೊದಲು ಟಿವಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಜಾಕ್ವೆಲಿನ್ 2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಸ್ಪರ್ಧೆಯನ್ನು ಗೆದ್ದಿದ್ದಾರೆ ಮತ್ತು ಅದೇ ವರ್ಷ ವಿಶ್ವ ಸುಂದರಿ ಸ್ಪರ್ಧೆಯಲ್ಲಿಯೂ ಶ್ರೀಲಂಕಾವನ್ನು ಪ್ರತಿನಿಧಿಸಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಹಿಂದಿ ಚಿತ್ರೋದ್ಯಮದಲ್ಲಿ ಸಕ್ರಿಯವಾಗಿರುವ ಅವರು ಜುಡ್ವಾ 2, ಹೌಸ್ಫುಲ್ 2, ಬಾಘಿ 2 ಮತ್ತು ಮಿಸ್ಟರ್ಸ್ ಸೀರಿಯಲ್ ಕಿಲ್ಲರ್ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಏಕೆ ಬಂಧಿಸಲಾಯಿತು?
ಜಾಕ್ವೆಲಿನ್ ಫೆರ್ನಾಂಡಿಸ್ ವಿರುದ್ಧ ಜಾರಿ ನಿರ್ದೇಶನಾಲಯವು ಲುಕ್ ಔಟ್ ಸುತ್ತೋಲೆ (ಎಲ್ಒಸಿ) ಹೊರಡಿಸಲಾಗಿದೆ. ಹೀಗಾಗಿ, ಅವರನ್ನು ಭಾನುವಾರ ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿದೆ. ಸುಕೇಶ್ ಚಂದ್ರಶೇಖರ್ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡಿಸ್ ಅವರ ಹೆಸರೂ ಕೇಳಿಬಂದಿದ್ದು, ಅದಕ್ಕೆ ಕೆಲವು ಸಾಕ್ಷಿಗಳೂ ದೊರೆತಿವೆ. ಇದೀಗ, ಅಧಿಕಾರಿಗಳು ಜಾಕ್ವೆಲಿನ್ ಅವರನ್ನು ದೆಹಲಿಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದಾರೆ. ತನಿಖೆ ಮುಗಿಯುವವರೆಗೂ ಜಾಕ್ವೆಲಿನ್ ಅವರು ಭಾರತವನ್ನು ತೊರೆಯುವಂತಿಲ್ಲ.
ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧದ ಪ್ರಕರಣವೇನು?
200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ಇಡಿ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪದ ಪ್ರಕಾರ, ತಿಹಾರ್ ಜೈಲಿನಲ್ಲಿ ಸುಕೇಶ್ ಶಿಕ್ಷೆ ಅನುಭವಿಸುತ್ತಿದ್ದಾಗ, ಉದ್ಯಮಿಯೊಬ್ಬರ ಪತ್ನಿಯಿಂದ ಹಣ ಸುಲಿಗೆ ಮಾಡಿದ್ದ. ಅಲ್ಲದೆ, ಈ ವೇಳೆ ನಟಿ ಜಾಕ್ವಿಲಿನ್ ಅವರು ಸುಕೇಶ್ ಜೊತೆ ವಿತ್ತೀಯ ವಹಿವಾಟು ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಾಕ್ವೆಲಿನ್ಗೆ ಸುಕೇಶ್ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಇಡಿ ಹೇಳಿದೆ. ಜಾಕ್ವೆಲಿನ್ ಮಾತ್ರವಲ್ಲದೆ, ನಟಿ ನೋರಾ ಫತೇಹಿ ಅವರನ್ನೂ ಇಡಿ ವಿಚಾರಣೆ ಕರೆದಿತ್ತು.
ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಜನಪ್ರಿಯ ಸಿನಿಮಾಗಳು:
ಜಾಕ್ವೆಲಿನ್ ಫರ್ನಾಂಡೀಸ್ ಅವರು ಮರ್ಡರ್ 2, ಹೌಸ್ಫುಲ್ 2, ರೇಸ್ 2, ಕಿಕ್, ಹೌಸ್ಫುಲ್ 3 ಮತ್ತು ಜುಡ್ವಾ 2 ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಬ್ರಿಟಿಷ್ ಚಲನಚಿತ್ರ ಡೆಫಿನಿಷನ್ ಆಫ್ ಫಿಯರ್, ಶ್ರೀಲಂಕಾದ ಸಿನಿಮಾ ಇಂಡಸ್ಟ್ರಿಯಲ್ಲೂ ಅವರು ಕೆಲಸ ಮಾಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರ ಮುಂಬರುವ ಸಿನಿಮಾಗಳು:
ಜಾಕ್ವೆಲಿನ್ ಫರ್ನಾಂಡೀಸ್ ಅವರು ಪ್ರಸ್ತುತ ಬಚ್ಚನ್ ಪಾಂಡೆ, ಅಟ್ಯಾಕ್, ಸರ್ಕಸ್, ರಾಮ್ ಸೇತು, ಪವನ್ ಕಲ್ಯಾಣ್ ಅಭಿನಯದ ತೆಲುಗು ಚಿತ್ರ ಹರಿ ಹರ ವೀರ ಮಲ್ಲು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕನ್ನಡ ಸಿನಿಮಾ ವಿಕ್ರಾಂತ್ ರೋನಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಕಿರುತೆರೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್:
ಡ್ಯಾನ್ಸ್ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾ (2016) ನ ಒಂಬತ್ತನೇ ಸೀಸನ್ಗೆ ಜಾಕ್ವೆಲಿನ್ ಫರ್ನಾಂಡೀಸ್ ತೀರ್ಪುಗಾರರಾಗಿದ್ದರು. ಅವರು ನೇಹಾ ಕಕ್ಕರ್ ಮತ್ತು ರಾಜಾ ಹಸನ್ ಅವರ “ಮೇರೆ ಆಂಗ್ನೆ ಮೇ” ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಹಿಟ್ ಆದ ಬಾದ್ಶಾ ಜೊತೆ “ಗೆಂಡಾ ಫೂಲ್” ಮತ್ತು “ಪಾನಿ ಪಾನಿ” ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಯಶ್ ಅವರ ‘ಕೆಜಿಎಫ್-2’ ಮತ್ತು ಅಮಿರ್ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಒಂದೇ ದಿನ ರಿಲೀಸ್!