ಬಂಗಾಳಕ್ಕೆ BJP ಪ್ರಣಾಳಿಕೆ ಬಿಡುಗಡೆ; ಸಿಎಎ ಜಾರಿ, ಪ್ರತಿ ಕುಟುಂಬಕ್ಕೂ ಉದ್ಯೋಗ ಭರವಸೆ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮೊದಲ ಸಂಪುಟ ಸಭೆಯಲ್ಲಿಯೇ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಯನ್ನು ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ಬಂಗಾಳ ವಿಧಾನಸಭಾ ಚುನಾವಣೆ ಭಾಗವಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಸಿಎಎ ಜಾರಿ, ಉದ್ಯೋಗ, ಮೀಸಲಾತಿ ಮೊದಲಾದ ಭರವಸೆಗಳನ್ನು ನೀಡಿದೆ.

ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ರಾಜ್ಯದ ಪ್ರತಿ ಕುಟುಂಬಕ್ಕೂ ಒಂದು ಉದ್ಯೋಗವನ್ನು ಒದಗಿಸುವುದಾಗಿ ಪಕ್ಷವು ಭರವಸೆ ನೀಡಿದೆ.

“ಸೋನಾರ್ ಬಾಂಗ್ಲಾ ಸಂಕಲ್ಪ ಪತ್ರ” ಎಂದು ಕರೆಯಲ್ಪಡುವ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ನಾವು ಸಿಎಎಯನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಜಾರಿಗೊಳಿಸಲು ನಿರ್ಧರಿಸಿದ್ದೇವೆ, ಜೊತೆಗೆ ಬಡವರಿಗಾಗಿ ಆಯುಷ್ಮಾನ್ ಭಾರತ್ ಮತ್ತು ಪಿಎಂ-ಕಿಸಾನ್ ಅನುಮೋದಿಸುತ್ತೇವೆ” ಎಂದು ಹೇಳಿದ್ದಾರೆ.

ಸಿಎಎಯನ್ನು 2019 ರ ಡಿಸೆಂಬರ್‌ನಲ್ಲಿ ಮೋದಿ ಸರ್ಕಾರ ಅಂಗೀಕರಿಸಿದರೂ, ನಿಯಮಗಳನ್ನು ರೂಪಿಸದ ಕಾರಣ ಅದು ಇನ್ನೂ ಜಾರಿಗೆ ಬಂದಿಲ್ಲ. ಪಶ್ಚಿಮ ಬಂಗಾಳದ ದೊಡ್ಡ ವಿಭಾಗ ಸಿಎಎಯನ್ನು ಬೆಂಬಲಿಸುತ್ತಿದ್ದರಾದರೂ, ಚುನಾವಣೆ ನಡೆಯಲಿರುವ ಮತ್ತೊಂದು ರಾಜ್ಯವಾದ ಅಸ್ಸಾಂನಲ್ಲಿ ಸಿಎಎಯನ್ನು ವಿರೋಧಿಸುತ್ತಿರುವವರು ಹೆಚ್ಚಾಗಿದ್ದಾರೆ. ಹೀಗಾಗಿ ಬಿಜೆಪಿಯು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಎಎ ವಿಚಾರವಾಗಿ ಎಚ್ಚರಿಕೆಯಿಂದ ನಡೆಯುತ್ತಿದೆ.

“ಪಕ್ಷವು ಅಕ್ರಮ ಒಳನುಸುಳುವಿಕೆಯ ವಿರುದ್ಧ ಪಕ್ಷವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಒಳನುಸುಳುವಿಕೆ ಮುಕ್ತ ಬಂಗಾಳವನ್ನು ಖಚಿತಪಡಿಸಿಕೊಳ್ಳಲು ಪ್ರತಿ ನಿರಾಶ್ರಿತರ ಕುಟುಂಬಕ್ಕೆ ಐದು ವರ್ಷಗಳ ಕಾಲ ಪ್ರತಿ ವರ್ಷ 10,000 ರೂ.ಗಳನ್ನು ನೇರ ವರ್ಗಾವಣೆಯ ಮೂಲಕ ನೀಡುತ್ತೇವೆ” ಎಂದು ಅಮಿತ್‌ ಶಾ ಹೇಳಿದ್ದಾರೆ. ‘‘ಮಹಿಷ್ಯ, ತಿಲಿ ಮತ್ತು ಇತರ ಹಿಂದೂ ಸಮುದಾಯಗಳಿಗೆ ಒಬಿಸಿ ಮೀಸಲಾತಿ; ಮಾಟುವಾಸ್ ಮತ್ತು ದಳಪತಿ ಸಮುದಾಯಗಳಿಗೆ ಮಾಸಿಕ 3,000 ರೂ. ಮತ್ತು 10 ನೇ ತರಗತಿಯವರೆಗೆ ಶಾಲೆಗಳಲ್ಲಿ ಬಂಗಾಳಿ ಕಡ್ಡಾಯಗೊಳಿಸುವುದಾಗಿ” ಅಮಿತ್‌ ಶಾ ಭರವಸೆ ನೀಡಿದ್ದಾರೆ.

ಮಹಿಳಾ ಮತದಾರರ ಮೇಲೆ ಕಣ್ಣಿಟ್ಟಿರುವ ಪಕ್ಷವು ಕೆಜಿಯಿಂದ ಪಿಜಿಗೆ ಬಾಲಕಿಯರಿಗೆ ಉಚಿತ ಶಿಕ್ಷಣ, ಎಲ್ಲಾ ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ 33% ಮೀಸಲಾತಿ ನೀಡುವ ಭರವಸೆ ನೀಡಿತು.

ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು 11,000 ಕೋಟಿ ರೂ. ಮೌಲ್ಯದ ಸೋನಾರ್ ಬಾಂಗ್ಲಾ ನಿಧಿ, ನೊಬೆಲ್ ಪ್ರಶಸ್ತಿಯ ಮಾದರಿಯಲ್ಲಿ ಟ್ಯಾಗೋರ್ ಪ್ರಶಸ್ತಿ, ಐಐಟಿಗಳು ಮತ್ತು ಐಐಎಂಗಳಿಗೆ ಸಮನಾಗಿ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯ ಮಾಡಲು 20,000 ಕೋಟಿ ರೂ., ಈಶ್ವರ್ ಚಂದ್ರ ವಿದ್ಯಾಸಾಗರ್ ನಿಧಿ ಮತ್ತು ಒಂದು ನಗರಕ್ಕೆ ಕೋಲ್ಕತಾ ನಿಧಿ ಬಿಜೆಪಿಯ ಇತರ ಭರವಸೆಗಳಾಗಿವೆ.

ಇದನ್ನೂ ಓದಿ: ಅಸ್ಸಾಂ ಮೇಲೆ BJP-RSS ದಾಳಿ ಮಾಡುತ್ತಿವೆ; ಸಂಸ್ಕೃತಿಯನ್ನು ಕಾಂಗ್ರೆಸ್‌ ರಕ್ಷಿಸಲಿದೆ: ಕಾಂಗ್ರೆಸ್‌ ಪ್ರಣಾಳಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights