ಅಧಿವೇಶನದಲ್ಲಿ ಅಂಗೀಕಾರಗೊಂಡ ಮಸೂದೆಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಕಾಂಗ್ರೆಸ್‌

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾದ ಮಸೂದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. ಪ್ರತಿಪಕ್ಷದ ಯಾವುದೇ ಬೇಡಿಕೆಗಳಿಗೆ ಸರ್ಕಾರ ಒಪ್ಪದಿರುವುದು ಇದೇ ಮೊದಲು ಎಂದೂ ಕಾಂಗ್ರೆಸ್‌ ಆರೋಪಿಸಿದೆ.

ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಜೈರಾಮ್ ರಮೇಶ್ ಮತ್ತು ರಾವ್ನೀತ್ ಸಿಂಗ್ ಬಿಟ್ಟು ಅವರು ಪ್ರಸ್ತುತ ಸಂಸತ್ತಿನ ಅಧಿವೇಶನವನ್ನು ನಿಗದಿ ಮಾಡಲಾಗಿದ್ದ ಏಪ್ರಿಲ್ 8 ರವರೆಗೆ ಮುಂದುವರೆಸಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು. ಆದರೆ ನಿಗದಿತ ಸಮಯಕ್ಕಿಂತ ಎರಡು ವಾರಗಳ ಮುಂಚಿತವಾಗಿಯೇ ಅಧಿವೇಶನವನ್ನು ಕಡಿತಗೊಳಿಸಲು ಸರ್ಕಾರವು ಕುಂಟು ನೆಪಗಳನ್ನು ಮುಂದಿಟ್ಟಿದೆ ಎಂದು ಆರೋಪಿಸಿದ್ದಾರೆ.

“ದೆಹಲಿ ಮಸೂದೆ ಮತ್ತು ಗಣಿ ಮತ್ತು ಖನಿಜ ಮಸೂದೆಗಳು ಸೇರಿದಂತೆ ಸಂಸತ್ತಿನ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಪ್ರತಿಯೊಂದು ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ” ಎಂದು ರಮೇಶ್ ಅವರು ತಿಳಿಸಿದ್ದಾರೆ.

“ಈ ರೀತಿಯ ಮಸೂದೆಗಳನ್ನು ಅಂಗೀಕರಿಸುವುದು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಸಂಸದೀಯ ಸಮಿತಿಗಳ ಪಾತ್ರವನ್ನು ನಿರ್ಲಕ್ಷಿಸಲಾಗಿದೆ. ಇದಕ್ಕಾಗಿ ನಾವು ಸರ್ಕಾರವನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದು ಅವರು ಹೇಳಿದರು.

“ನಾವು ಅಧಿವೇಶನ ಏಪ್ರಿಲ್ 8 ರವರೆಗೆ ನಡೆಯಬೇಕೆಂದು ಬಯಸಿದ್ದೆವು. ಹೆಚ್ಚುತ್ತಿರುವ ಇಂಧನ ಬೆಲೆಗಳು, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಬೆಲೆ ಏರಿಕೆ ಮುಂತಾದ ಹಲವು ಜನರ ಸಮಸ್ಯೆಗಳನ್ನು ಎತ್ತಿ ಚರ್ಚಿಸಲು ಬಯಸಿದ್ದೆವು. ಪ್ರಧಾನಿ, ಗೃಹ ಸಚಿವರು ಮತ್ತು ಇತರ ಮಂತ್ರಿಗಳು ಚುನಾವಭಣಾ ಪ್ರಚಾರದಲ್ಲಿರುವಾಗ, ಅಧಿವೇಶನವು ಎರಡು ವಾರಗಳ ಮುಂಚೆಯೇ ಮುಗಿದಿದೆ. ಅಧಿವೇಶನ ಅವಧಿಯ ಕಡಿತವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ರಮೇಶ್ ಹೇಳಿದರು.

ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅಧಿವೇಶನ ಬಿಟ್ಟು ಚುನಾವಣೆಯಲ್ಲಿ ನಿರತರಾಗಿದ್ದಾರೆ ಎಂದು ಖರ್ಗೆ ಆರೋಪಿಸಿದರು.

“ಅವರು ಒಮ್ಮೆಯೂ ಸಂಸತ್ತಿನತ್ತ ಬರಲಿಲ್ಲ. ರಾಷ್ಟ್ರಗೀತೆ ಹಾಡುವಾಗ ಹಾಜರಾಗಲು ಪ್ರಧಾನ ಮಂತ್ರಿ ಕೊನೆಯ ದಿನ ವಾಡಿಕೆಗಾಗಿ ಬಂದರು” ಎಂದು ಅವರು ಹೇಳಿದರು.

“ನಾವು ಸಂಸತ್ತನ್ನು ಕರೆಯುವುದು ಜನರ ತೊಂದರೆಗಳನ್ನು ಗಮನಿಸಿ ಅವುಗಳನ್ನು ಪರಿಹರಿಸುವುದಕ್ಕಾಗಿ. ಇಲ್ಲದಿದ್ದರೆ, ಸಂಸತ್ತನ್ನು ಕರೆಯುವುದರಲ್ಲಿ ಯಾವ ಅರ್ಥವಿದೆ” ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಸರ್ಕಾರ ಖಾಸಗೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಬ್ರಿಟಿಷರು ದೇಶವನ್ನು ಲೂಟಿ ಮಾಡಿದ ನಂತರ, ಮೋದಿ ನೇತೃತ್ವದ ಸರ್ಕಾರ ಎಲ್ಲಾ ಯೋಜನೆಗಳ ಮೂಲಕ ತಮ್ಮ “ಖಾಸಗಿ ಗೆಳೆಯರಿಗೆ” ಉಳಿದಿರುವ “ಎಲ್ಲವನ್ನೂ ಮಾರಾಟ ಮಾಡುವ” ಉದ್ದೇಶದಲ್ಲಿ ಹೊಂದಿದೆ ಎಂದು ಅವರು ಆರೋಪಿಸಿದರು.

ಈವರೆಗೆ 300 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ.  ರೈತರು ಮತ್ತು ಬಡವರ ಮಾತುಗಳನ್ನು ಕೇಳಲು ನಿಮಗೆ ಸಮಯವಿಲ್ಲ, ಆದರೆ ಪ್ರಚಾರದಲ್ಲಿ ನಿರತರಾಗಿದ್ದೀರಾ” ಎಂದು ಪ್ರಶ್ನಿಸಿದರು.

ನಕಲಿ ಭರವಸೆ ನೀಡಿದ್ದಕ್ಕಾಗಿ ಚುನಾವಣೆಯಲ್ಲಿರುವ ರಾಜ್ಯಗಳು ಬಿಜೆಪಿಯನ್ನು ಶಿಕ್ಷಿಸಬೇಕು ಎಂದು ಪಂಜಾಬ್ ಸಂಸದ ರಾವ್‌ನೀತ್‌ ಸಿಂಗ್‌ ಹೇಳಿದರು.

ಇದನ್ನೂ ಓದಿ: ಬಂಗಾಳ ಚುನಾವಣೆ: ಮೊದಲ ಹಂತದ ಚುನಾವಣೆಗೆ BJP ಹೆವಿವೇಯ್ಟ್‌ ತಯಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights