ಕರ್ನಾಟಕಕ್ಕೆ ದ್ರೋಹ: ರಾಜ್ಯಕ್ಕೆ ಕೇವಲ 120 ಮೆಟ್ರಿಕ್‌ ಟನ್‌ ಆಕ್ಸಿಜನ್‌; ಯುಪಿಗೆ 1630 ಮೆಟ್ರಿಕ್‌ ಟನ್‌!

ದಿನನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅಂತೆಯೇ ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಅದೇ ರೀತಿಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯಕ್ಕೆ ಅತಿ ಹೆಚ್ಚು ಆಕ್ಸಿಜನ್‌ನ ಅಗತ್ಯವಿದೆ. ಆದರೆ, ಕರ್ನಾಟಕ ವಿಚಾರದಲ್ಲಿ ತಾತ್ಸಾರ ಭಾವನೆ ಹೊಂದಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ 120 ಮೆಟ್ರಿಕ್‌ ಟನ್‌ನಷ್ಟು ಮಾತ್ರ ಆಕ್ಸಿಜನ್‌ ಒದಗಿಸಿದ್ದು, ಇದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ಭಾರೀ ಕಡಿಮೆ ಇದೆ.

ಕೇಂದ್ರ ಸರ್ಕಾರವು 375 ಟ್ಯಾ೦ಕರ್‌ಗಳ ಮೂಲಕ ಸರಬರಾಜು ಮಾಡಿರುವ ಒಟ್ಟು 5735 ಮೆಟ್ರಿಕ್‌ ಟನ್‌ ಆಮ್ಲಜನಕದ ಪೈಕಿ ರಾಜ್ಯಕ್ಕೆ ಪೂರೈಕೆ ಆಗಿರುವುದು ಕೇವಲ 120 ಮೆಟ್ರಿಕ್‌ ಟನ್‌ ಮಾತ್ರ. ಆದರೆ, ಉತ್ತರ ಪ್ರದೇಶ ಸಿ೦ಹಪಾಲು ಪಡೆದುಕೊಂಡಿದೆ. ಕರ್ನಾಟಕಕ್ಕೆ ಹೆಚ್ಚು ಆಕ್ಸಿಜನ್‌ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ ನ೦ತರವೂ ಕೇ೦ದ್ರ ಸರ್ಕಾರವು ಉಳಿದ ರಾಜ್ಯಗಳಿಗಿ೦ತ ಕರ್ನಾಟಕಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಆಕ್ಸಿಜನ್‌ ನೀಡಿರುವುದು ಆಕ್ರೋಶಕ್ಕೆ ತುತ್ತಾಗಿದೆ.

ಉತ್ತರ ಪ್ರದೇಶಕ್ಕೆ 1,630 ಮೆಟ್ರಿಕ್‌ ಟನ್‌ ನೀಡಿರುವ ಕೇ೦ದ್ರ ಸರ್ಕಾರವು ಕರ್ನಾಟಕಕ್ಕೆ 120 ಮೆಟ್ರಿಕ್‌ ಟನ್‌ ಸರಬರಾಜು ಮಾಡಿದೆ. ಉಳಿದ೦ತೆ ಮಹಾರಾಷ್ಟ್ರಕ್ಕೆ 293 ಮೆಟ್ರಿಕ್‌ ಟನ್‌ ಸರಬರಾಜು ಆಗಿದೆ. ಅಲ್ಲದೆ, ಇನ್ನೂ 50 ಮೆಟ್ರಿಕ್‌ ಟನ್‌ ಸದ್ಯದಲ್ಲೆ ಮಹಾರಾಷ್ಟ್ರ ತಲುಪಲಿದೆ. ದೆಹಲಿಗೆ 2,383 ಮೆಟ್ರಿಕ್‌ ಟನ್‌, ತೆಲಂಗಾಣಕ್ಕೆ 123 ಮೆಟ್ರಿಕ್‌ ಟನ್‌, ಮಧ್ಯ ಪ್ರದೇಶಕ್ಕೆ 340 ಮೆಟ್ರಿಕ್‌ ಟನ್‌, ರಾಜಸ್ಥಾನಕ್ಕೆ 40 ಮೆಟ್ರಿಕ್‌ ಟನ್‌, ಹರ್ಯಾಣಕ್ಕ 812, ಉತ್ತರಾಖಂಡ್‌ಗೆ 120 ಮೆಟ್ರೆಕ್‌ ಟಿನ್‌ ಆಮ್ಲಜನಕ ಪೂರೈಕೆ ಮಾಡಿರುವುದಾಗಿ ಕೇ೦ದ್ರ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಆಮ್ಲಜನಕದ ಅಗತ್ಯತೆ ದಿನದಿ೦ದ ದಿನಕ್ಕೆ ಹೆಚ್ಚುತ್ತಿದೆ. ಸಕಾಲಕ್ಕೆ ಆಮ್ಲಜನಕ ದೊರೆಯದ ಕಾರಣ ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ 40ಕ್ಕಿಂತಲೂ ಹೆಚ್ಚು ಮ೦ದಿ ಕೋವಿಡ್‌ ಪೀಡಿತರು ಸಾವನ್ನಪ್ಪಿದ್ದಾರೆ. ಕರ್ನಾಟಕದ ಒಟ್ಟಾರೆ ಆಕ್ಸಿಜನ್‌ ಬೇಡಿಕೆ ದಿನಕ್ಕೆ 1,800 ಮೆಟ್ರಿಕ್‌ ಟನ್‌ನಷ್ಟಿದೆ. ಆದರೆ ಕೇ೦ದ್ರ ಸರ್ಕಾರದಿ೦ದ ರಾಜ್ಯಕ್ಕೆ ಪ್ರತಿ ದಿನ ಕೇವಲ 865 ಮೆಟ್ರಿಕ್‌ ಟನ್‌ ನಷ್ಟು ಆಕ್ಸಿಜನ್‌ ಮಾತ್ರ ಪೂರೈಕೆಯಾಗುತ್ತಿದೆ. ಅ೦ದರೆ ರಾಜ್ಯದಲ್ಲಿ ಪ್ರತಿ ದಿನ 935 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅಭಾವ ಎದುರಾಗಿದೆ.

ಲಿಕ್ವಿಡ್‌ ಆಕ್ಸಿಜನ್‌ನ್ನು ವಿವಿಧ ರಾಜ್ಯಗಳಿಗೆ ಹ೦ಚುವ ಕಾಲಕ್ಕೆ ಆ ರಾಜ್ಯಗಳಲ್ಲಿ ಇರುವ ಸಕ್ರಿಯ ಪ್ರಕರಣಗಳು ಮತ್ತು ತೀವ್ರ ನಿಗಾ ಘಟಕದಲ್ಲಿರುವಂತಹ ಪ್ರಕರಣಗಳು ಆಧಾರವಾಗಿರಬೇಕು. ಇದರಡಿಯಲ್ಲಿ ಉತ್ತರ ಪ್ರದೇಶಕ್ಕೆ ನೀಡಿರುವ ಆದ್ಯತೆಯನ್ನು ಕರ್ನಾಟಕಕ್ಕೆ ಅತಿಮುಖ್ಯವಾಗಿ ಬೆ೦ಗಳೂರು ನಗರಕ್ಕೆ ನೀಡಬೇಕಿದೆ. ಆದರೆ ಉತ್ತರ ಪುದೇಶಕ್ಕೆ ಸುಮಾರು 1630 ಮೆಟ್ರಿಕ್‌ ಟನ್‌ ಆಮ್ಲಜನಕ ನೀಡಲಾಗಿದೆ. ಕರ್ನಾಟಕಕ್ಕೆ 120 ಮೆ. ಟನ್‌ ನೀಡಿದ್ದಾರೆ. ಇದು ಮೇಲ್ನೋಟಕ್ಕೆ ಕರ್ನಾಟಕದೆಡೆಗೆ ಕೇಂದ್ರ ಸರ್ಕಾರ ಹೊಂದಿರುವ ಅಸಡ್ಡೆಯ ಧೋರಣೆ ಎತ್ತಿ ತೋರುತ್ತದೆ ಎಂದು ವಕೀಲರಾದ ಕೆಬಿಕೆ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆ೦ಗಳೂರು, ಮ೦ಡ್ಯ, ಚಾಮರಾಜನಗರ, ಬಾಗಲಕೋಟೆ, ದಾವಣಗೆರೆ ಸೇರಿದ೦ತೆ ರಾಜ್ಯದ ಹಲವೆಡೆ ಆಕ್ಸಿಜನ್‌ ಕೊರತೆಯಿ೦ದಾಗಿ ಕೋವಿಡ್‌ ಪೀಡಿತ ರೋಗಿಗಳು ಜೀವನ್ಮರಣ ಹೋರಾಟಕ್ಕಿಳಿದಿದ್ದಾರೆ. ಆದರೂ ಬೇಡಿಕೆಗೆ ತಕ್ಕ೦ತೆ ರಾಜ್ಯಕ್ಕೆ ಆಕ್ಸಿಜನ್‌ ಲಭ್ಯವಾಗುತ್ತಿಲ್ಲ.

ಬಾಗಲಕೋಟಿ ಜಿಲ್ಲೆಗೆ ಪ್ರತಿನಿತ್ಯ 17 ಸಾವಿರ ಲೀಟರ್‌ ಆಕ್ಸಿಜನ್‌ ಅಗತ್ಯವಿದ್ದು, ಈಗ ಪ್ರತಿದಿನ 7.5 ಸಾವಿರ ಲೀಟರ್‌ ಆಕ್ಸಿಜನ್‌ ಅಷ್ಟೇ ಪೂರೈಕೆಯಾಗುತ್ತಿದೆ. ರೋಗಿಗಳು ಆಕ್ಸಿಜನ್‌ ಸಿಗದೆ ನರಳಿ ಪ್ರಾಣ ಬಿಡುತ್ತಿದ್ದಾರೆ ಎ೦ದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್‌ ಅವರು ಇತ್ತೀಚೆಗಷ್ಟೇ ಟ್ವೀಟ್‌ ಮಾಡಿದ್ದರು.

ಕೃಪೆ: ದಿ ಫೈಲ್‌

ಇದನ್ನೂ ಓದಿ: ನಿರಂತರ ಮನವಿಗೆ ಸ್ಪಂದಿಸದ ಮೋದಿ – ಯೋಗಿ; ಕೊರೊನಾದಿಂದ RSS ಕಾರ್ಯಕರ್ತ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights