ತಮಿಳುನಾಡಿನಲ್ಲಿ BJP ಎಂಥ ಪರಿಸ್ಥಿತಿ ತಲುಪಿದೆ; ಪಕ್ಷಾಂತರಿಗಳಿಗೆ ಟಿಕೆಟ್‌ ನೀಡಿದ್ದಕ್ಕೆ BJP ಮುಖಂಡ ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯ!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಸ್ಥಾನ ಹಂಚಿಕೆಯ ಬಳಿಕ ಬಿಜೆಪಿಗೆ 20 ಸೀಟುಗಳನ್ನು ನೀಡಲಾಗಿದೆ. ಈ ಪೈಕಿ 18 ಟಿಕೆಟ್‌ಗಳನ್ನು ಇತರ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂಕತರಗೊಂಡಿರುವವರಿಗೆ ನೀಡಲಾಗಿದೆ. ಹೀಗಾಗಿ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಬಿಜೆಪಿ ಎಂಥಹ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಗೇಲಿ ಮಾಡಿದ್ದಾರೆ.

ಬಿಜೆಪಿಯ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿರುವ ಸುಬ್ರಮಣಿಯನ್‌ ಸ್ವಾಮಿ ಅವರು ಬಜೆಪಿಯ ನಿರ್ಧಾರಗಳು, ಕಾರ್ಯಚಟುವಟಿಕೆಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ, ವ್ಯಂಗ್ಯ, ಟೀಕೆ ಮಾಡುವುದು ಸಾಮಾನ್ಯವಾಗಿದೆ. ಇದೀಗ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಯ ನಿರ್ಧಾರದ ಬಗ್ಗೆ ಅವರು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಬಿಜೆಪಿಯ ಪರಿಸ್ಥಿತಿ ಇಲ್ಲಿದೆ ಬಂದಿದೆ: ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಯ 20 ಅಭ್ಯರ್ಥಿಗಳಲ್ಲಿ 18 ಜನರು ಇತರೆ ಪಕ್ಷಗಳಿಂದ ಬಂದವರು ಮತ್ತು ಆರ್‌ಎಸ್‌ಎಸ್‌ ಅಥವಾ ಜನಸಂಘದೊಂದಿಗೆ ಯಾವುದೇ ಸಂಪರ್ಕ ಇಲ್ಲದವರು. ಎಐಎಡಿಎಂಕೆಯು ಸಿಎಎ ಅನ್ನು ರದ್ದುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ” ಎಂದು ಟೀಕಿಸಿದ್ದಾರೆ.

ಈ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಅರುಣ್ ಕೊಂಡಪಲ್ಲೆ ಎಂಬುವವರು “ಪಕ್ಷದಲ್ಲಿ ನೀವಿರಬೇಕಾದರೆ ಬಿಜೆಪಿಗೆ ವಿರೋಧ ಪಕ್ಷದ ಅಗತ್ಯವೇ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ “ಇಂದು ದೇಶದಲ್ಲಿ ಬೇರೆ ಆರೋಗ್ಯಕರ ವಿರೋಧ ಪಕ್ಷಗಳಿಲ್ಲ. ನಾನು ಹಿಂದುತ್ವವನ್ನು ಆಧರಿಸಿದ ಬಿಜೆಪಿಯ ನವೋದಯಕ್ಕಾಗಿ ಕೆಲಸ ಮಾಡುತ್ತೇನೆ. ಇದು ಜನಸಂಘ ಪರಂಪರೆಗೆ ಸೇರಿದೆ ಮತ್ತು ಮೂರ್ತಿ ಪೂಜೆಗೆ ಅಲ್ಲ” ಎಂದಿದ್ದಾರೆ.

ಇನ್ನು ನಿನ್ನೆ ಬಿಜೆಪಿ ಮೈತ್ರಿ ಪಕ್ಷ ಎಐಎಡಿಎಂಕೆಯು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, “ನಾವು ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಉಭಯ ಪೌರತ್ವ ಮತ್ತು ವಸತಿ ಪರವಾನಗಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಸಿಎಎಯನ್ನು ಹಿಂಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇವೆ” ಎಂದು ಘೋಷಿಸಲಾಗಿದೆ.

ತಮಿಳುನಾಡು ಚುನಾವಣೆಯು ಏಪ್ರಿಲ್ 06 ರಂದು ನಡೆಯಲಿದ್ದು, ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಜಯಲಲಿತಾ ಸಾವಿಗೆ ಕರುಣಾನಿಧಿ ಮತ್ತು ಸ್ಟಾಲಿನ್‌ ಕಾರಣ: ತಮಿಳು ಸಿಎಂ ಪಳನಿಸ್ವಾಮಿ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights