ವಿಲಕ್ಷಣ ಘಟನೆ: ಹೈಸ್ಪೀಡ್‌ ರೈಲಿನ ವೇಗಕ್ಕೆ ಕುಸಿದು ಬಿತ್ತು ರೈಲ್ವೇ ನಿಲ್ದಾಣ!

ಎಕ್ಸ್‌ಪ್ರೆಸ್‌ ರೈಲೊಂದು ವೇಗವಾಗಿ ಹಾದುಹೋದ ರಭಸಕ್ಕೆ ಮಧ್ಯಪ್ರದೇಶದ ಭೂಸಾವಲ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿರುವ ಬುರ್ಹಾನ್ಪುರದ ಚಾಂದ್ನಿ ರೈಲ್ವೆ ನಿಲ್ದಾಣದ ಕಟ್ಟಡವು ಕುಸಿದು ಬಿದ್ದಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಪುಷ್ಪಕ್ ಎಕ್ಸ್‌ಪ್ರೆಸ್ ಸುಮಾರು 110 ಕಿ.ಮೀ ವೇಗದಲ್ಲಿ ಚಾಂದ್ನಿ ರೈಲ್ವೆ ನಿಲ್ದಾಣದ ಮೂಲಕ ಹಾದು ಹೋಗಿತ್ತು. ರೈಲು ನಿಲ್ದಾಣವನ್ನು ದಾಟುತ್ತಿದ್ದಂತೆಯೇ ರೈಲು ನಿಲ್ದಾಣದ ಕಟ್ಟಡ ಕುಸಿದು ಬಿದ್ದಿದೆ.

ಬಹುಶಃ ದೇಶದ ಅತಿ ವೇಗದ ರೈಲಿನ ಪ್ರಭಾವದಿಂದ ನಿಲ್ದಾಣದ ಕಟ್ಟಡವು ಕುಸಿದು ಬಿದ್ದಿರುವ ದೇಶದ ಮೊದಲ ಘಟನೆ ಇದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಪುಷ್ಪಕ್ ಎಕ್ಸ್‌ಪ್ರೆಸ್ ಬುಧವಾರ  ಹೆಚ್ಚಿನ ವೇಗದಲ್ಲಿ ಈ ನಿಲ್ದಾಣದ ಮೂಲಕ ಹಾದುಹೋಯಿತು. ರೈಲಿನ ವೇಗಕ್ಕೆ ಅಲುಗಾಡಿದ ನಿಲ್ದಾಣದ ಕಟ್ಟಡದ ಮುಂಭಾಗವು ಕುಸಿದು ಬಿದ್ದಿದೆ. ನಿಲ್ದಾಣದ ಅಧೀಕ್ಷಕರ ಕೋಣೆಯೂ ಸಹ ಮುರಿದಿದ್ದು ಕಿಟಕಿ ಫಲಕಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ನಿಲ್ದಾಣದ ಕಟ್ಟಡ ಕುಸಿದುಬಿದ್ದ ತಕ್ಷಣ ರೈಲನ್ನು ನಿಲ್ಲಿಸಲಾಗಿದ್ದು, ಒಂದು ಗಂಟೆಗಳ ಕಾಲ ರೈಲು ಅಲ್ಲೇ ನಿಂತಿತ್ತು. ಅಲ್ಲದೆ, ಸುಮಾರು 30 ನಿಮಿಷಗಳ ಕಾಲ ರೈಲ್ವೇ ಸಂಚಾರಕ್ಕೆ ಅಡಚಣೆಯಾಯಿತು. ಇದರಿಂದಾಗಿ 10ಕ್ಕೂ ಹೆಚ್ಚು ರೈಲುಗಳ ಸಂಚಾರ ಅಸ್ತವ್ಯಸ್ತವಾಯಿತು ಎಂದು ತಿಳಿದು ಬಂದಿದೆ.

ಡಿಆರ್‌ಎಂ ಭೂಸಾವಲ್ ವಿಭಾಗದ ವಿವೇಕ್ ಗುಪ್ತಾ ಮಾತನಾಡಿ, ನಿಲ್ದಾಣದ ಕಟ್ಟಡದ ಮುಂಭಾಗ ಮಾತ್ರ ಹಾನಿಯಾಗಿದೆ. ದೊಡ್ಡ ರೀತಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಹಾಗಾಗಿ ರೈಲುಗಳು ಎಂದಿನಂತೆ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.

ಈ ಕಟ್ಟಡವನ್ನು 2007 ರಲ್ಲಿ ನಿರ್ಮಿಸಲಾಗಿತ್ತು. ಗುತ್ತಿಗೆದಾರ ಯಾವುದೇ ಕಂಬಗಳನ್ನು ನಿಲ್ಲಿಸದೇ ಕಟ್ಟಡವನ್ನು ನಿರ್ಮಿಸಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ಅವಶೇಷಗಳೂ ಸಹ ಅಲ್ಲಿ ಕಂಬಗಳು ಇದ್ದವು ಎಂಬುದಕ್ಕೆ ಯಾವುದೇ ಅವಶೇಷಗಳನ್ನು ಸಹ ತೋರಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಯಡಿಯೂರಪ್ಪ ಬಿಟ್ಟು ಬಿಜೆಪಿಯಲ್ಲಿ ಸ್ಟಾರ್‌ ಲೀಡರ್‌ ಯಾರಿದ್ದಾರೆ?: BJP ಶಾಸಕರ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights